ADVERTISEMENT

23 ವರ್ಷವಾದರೂ ನೀಗದ ದಾಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 19:30 IST
Last Updated 28 ಅಕ್ಟೋಬರ್ 2018, 19:30 IST
ಡಿಡಿಎಲ್‌ಜೆಯಲ್ಲಿ ಕಾಜೋಲ್ ಹಾಗೂ ಶಾರುಖ್
ಡಿಡಿಎಲ್‌ಜೆಯಲ್ಲಿ ಕಾಜೋಲ್ ಹಾಗೂ ಶಾರುಖ್   

ನಟ ಶಾರುಖ್ ಖಾನ್ ಹಾಗೂ ನಟಿ ಕಾಜೋಲ್ ಅಭಿನಯದ‘ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ’ (ಡಿಡಿಎಲ್‌ಜೆ) ಭಾರತೀಯ ಸಿನಿ ರಂಗದಲ್ಲಿ ಹೊಸ ಭಾಷ್ಯ ಬರೆದಂತಹ ಸಿನಿಮಾ. ಮುಂಬೈನ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ಇಂದಿಗೂ ಆ ಚಿತ್ರ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಅಂದಹಾಗೇ, ಈ ಸಿನಿಮಾ ತೆರೆಕಂಡು ಈಚೆಗೆ (ಅಕ್ಟೋಬರ್ 19ಕ್ಕೆ) 23 ವರ್ಷಗಳು ಆಗಿವೆ.

ಈ ಸಂಬಂಧ ನಟ ಶಾರುಖ್ ಖಾನ್, ‘23 ವರ್ಷಗಳ ಹಿಂದೆ ಶುರುವಾದ ವಿಶೇಷ ಯಾನ ಇಂದಿಗೂ ಮುನ್ನಡೆಯುತ್ತಲೇ ಇದೆ. ನಿಮ್ಮ (ಅಭಿಮಾನಿಗಳ) ಪ್ರೀತಿಯು ರಾಜ್ ಮತ್ತು ಸಿಮ್ರಾನ್ ಪ್ರೇಮಕಥೆಯನ್ನು ಇಂದಿಗೂ ಜೀವಂತವಾಗಿಟ್ಟಿದೆ. ನಿರಂತರವಾಗಿ 1,200 ವಾರಗಳು ತೆರೆಕಂಡ ಚಿತ್ರ ನಿಲ್ಲದೇ ಮುನ್ನುಗ್ಗುತ್ತಿದೆ. ಹಲವು ವರ್ಷಗಳಿಂದ ನಮ್ಮ ಸಿನಿಮಾದ ಮೇಲೆ ಪ್ರೀತಿ ಇಟ್ಟಿರುವುದಕ್ಕೆ ಎಲ್ಲರಿಗೂ ಧನ್ಯವಾದ’ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನಟಿ ಕಾಜೋಲ್ ಸಹ ಟ್ವಿಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದು,‘ಡಿಡಿಎಲ್‌ಜೆ 1,200 ವಾರಗಳ ಯಶಸ್ವಿ ಪ್ರದರ್ಶನ ಕಂಡು ಮುನ್ನಡೆಯುತ್ತಿದೆ. ಹಲವು ವರ್ಷಗಳ ಕಾಲ ಚಿತ್ರದ ಬಗ್ಗೆ ಇಷ್ಟೊಂದು ಪ್ರೀತಿ ತೋರಿಸುತ್ತಿರುವುದಕ್ಕೆ ಅಭಿಮಾನಿಗಳಿಗೆ ಧನ್ಯವಾದ. ಚಿತ್ರ ಹಿಂದೆ, ಈಗ ಹಾಗೂ ಯಾವಾಗಲೂ ನಮ್ಮೆಲ್ಲರಿಗೂ ವಿಶೇಷವಾಗಿಯೇ ಇರಲಿದೆ’ ಎಂದಿದ್ದಾರೆ.

ADVERTISEMENT

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತೆರೆಕಂಡ ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದರು. ಅವರ ನಿರ್ದೇಶನದ ಮೊದಲ ಸಿನಿಮಾವೂ ಇದೇ ಆಗಿದೆ. ಈ ಚಿತ್ರ ದೇಶದೆಲ್ಲೆಡೆ ಬಹುದೊಡ್ಡ ಅಲೆಯನ್ನು ಸೃಷ್ಟಿಸಿತ್ತು. ಸುಂದರ, ಮುಗ್ದ ಹಾಗೂ ಪ್ರೀತಿ ಪಾತ್ರದ ಜೋಡಿಯಾಗಿ ಶಾರುಖ್ ಹಾಗೂ ಕಾಜೋಲ್ ಅವರು ರಾಜ್ ಮತ್ತು ಸಿಮ್ರಾನ್ ಪಾತ್ರಗಳಲ್ಲಿ ಮಿಂಚಿದ್ದರು.

ಉತ್ತಮ ಸಿನಿಮಾ, ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ ಸೇರಿದಂತೆ ಒಟ್ಟು ಹತ್ತು ವಿಭಾಗಗಳಲ್ಲಿ ಈ ಚಿತ್ರವು 1996ರ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಎನೇ ಆದರೂ, ಅಭಿಮಾನಿಗಳಿಗೆ ಡಿಡಿಎಲ್‌ಜೆ ನೋಡುವ ದಾಹ ಇನ್ನೂ ನೀಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.