
ನವದೆಹಲಿ: ನಟ ಧರ್ಮೇಂದ್ರ ಅವರ ನಿಧನದ ನಂತರ ಅವರ ಪತ್ನಿ ಹೇಮಾಮಾಲಿನಿಯನ್ನು ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಸೋಮವಾರ ಭೇಟಿಮಾಡಿದ್ದಾರೆ.
ಧರ್ಮೇಂದ್ರ ಅವರು ನ.24ರಂದು ನಿಧನ ಹೊಂದಿದ್ದರು. ಧರ್ಮೇಂದ್ರ ಹಾಗೂ ಹೇಮಾಮಾಲಿನಿಯ ಗೆಳೆಯರಾಗಿರುವ ಶತ್ರುಘ್ನ ಸಿನ್ಹಾ, ಇತ್ತೀಚೆಗೆ ಅವರಿಬ್ಬರ ಜೊತೆಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬ ಸ್ನೇಹಿತರಾದ ಹೇಮಾಮಾಲಿನಿಯನ್ನು ಭೇಟಿ ಮಾಡಿದೆ. ಹಿರಿಯಣ್ಣನಂತಿದ್ದ ಧರ್ಮೇಂದ್ರ ಅವರ ಸಾವಿನ ನಂತರ ಅವರನ್ನು ಭೇಟಿಯಾಗಿದ್ದು ಹೃದಯವಿದ್ರಾವಕವಾಗಿತ್ತು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಧರ್ಮೇಂದ್ರ ನಮ್ಮೊಂದಿಗೆ ಇಲ್ಲದೇ ಇರಬಹುದು, ಆದರೆ ಅವರ ನೆನಪುಗಳು ಯಾವಾಗಲೂ ಜೀವಂತವಾಗಿರುತ್ತವೆ ಎಂದು ಹೇಳಿದ್ದಾರೆ.
ಇದೇ ವೇಳೆ ಧರ್ಮೇಂದ್ರ ಹಾಗೂ ಹೇಮಾಮಾಲಿನಿ ದಂಪತಿಗಳ ಮಕ್ಕಳಾದ ಇಶಾ ಡಿಯೋಲ್ ಹಾಗೂ ಅಹಾನಾ ಡಿಯೋಲ್ ಅವರನ್ನು ಕೂಡ ಶತ್ರುಘ್ನ ಸಿನ್ಹಾ ಭೇಟಿಯಾಗಿದ್ದಾರೆ.
ಶತ್ರುಘ್ನ ಸಿನ್ಹಾ ಹಾಗೂ ಧರ್ಮೇಂದ್ರ ಅವರು ಜೊತೆಯಲ್ಲಿ ಬ್ಲಾಕ್‌ಮೇಲ್(1973), ಝಲ್ಜಾಲಾ (1988) ಸಿನಿಮಾಗಳಲ್ಲಿ ನಟಿಸಿದ್ದರು. ಸಿನ್ಹಾ ಹಾಗೂ ಹೇಮಾಮಾಲಿನಿ ಅವರು ಹಿರಾಸತ್ (1987) ಹಾಗೂ ಖೈದಿ (1984) ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 1974ರಲ್ಲಿ ತೆರೆಕಂಡ ‘ದೋಸ್ತ್’ ಸಿನಿಮಾದಲ್ಲಿ ಮೂವರು ಕೂಡ ಅಭಿನಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.