
ನಟ ಧರ್ಮೇಂದ್ರ
ಮುಂಬೈ: ಬಾಲಿವುಡ್‌ನ ಖ್ಯಾತ ನಟ, ಹೀ–ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದ ಧರ್ಮೇಂದ್ರ ಅವರು ಇಂದು (ಸೋಮವಾರ) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಈ ನಡುವೆ ಅವರು ನಟಿ ಹೇಮಾ ಮಾಲಿನಿಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರಾ? ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿವೆ.
ರಾಮ್ ಕಮಲ್ ಮುಖರ್ಜಿ ಬರೆದಿರುವ ಹೇಮಾ ಮಾಲಿನಿ ಅವರ ಜೀವನ ಚರಿತ್ರೆ 'ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್' ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಧರ್ಮೇಂದ್ರ ಅವರು ಪ್ರಕಾಶ್ ಕೌರ್‌ರನ್ನು (1954) ರಲ್ಲಿ ವಿವಾಹವಾಗಿದ್ದರು. ಹಾಗಾಗಿ ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮೊದಲ ಹೆಂಡತಿ ಇರುವಾಗ ಇನ್ನೊಂದು ಮದುವೆಯಾಗುವಂತಿರಲಿಲ್ಲ. ಹಾಗಾಗಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಇಬ್ಬರೂ ಕೂಡ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಎಂದು ಉಲ್ಲೇಖಿಸಿದ್ದರು.
ಧರ್ಮೇಂದ್ರ ಅವರು ದಿಲಾವರ್ ಖಾನ್ ಕೇವಲ್ ಕೃಷ್ಣ ಮತ್ತು ಹೇಮ ಅವರು ಆಯೇಷಾ ಬಿ ಎಂದು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡರು ಹಾಗೂ 1979ರಲ್ಲಿ ‘ನಿಕಾಹ್’ ಕೂಡ ಮಾಡಿಕೊಂಡರು ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, 2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಧರ್ಮೇಂದ್ರ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡೆವಿಟ್‌ನಲ್ಲಿ ಹೇಮಾ ಮಾಲಿನಿ ಹೆಸರಿನ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ. ಅವರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ಆಸ್ತಿ ವಿವರವನ್ನು ಮಾತ್ರ ಘೋಷಿಸಿದ್ದರು.
ಅದಾಗ್ಯೂ ಅವರು ಈ ಮತಾಂತರದ ಕುರಿತು ಸ್ಪಷ್ಟನೆ ನೀಡಿದ್ದಾರೆ. 2004ರಲ್ಲಿ ಔಟ್‌ಲುಕ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, ಅವರು ‘ಈ ಆರೋಪ ಸಂಪೂರ್ಣವಾಗಿ ಸುಳ್ಳು. ನಾನು ನನ್ನ ಹಿತಾಸಕ್ತಿಗಳಿಗಾಗಿ ಧರ್ಮವನ್ನು ಬದಲಾಯಿಸುವ ವ್ಯಕ್ತಿಯಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ಧರ್ಮೇಂದ್ರ ಅವರು, ಶೋಲೆ, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್, ಧರಮ್ ವೀರ್, ಜುಗ್ನು, ಬಾಂದಿನಿ, ಡ್ರೀಮ್ ಗರ್ಲ್, ಚರಸ್, ಸೀತಾ ಔರ್ ಗೀತಾ ಮತ್ತು ಪ್ರತಿಗ್ಯಾ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.