ADVERTISEMENT

ಗರಡಿ ಮನೆವೊಕ್ಕಲು ಸಜ್ಜಾದ ಧನಂಜಯ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:45 IST
Last Updated 3 ಮಾರ್ಚ್ 2020, 19:45 IST
ಧನಂಜಯ್‌
ಧನಂಜಯ್‌   

‘ಡಾಲಿ’ ಖ್ಯಾತಿಯ ಧನಂಜಯ್‌ ಸೂಕ್ಷ್ಮ ಸಂವೇದನೆಯ ನಟ. ಪಾತ್ರಕ್ಕೆ ತಕ್ಕಂತೆ ತಯಾರಿ ನಡೆಸಿಯೇ ಅವರು ನಟನೆಯ ಅಖಾಡಕ್ಕೆ ಇಳಿಯುತ್ತಾರೆ. ಕೆ.ಎಂ. ಚೈತನ್ಯ ನಿರ್ದೇಶನದ ‘ಆ ದಿನಗಳು’ ಚಿತ್ರ ಬೆಂಗಳೂರಿನ ಭೂಗತಲೋಕದ ಡಾನ್ ಆಗಿದ್ದ ಕೊತ್ವಾಲ್‌ ರಾಮಚಂದ್ರನ ಬದುಕನ್ನು ತೆರೆದಿಟ್ಟಿತ್ತು.

ಪ್ರಸ್ತುತ ಬೆಂಗಳೂರಿನ ಭೂಗತಲೋಕದ ಮತ್ತೊಬ್ಬ ಡಾನ್‌ ಆಗಿದ್ದ ಎಂ.‍ಪಿ. ಜಯರಾಜ್‌ ಕುರಿತ ಸಿನಿಮಾ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಶೂನ್ಯ ನಿರ್ದೇಶನದ ಈ ಚಿತ್ರಕ್ಕೆ ಆಶು ಬೆದ್ರ ಬಂಡವಾಳ ಹೂಡುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ನೊಗ ಹೊತ್ತಿರುವುದು ಅಗ್ನಿ ಶ್ರೀಧರ್. ಅಂದಹಾಗೆ ಜಯರಾಜ್‌ ಪಾತ್ರದಲ್ಲಿ ಧನಂಜಯ್‌ ಬಣ್ಣ ಹಚ್ಚಲಿದ್ದಾರೆ. ಈ ಪಾತ್ರಕ್ಕೆ ಅವರು ಈಗಾಗಲೇ ಸಿದ್ಧತೆಯನ್ನೂ ಆರಂಭಿಸಿದ್ದಾರೆ.

ಜಯರಾಜ್‌ ಯಂಗ್‌ ಆಗಿದ್ದಾಗ ಗರಡಿ ಮನೆಯಲ್ಲಿ ಬೆವರು ಇಳಿಸುತ್ತಿದ್ದ. ಈ ಸಿನಿಮಾದಲ್ಲಿ ಧನಂಜಯ್‌ ಕೂಡ ಜಯರಾಜ್‌ ಅವರ ಯಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅದಕ್ಕಾಗಿ ಅವರು ಗರಡಿ ಮನೆವೊಕ್ಕಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನ ಖ್ಯಾತ ಪೈಲ್ವಾನ್‌ ಬಳಿ ಅವರು ಕುಸ್ತಿಯ ಪಟ್ಟುಗಳನ್ನು ಅರಿಯಲು ಮುಂದಾಗಿದ್ದಾರೆ.

ADVERTISEMENT

‘ಜಯರಾಜ್‌ ವ್ಯಕ್ವಿತ್ವದ ಬಗ್ಗೆ ಅಗ್ನಿ ಶ್ರೀಧರ್‌ ಮತ್ತು ಸೈಯದ್‌ ಅಮಾನ್‌ ಬಚ್ಚನ್‌ ಅವರ ಬಾಯಲ್ಲಿ ಕೇಳುತ್ತಿದ್ದೇನೆ. ಸಮಯ ಸಿಕ್ಕಿದಾಗಲೆಲ್ಲಾ ಈ ಕೆಲಸ ಮಾಡುತ್ತಿರುವೆ. ಇದರಿಂದ ನಾನು ಆ ಪಾತ್ರದ ಪರಕಾಯ ಪ್ರವೇಶ ಮಾಡಲು ಸಾಧ್ಯವಾಗಲಿದೆ. ಜೊತೆಗೆ, ಅಗ್ನಿ ಶ್ರೀಧರ್‌ ಬರೆದಿರುವ ‘ದಾದಾಗಿರಿಯ ದಿನಗಳು’ ಪುಸ್ತಕವನ್ನೂ ಓದಲು ನಿರ್ಧರಿಸಿದ್ದೇನೆ’ ಎಂದು ಧನಂಜಯ್‌ ‘ಪ್ರಜಾಪ್ಲಸ್‌’ಗೆ ಮಾಹಿತಿ ನೀಡಿದರು.

‘ಈಗಾಗಲೇ, ಪಾತ್ರಕ್ಕೆ ತಕ್ಕಂತೆ ಜಿಮ್‌ನಲ್ಲಿ ಕಸರತ್ತು ಶುರು ಮಾಡಿದ್ದೇನೆ. ಜಯರಾಜ್‌ ಪೈಲ್ವಾನ್‌ ಆಗಿದ್ದ. ಜಟ್ಟಿಯತೆ ನಾನೂ ಸಿದ್ಧನಾಗಬೇಕಿದೆ. ಇದಕ್ಕಾಗಿ ಮೂರು ತಿಂಗಳು ಸಮಯ ಕೇಳಿದ್ದೇನೆ’ ಎನ್ನುತ್ತಾರೆ.

ಸೂರಿ ನಿರ್ದೇಶನದ ‘ಪಾಪ್‌ಕಾರ್ನ್‌ ಮಂಕಿ ಟೈಗರ್’ ಚಿತ್ರಕ್ಕೆ ಜನರಿಂದ ಸಿಕ್ಕಿರುವ ಪ್ರತಿಕ್ರಿಯೆಗೆ ಧನಂಜಯ್‌ ಖುಷಿಯಾಗಿದ್ದಾರೆ. ‘ಇದು ನನ್ನ ವೃತ್ತಿಬದುಕಿನ ದೊಡ್ಡ ಒಪನಿಂಗ್‌ ಸಿನಿಮಾ. ಮೊದಲ ದಿನವೇ ಸಿನಿಮಾಕ್ಕೆ ಪ್ರೇಕ್ಷಕರ ದಂಡು ನುಗ್ಗಿದ್ದು ಖುಷಿ ಕೊಟ್ಟಿತು’ ಎನ್ನುತ್ತಾರೆ.

ಧನಂಜಯ್‌ ನಾಯಕರಾಗಿರುವ ‘ಬಡವ ರಾಸ್ಕಲ್‌’ ಚಿತ್ರ ಕ್ಲೈಮ್ಯಾಕ್ಸ್‌ ಹಂತದಲ್ಲಿದೆ. ಬೆಂಗಳೂರಿನಲ್ಲಿ ಅಂತಿಮ ಹಂತದ ಶೂಟಿಂಗ್‌ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇದರಲ್ಲಿ ಐದು ಹಾಡುಗಳಿವೆ. ಗುಜ್ಜಲ್‌ ಪುರುಷೋತ್ತಮ್‌ ಮತ್ತು ಧನಂಜಯ್‌ ಅವರೇ ಇದಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.