ADVERTISEMENT

ದಬಾಂಗ್‌ 3: ಇದು ಕನ್ನಡದ್ದೇ ಸಿನಿಮಾ ಎಂದ ಕಿಚ್ಚ!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 5:44 IST
Last Updated 18 ಡಿಸೆಂಬರ್ 2019, 5:44 IST
ಸಲ್ಮಾನ್‌ ಖಾನ್
ಸಲ್ಮಾನ್‌ ಖಾನ್   

ಸಲ್ಮಾನ್‌ ಖಾನ್‌ ಮತ್ತು ಸುದೀಪ್‌ ಅಭಿನಯದ ‘ದಬಾಂಗ್‌ 3’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಬಾಲಿವುಡ್‌ನ ಈ ಸಿನಿಮಾ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಇದು ಕನ್ನಡಕ್ಕೆ ಡಬ್ ಆಗಿರುವ ಸಿನಿಮಾ.

ಆದರೆ, ಸುದೀಪ್ ಮತ್ತು ಸಲ್ಮಾನ್‌ ಅವರು ಈ ಚಿತ್ರವನ್ನು ‘ಇದು ಕನ್ನಡದ್ದೇ ಸಿನಿಮಾ; ಹಿಂದಿ ಸಿನಿಮಾ ಎಂದು ಭಾವಿಸಬೇಕಿಲ್ಲ’ ಎಂದು ಹೇಳುತ್ತಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಸಲ್ಮಾನ್–ಸುದೀಪ್ ಜೋಡಿಯು ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಆಯೋಜಿಸಿತ್ತು.

‘ಸಲ್ಮಾನ್ ಅವರು ತಾವು ನಾಯಕ ಆಗಿ ನಟಿಸಿದ ಸಿನಿಮಾಕ್ಕೆ ಪ್ರಚಾರ ನೀಡುವ ಒಂದೇ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದಿಲ್ಲ. ಸಲ್ಮಾನ್‌ ಅವರು ಈ ಚಿತ್ರವನ್ನು ಕನ್ನಡದ್ದೇ ಒಂದು ಸಿನಿಮಾ ಎಂಬಂತೆ ಸಿದ್ಧಪಡಿಸಿದ್ದಾರೆ. ಇದು ಹಿಂದಿ ಸಿನಿಮಾ ಅಲ್ಲ; ಇದು ಕನ್ನಡದ ಸಿನಿಮಾ’ ಎಂದರು ಸುದೀಪ್.

ADVERTISEMENT

ಈ ನಿಲುವಿಗೆ ಪೂರಕವಾಗಿ ಮಾತನಾಡಿದರು ಸಲ್ಮಾನ್. ‘ಹಿಂದಿ ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತವೆ. ಆದರೆ, ಹಿಂದಿ ಗೊತ್ತಿಲ್ಲದವರೂ ಈ ಚಿತ್ರವನ್ನು ವೀಕ್ಷಿಸಲಿ ಎಂಬ ಕಾರಣಕ್ಕೆ ನಾವು ಇದನ್ನು ಕನ್ನಡಕ್ಕೆ ಡಬ್ ಮಾಡುವ ತೀರ್ಮಾನ ಕೈಗೊಂಡೆವು. ಇದು ಸುದೀಪ್ ಅವರ ಸಿನಿಮಾ’ ಎಂದರು. ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಬೇಕು ಎಂದು ತೀರ್ಮಾನಿಸಿದ್ದು ಸಲ್ಮಾನ್‌.

ಈ ಚಿತ್ರದ ಕನ್ನಡ ಆವೃತ್ತಿಯ ಟ್ರೇಲರ್‌ಗೆ ಸಲ್ಮಾನ್‌ ಅವರು ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಅದರ ಹಿನ್ನೆಲೆ ಕುರಿತೂ ಸುದೀಪ್‌ ಅವರು ಒಂದಿಷ್ಟು ವಿವರಣೆ ನೀಡಿದರು. ‘ನಾವು ಚಿತ್ರದ ಚಿತ್ರೀಕರಣದಲ್ಲಿ ಇದ್ದೆವು. ಆ ಹೊತ್ತಿಗೆ ಇದನ್ನು ಕನ್ನಡದಲ್ಲಿ ಡಬ್ ಮಾಡಬೇಕು ಎಂದು ತೀರ್ಮಾನಿಸಿ ಆಗಿತ್ತು. ಚಿತ್ರೀಕರಣದ ನಡುವೆ ಸಲ್ಮಾನ್ ಅವರು ಯಾರಿಗೂ ಹೇಳದೆ, ಹದಿನೈದು ನಿಮಿಷ ಮಾಯವಾದರು. ಅವರು ಎಲ್ಲಿಗೆ ಹೋದರು ಎಂಬುದು ನಮಗೆ ಗೊತ್ತಿರಲಿಲ್ಲ. ಅವರು ಕನ್ನಡದಲ್ಲಿ ತಾವು ಹೇಳಬೇಕಾದ ಮಾತುಗಳನ್ನು ಆ ಅವಧಿಯಲ್ಲಿ ಅಭ್ಯಾಸ ಮಾಡಿ, ಕನ್ನಡ ಟ್ರೇಲರ್‌ಗೆ ದನಿ ನೀಡಿದ್ದರು’ ಎಂದು ಸುದೀ‍ಪ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.