ವಿಷ್ಣುವರ್ಧನ್, ಕಿಚ್ಚ ಸುದೀಪ್
ಬೆಂಗಳೂರು: ಅಭಿಮಾನ್ ಸ್ಟುಡಿಯೊದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿ ತೆರವು ಮಾಡಿರುವ ಕ್ರಮಕ್ಕೆ ನಟ ಕಿಚ್ಚ ಸುದೀಪ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ,
ಈ ಕುರಿತು ತಮ್ಮ ಸಾಮಾಜಿಕ ತಾಣಗಳ ಖಾತೆಗಳಲ್ಲಿ ವಿಡಿಯೊ ಪೋಸ್ಟ್ ಹಾಗೂ ಬರವಣಿಗೆ ಪೋಸ್ಟ್ ಮಾಡಿರುವ ಅವರು, ಸಮಾಧಿ ತೆರವು ಮಾಡಿರುವುದು ಹೇಡಿತನದ ಕೃತ್ಯ ಎಂದು ಖಂಡಿಸಿದ್ದಾರೆ.
‘ಆಗಬಾರದ್ದು ಆಗಿ ಹೋಗಿದೆ. ಎಲ್ಲಾ ಮುಗಿದು ಹೋಗಿದೆ. ಸಮಾಧಿಯನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಮನವಿ ಮಾಡಿದ್ದೇವು. ಆ ಕೆಲಸ ಅಧಿಕಾರದಲ್ಲಿದ್ದವರಿಗೆ ಸಾಧ್ಯವಿತ್ತು. ಆದರೆ, ಆಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಸಮಾದಿ ತೆರವಿನಿಂದ ಎಲ್ಲರಿಗೂ ನೋವಾಗಿದೆ. ಆದರೆ, ಇಷ್ಟಕ್ಕೆ ಸುಮ್ಮನಾಗದೇ ನಾವೆಲ್ಲ ಮುಂದೆ ಹೋಗುವುದು ಉತ್ತಮ, ನಾವೇನು ಮಾಡಬೇಕು ಎಂಬುದನ್ನು ಚರ್ಚಿಸೋಣ. ಇನ್ನು ಯಾರ ಭಿಕ್ಷೆಯನ್ನೂ ಬೇಡುವುದು ಬೇಡ. ದೊಡ್ಡ ಪ್ರತಿಮೆ ಮಾಡೋಣ ಎಂಬ ಚರ್ಚೆಯಾಗಿದೆ. ಅದಕ್ಕೆ ನಾನು ಏನು ಮಾಡಬೇಕು ಅದನ್ನು ಮಾಡೇ ಮಾಡುತ್ತೇನೆ’ ಎಂದು ಸುದೀಪ್ ಬೇಸರಿಂದ ಹೇಳಿದ್ದಾರೆ.
ಸುದೀರ್ಘ ಬರವಣಿಗೆ ಪೋಸ್ಟ್‌ನಲ್ಲಿ ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ ಎಂದು ನೋವು ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆಒಂದು ಅವಕಾಶ ಮಾಡಿ ಕೊಡಿ ಎಂದು ಒತ್ತಾಯಿಸಿದ್ದಾರೆ.
ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವು ಮಾಡಿರುವ ಕ್ರಮಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ ಅಭಿಮಾನ್ ಸ್ಟುಡಿಯೊದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವು ಮಾಡಿರುವ ಕ್ರಮವನ್ನು ಖಂಡಿಸಿ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ.
ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವನ್ನು 2009ರಲ್ಲಿ ಅಭಿಮಾನ್ ಸ್ಟುಡಿಯೊದಲ್ಲಿ ನೆರವೇರಿಸಲಾಗಿತ್ತು. ಬಾಲಣ್ಣ ಅವರ ಕುಟುಂಬದವರು ಕೋರ್ಟ್ ಮೊರೆ ಹೋಗಿದ್ದರಿಂದ ಕೋರ್ಟ್ ಆದೇಶದ ಮೇರೆಗೆ ಸಮಾಧಿ ತೆರವು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.