ADVERTISEMENT

‘ಸಾರಥಿ’ಯ ಆರೈಕೆ ಮಾಡಿದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 8:20 IST
Last Updated 13 ಜೂನ್ 2020, 8:20 IST
ಕುದುರೆಯ ಆರೈಕೆಯಲ್ಲಿ ತೊಡಗಿರುವ ದರ್ಶನ್
ಕುದುರೆಯ ಆರೈಕೆಯಲ್ಲಿ ತೊಡಗಿರುವ ದರ್ಶನ್   

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ರಾಜ ವೀರಮದಕರಿ ನಾಯಕ’ ಚಿತ್ರದ ಶೂಟಿಂಗ್‌ಗೆ ಕೊರೊನಾ ಬಿಸಿ ತಟ್ಟಿದೆ. ಕೇರಳದ ಚಾಲುಕುಡಿ ಜಲಪಾತ ಪ್ರದೇಶದಲ್ಲಿ ಮೊದಲ ಹಂತದ ಶೂಟಿಂಗ್‌ ಪೂರ್ಣಗೊಳಿಸಿದ್ದ ಚಿತ್ರತಂಡ ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ದ್ವಿತೀಯ ಹಂತದ ಶೂಟಿಂಗ್ ಸಿದ್ಧತೆ ನಡೆಸಿತ್ತು. ಅದೇ ವೇಳೆಗೆ ಲಾಕ್‌ಡೌನ್‌ ಹೇರಿಕೆಯಾದ ಪರಿಣಾಮ ಶೂಟಿಂಗ್ ಸ್ಥಗಿತಗೊಂಡಿತು.

ಅಂದಹಾಗೆ ಇದು ಎಸ್.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸುತ್ತಿರುವ ಸಾಹಿತಿ ಬಿ.ಎಲ್‌. ವೇಣು ಅವರ ಕಾದಂಬರಿ ಆಧಾರಿತ ಚಿತ್ರ. ರಾಕ್‌ಲೈನ್‌ ವೆಂಕಟೇಶ್‌ ಇದಕ್ಕೆ ಬಂಡವಾಳ ಹೂಡಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ‘ಚಾಲೆಂಜಿಂಗ್‌ ಸ್ಟಾರ್‌’ ಮೈಸೂರು ಸಮೀಪದ ಟಿ. ನರಸೀಪುರದ ರಸ್ತೆ ಮಾರ್ಗದಲ್ಲಿರುವ ತೂಗುದೀಪ‍ ಫಾರಂಹೌಸ್‌ನಲ್ಲಿ ಕಾಲ ದೂಡುತ್ತಿದ್ದಾರೆ. ದಚ್ಚು ಪ್ರಾಣಿಪ್ರಿಯರು ಹೌದು. ಜೊತೆಗೆ, ವನ್ಯಜೀವಿ ಛಾಯಾಗ್ರಾಹಕ. ಅವರು ಕರ್ನಾಟಕ ಸೇರಿದಂತೆ ದೇಶ, ವಿದೇಶಗಳ ಕಾಡಿನಲ್ಲಿ ಕ್ಲಿಕ್ಕಿಸಿದ ಫೋಟೊಗಳು ಜನರು ಮತ್ತು ಅವರ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದಿವೆ.

ADVERTISEMENT

ಅಂದಹಾಗೆ ದರ್ಶನ್‌ಗೆ ಕುದುರೆಗಳೆಂದರೆ ಅಚ್ಚುಮೆಚ್ಚು. ಕುದುರೆ ಸವಾರಿ ಎಂದರೆ ಪಂಚಪ್ರಾಣ. ಅವುಗಳ ಲಾಲನೆ, ಪಾಲನೆಗೂ ಅಷ್ಟೇ ಒತ್ತು ನೀಡುತ್ತಾರೆ. ಕೆಲವು ತಿಂಗಳ ಹಿಂದೆ ಫಾರಂಹೌಸ್‌ನಲ್ಲಿ ತಮ್ಮ ಪುತ್ರನಿಗೂ ಅವರು ಕುದುರೆ ಸವಾರಿಯ ಪಟ್ಟುಗಳನ್ನು ಹೇಳಿಕೊಡುತ್ತಿದ್ದ ವಿಡಿಯೊ ವೈರಲ್‌ ಆಗಿತ್ತು.

ಅವರ ಫಾರಂಹೌಸ್‌ನಲ್ಲಿ ಸಾಕಷ್ಟು ಕುದುರೆಗಳನ್ನು ಸಾಕಿದ್ದಾರೆ. ವಿವಿಧ ಪ್ರಭೇದಕ್ಕೆ ಸೇರಿದ ಪ್ರಾಣಿ– ಪಕ್ಷಿಗಳೂ ಇವೆ. ಲಾಕ್‌ಡೌನ್‌ನಿಂದಾಗಿ ಫಾರಂಹೌಸ್‌ನಲ್ಲಿಯೇ ವಾಸ್ತವ್ಯ ಹೂಡಿರುವ ದಚ್ಚು, ಕುದುರೆಗಳ ಆರೈಕೆಯಲ್ಲಿ ತೊಡಗಿದ್ದಾರೆ. ಈ ಸಂಬಂಧ ಅವರ ಅಭಿಮಾನಿಗಳು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫೋಟೊಗಳು ಈಗ ವೈರಲ್‌ ಆಗಿವೆ.

‘ಮೈಸೂರಿನ ತೂಗುದೀಪ ಫಾರಂಹೌಸ್‌ನಲ್ಲಿ ಚಾಮುಂಡೇಶ್ವರಿ ತಾಯಿಯ ವರಪುತ್ರ - ಪ್ರಾಣಿ ಪ್ರಿಯ, ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್’ ದಾಸ Darshan Thoogudeepa Srinivas ಬಾಸ್ ರವರು ತಮ್ಮ #ಸಾರಥಿಯನ್ನು ಕೇರ್ ಮಾಡುತ್ತಿರುವ ಕ್ಷಣಗಳು’ ಎಂದು ದರ್ಶನ್‌ ಅವರ ಅಧಿಕೃತ ಫ್ಯಾನ್‌ ಕ್ಲಬ್‌ನಲ್ಲಿ ಅವರ ಅಭಿಮಾನಿಗಳು ಪೋಟೊಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.