
ಮುಂಬೈ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರು ಇಂದು ಬೆಳಿಗ್ಗೆ(ಬುಧವಾರ) ಆಸ್ಪತ್ರೆಯಿಂದ ಬಿಡುಗಡೆಯಾದರು.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಕುಟುಂಬ ತಿಳಿಸಿದೆ.
‘ಧರ್ಮೇಂದ್ರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮನೆಯಲ್ಲಿಯೇ ಅವರ ಚಿಕಿತ್ಸೆ ಮುಂದುವರಿಯಲಿದೆ. ಈ ಸಮಯದಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ನಮ್ಮ ಕುಟುಂಬದ ಗೌಪತ್ಯೆಯನ್ನು ಗೌರವಿಸಿ’ ಎಂದು ಕುಟುಂಬವು ಮನವಿ ಮಾಡಿದೆ.
‘ನನ್ನ ತಂದೆಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞರಾಗಿದ್ದೇವೆ. ದಯವಿಟ್ಟು ಅವರನ್ನು ಗೌರವದಿಂದ ನೋಡಿ. ಏಕೆಂದರೆ ಅವರು ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ’ ಎಂದು ಧರ್ಮೇಂದ್ರ ಅವರ ಮಗ ಸನ್ನಿ ದೇವಲ್ ಹೇಳಿದ್ದಾರೆ.
‘ಧರ್ಮೇಂದ್ರ ಅವರನ್ನು ಬೆಳಿಗ್ಗೆ 7:30 ರ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕುಟುಂಬವು ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಿರುವುದರಿಂದ ಅಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುವುದು’ ಎಂದು ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಪ್ರತೀತ್ ಸಮದಾನಿ ಹೇಳಿದ್ದಾರೆ.
ಧರ್ಮೇಂದ್ರ ಅವರು ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಪತ್ನಿ ಹೇಮಾ ಮಾಲಿನಿ, ಮಗಳು ಇಶಾ ದೇವಲ್, ಸುಳ್ಳು ಸುದ್ದಿ ಹರಡದಂತೆ, ಕುಟುಂಬದ ಗೌಪತ್ಯೆ ಕಾಪಾಡುವಂತೆ ಮನವಿ ಮಾಡಿದ್ದರು.
ಏತನ್ಮಧ್ಯೆ, ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಆಸ್ಪತ್ರೆಗೆ ತೆರಳಿ ಹಿರಿಯ ನಟನ ಆರೋಗ್ಯ ವಿಚಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.