ಬೆಂಗಳೂರು: ತುಳು ಚಿತ್ರರಂಗದಲ್ಲಿ ಈಗಾಗಲೇ ಸಂಚಲನ ಮೂಡಿಸಿರುವ ಸಿನಿಮಾ ದಸ್ಕತ್. ಇದೀಗ ಜ.11, 12 (ಶನಿವಾರ ಮತ್ತು ಭಾನುವಾರ) ಬೆಂಗಳೂರಿನ ತುಳುವರಿಗಾಗಿ ಪ್ರದರ್ಶನ ಆಯೋಜಿಸಲಾಗಿದೆ.
ಬಹುತೇಕ ಹೊಸಬರು ಎಂದರೆ ಚಿತ್ರರಂಗದ ಅನುಭವವಿಲ್ಲದವರೇ ಇರುವ ಈ ತುಳು ಭಾಷಾ ಚಲನಚಿತ್ರವು ಕರಾವಳಿಯ ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಸುಂದರವಾಗಿ ನಿರೂಪಿಸಿದೆ. ರಾಘವೇಂದ್ರ ಕುಡ್ವ ನಿರ್ಮಾಣದಲ್ಲಿ ರೂಪುಗೊಂಡಿರುವ ಈ ಚಲನಚಿತ್ರವು ಶನಿವಾರ ಸಂಜೆ 7.30 ಹಾಗೂ ಜ.12ರ ಭಾನುವಾರದಂದು ಬೆ.11, ಮಧ್ಯಾಹ್ನ 2.30 ಹಾಗೂ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ.
ಕರಾವಳಿಯ ಚಿತ್ರಪ್ರೇಮಿಗಳಿಗಾಗಿ ಮತ್ತು ತುಳು ಸಂಸ್ಕೃತಿಯನ್ನು ಅರಿಯುವ ಮನಸ್ಸುಳ್ಳ ಎಲ್ಲರಿಗಾಗಿ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ. ರಾಜ್‌ಕುಮಾರ್ ಭವನದ ಡಾ.ಅಂಬರೀಷ್ ಆಡಿಟೋರಿಯಂನಲ್ಲಿ ಚಲನಚಿತ್ರದ ಪ್ರದರ್ಶನ ಏರ್ಪಾಟಾಗಿದೆ.
ತಂತ್ರಜ್ಞಾನ, ಕ್ಯಾಮರಾ, ನಟ ನಟಿಯರು, ನಿರ್ಮಾಪಕ, ವ್ಯವಹಾರ, ಕಲಾತ್ಮಕತೆ, ಆರ್ಥಿಕ ಲಾಭ ಎಲ್ಲವನ್ನೂ ಲೆಕ್ಕಾಚಾರ ಮಾಡುವ ಈ ದಿನಗಳಲ್ಲಿ, ಅದೂ ತುಳು ಭಾಷೆಯಲ್ಲಿ ಒಂದು ವಿಶಿಷ್ಟ ಬಗೆಯ ಪ್ರಯತ್ನ ನಡೆದಿದೆ. ಮತ್ತು ಆ ಬಗೆಯ ಕುತೂಹಲಿಗಳನ್ನು ನೋಡುವಂತೆ ಒತ್ತಾಯಿಸುತ್ತಿದೆ ಎಂದು ಸಾಹಿತಿ ಬೊಳುವಾರ್ ಮಹಮ್ಮದ್ ಕುಂಞಿ ಅವರು ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗ್ರಾಮೀಣ ಬದುಕಿನ ನೂರಾರು ಸಂಗತಿಗಳನ್ನು ಆಯ್ದುಕೊಂಡು ಅವುಗಳನ್ನು ಬಿಡಿಬಿಡಿಯಾಗಿ ಬಿಡಿಸಿಕೊಂಡು ಒಂದೊಂದು ಸಂಗತಿಯನ್ನೂ ರೂಪಕದ ಹಾಗೆ ಸೃಷ್ಟಿಸುತ್ತಾ ಹೋಗಿದ್ದಾರೆ. ಪ್ರಮುಖ ಕಥಾ ಪಾತ್ರವೊಂದು ನಾಯಕನೂ ಅಲ್ಲದ ಖಳನೂ ಅಲ್ಲದ ಮತ್ತು ಅದು ಎರಡೂ ಆಗಿರುವ ನಟನೊಬ್ಬನ ನಟನಾಶಕ್ತಿಯನ್ನು ಈ ಸಿನಿಮಾದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ ಎಂದು ವಿಮರ್ಶಿಸಿದ್ದಾರೆ.
ಈಗಾಗಲೇ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ತುಳು ಭಾಷೆಯ ವೈವಿಧ್ಯವೂ ಈ ಚಿತ್ರದ ಮೂಲಕ ಬಿಂಬಿತವಾಗಿದೆ. ದಸ್ಕತ್ ಚಿತ್ರಕ್ಕೆ ಅನೀಶ್ ಪೂಜಾರಿ ವೇಣೂರು ನಿರ್ದೇಶನ ಮಾಡಿದ್ದು, ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಛಾಯಾಗ್ರಹಣ ಗಮನ ಸೆಳೆದಿದೆ. ಸಮರ್ಥನ್ ಎಸ್.ರಾವ್ ಸಂಗೀತವಿದ್ದು, ಹೊಸಬರ ನಟನೆಯಲ್ಲಿ ಸುಂದರವಾಗಿ ಮೂಡಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.