ADVERTISEMENT

ನಟ ಧನುಷ್‌ಗೆ ಹೈಕೋರ್ಟ್‌ ತರಾಟೆ

ಐಷಾರಾಮಿ ಕಾರಿಗೆ ಪ್ರವೇಶ ತೆರಿಗೆ ವಿನಾಯಿತಿ ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 19:47 IST
Last Updated 5 ಆಗಸ್ಟ್ 2021, 19:47 IST
ಧನುಷ್‌
ಧನುಷ್‌   

ಚೆನ್ನೈ: ಐಷಾರಾಮಿ ಕಾರಿಗೆ ಪ್ರವೇಶ ತೆರಿಗೆ ವಿಧಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ನಟ ಧನುಷ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ ಗುರುವಾರ ತರಾಟೆಗೆ ತೆಗೆದುಕೊಂಡಿದೆ.

‘ಕಡಿಮೆ ಆದಾಯ ಹೊಂದಿರುವವರು ಪ್ರಾಮಾಣಿಕವಾಗಿ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಈ ವರ್ಗದವರು ತೆರಿಗೆ ವಿನಾಯಿತಿಗಾಗಿ ನ್ಯಾಯಾಲಯದ ಮೊರೆ ಹೋಗುವುದಿಲ್ಲ’ ಎಂದು
ಹೇಳಿದೆ.

‘ತೆರಿಗೆದಾರರ ಹಣ ಬಳಸಿ ನಿರ್ಮಿಸಿರುವ ರಸ್ತೆಯಲ್ಲಿ ನೀವು ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತೀರಿ. ಹಾಲು ಹಾಕುವವರು ಮತ್ತು ದಿನಗೂಲಿ ಕಾರ್ಮಿಕರರು ಸಹ ಪ್ರತಿ ಲೀಟರ್‌ ಪೆಟ್ರೋಲ್‌ ಖರೀದಿಸಿದ್ದಕ್ಕೆ ತೆರಿಗೆ ಪಾವತಿಸುತ್ತಾರೆ. ಇಂತಹ ತೆರಿಗೆಗಳಿಂದ ವಿನಾಯಿತಿ ನೀಡಬೇಕು ಎಂದು ಕೋರಿ ಇವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ’ ಎಂದು ನ್ಯಾಯಮೂರ್ತಿ ಎಸ್‌.ಎಂ. ಸುಬ್ರಮಣಿಯಂ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘48 ಗಂಟೆಗಳಲ್ಲಿ ಬಾಕಿ ಉಳಿದಿರುವ ₹30.30 ಲಕ್ಷ ಪ್ರವೇಶ ತೆರಿಗೆಯನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಪಾವತಿಸಬೇಕು’ ಎಂದು ಅವರು ನಿರ್ದೇಶನ ನೀಡಿದ್ದಾರೆ.

ಧನುಷ್‌ ಅವರು ಈ ಮೊದಲು ಪ್ರವೇಶ ತೆರಿಗೆ ಮೊತ್ತವಾದ ₹60.60 ಲಕ್ಷದ ಅರ್ಧದಷ್ಟು ಮೊತ್ತವನ್ನು ಇಲಾಖೆಗೆ ಪಾವತಿಸಿದ್ದರು.

ಇಂಗ್ಲೆಂಡ್‌ನಿಂದ 2015ರಲ್ಲಿ ಆಮದು ಮಾಡಿಕೊಂಡಿದ್ದ ₹2.15 ಕೋಟಿ ಮೌಲ್ಯದ ಐಷಾರಾಮಿ ‘ರೋಲ್ಸ್‌ ರಾಯ್ ಘೋಸ್ಟ್‘ ಕಾರಿಗೆ ಪ್ರವೇಶ ತೆರಿಗೆ ವಿಧಿಸಿರುವುದನ್ನು ಪ್ರಶ್ನಿಸಿ ನಟ ಧನುಷ್‌ ರಿಟ್‌ ಅರ್ಜಿ ಸಲ್ಲಿಸಿದ್ದರು.

ಇದೇ ರೀತಿಯಲ್ಲಿ ನಟ ವಿಜಯ್‌ ಅವರು ಸಹ ಇತ್ತೀಚೆಗೆ ನ್ಯಾಯಾಲಯದಿಂದ ತರಾಟೆಗೆ ಒಳಗಾಗಿದ್ದರು. ಆಮದು ಮಾಡಿಕೊಂಡಿದ್ದ ಐಷಾರಾಮಿ ‘ರೋಲ್ಸ್‌ ರಾಯ್‘ ಕಾರಿಗೆ ಹೆಚ್ಚು ಪ್ರವೇಶ ತೆರಿಗೆ ವಿಧಿಸಲಾಗಿದೆ ಎಂದು ಪ್ರಶ್ನಿಸಿ ಅವರು ಸಹ ರಿಟ್‌ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.