
ಧ್ರುವ ಸರ್ಜಾ ನಟನೆಯ ‘ಕ್ರಿಮಿನಲ್’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಉತ್ತರ ಕರ್ನಾಟಕದ ಸೊಗಡಿನ ಕಥೆ ಹೊಂದಿರುವ ಚಿತ್ರದಲ್ಲಿ ರಚಿತಾ ರಾಮ್ ಧ್ರುವಗೆ ಜೋಡಿಯಾಗಿದ್ದಾರೆ. ಆ್ಯಕ್ಷನ್, ಮಾಸ್ ಕಥೆ ಹೊಂದಿರುವ ಚಿತ್ರಕ್ಕೆ ರಾಜ್‌ಗುರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
‘ಇದು ನನ್ನ ಏಳನೇ ಸಿನಿಮಾ. ಚಿತ್ರದಲ್ಲಿ ಶಿವನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಹಾವೇರಿಯ ಹಾನಗಲ್‌ನಲ್ಲಿ ನಡೆದ ಪ್ರೇಮಕಥೆಯಾಧಾರಿತ ಸಿನಿಮಾವಿದು. ಕಲ್ಟ್ ಲವ್ ಸ್ಟೋರಿ. ಶೇಕಡ 99ರಷ್ಟು ನೈಜಕಥೆಯನ್ನೇ ಚಿತ್ರೀಕರಿಸುತ್ತೇವೆ. ಹೀರೊಯಿಸಂ ಹೆಚ್ಚು ಇರುವುದಿಲ್ಲ. ನೈಜ ಕಥೆಯಲ್ಲಿ ನಾಯಕ ಹೇಗಿದ್ದನೋ, ಅದೇ ರೀತಿ ನಟಿಸಲು ಯತ್ನಿಸುತ್ತೇನೆ. ‘ಭರ್ಜರಿ’ ಚಿತ್ರದ ಬಳಿಕ ತಾರಮ್ಮ ಮತ್ತೆ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಥೆ ಕೇಳಿದ ಮೇಲೆ ರಚಿತಾ ಅವರಿಗೆ ಕರೆ ಮಾಡಿದೆ. ಅವರು ಕೂಡಾ ಒಪ್ಪಿಕೊಂಡ್ರು. ತುಂಬ ಭಿನ್ನವಾದ ಕಥೆ. ಇಡೀ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರಲಿದೆ. ನಾನು ಮೊದಲ ಸಲ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುತ್ತಿದ್ದೇನೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುವೆ. ನಿರ್ದೇಶಕರ ವಿಷನ್ ಸ್ಪಷ್ಟವಾಗಿದೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು ಮುಂದೆ ಒಂದು ಸಿನಿಮಾ ಮುಗಿಯುತ್ತಿದ್ದಂತೆ ಇನ್ನೊಂದು ಸಿನಿಮಾದ ಮುಹೂರ್ತ ಮಾಡುತ್ತೇನೆ. ಎಲ್ಲರ ಹಾರೈಕೆ ಇರಲಿ’ ಎಂದರು ಧ್ರುವ.
ರಾಜ್‌ಗುರು ಈ ಹಿಂದೆ ‘ಕೆರೆಬೇಟೆ’ ಚಿತ್ರವನ್ನು ನಿರ್ದೇಶಿಸಿದ್ದರು. ‘ನಾಯಕನ ಹೆಸರು ಹೋರಿ ಶಿವ. ಇದೇ ರೀತಿಯ ಓರ್ವ ವ್ಯಕ್ತಿ ಇದ್ದ. ಆತನ ಹೆಸರು ಬದಲಿಸಿದ್ದೇವೆ. ಇದು ಬಯೋಪಿಕ್ ಅಲ್ಲ. ಒಂದು ಪ್ರೇಮಕಥೆ. ಮರ್ಯಾದೆ ಹತ್ಯೆ ಕಥೆಯಲ್ಲ. ಹೋರಿ ಬೆದರಿಸುವ ಪೈಲ್ವಾನ್ ಆಗಿ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಆತನ ಪ್ರೇಯಸಿಯಾಗಿರುತ್ತಾರೆ. ಇದು ಬೇರೆ ರೀತಿಯ ಕಥೆ’ ಎಂದರು ನಿರ್ದೇಶಕ.
ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್‌ನ ಮನೀಶ್ ಶಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ಧ್ರುವ ಸಿನಿಮಾ ನಿರ್ಮಾಣ ಮಾಡಿ ಎಂದಾಗ ನನಗೆ ಆಶ್ಚರ್ಯ ಆಯ್ತು. ಅವರು ಸೂಪರ್‌ಸ್ಟಾರ್. ಜತೆಗೆ ಸ್ನೇಹಮಯಿ. ಹೀಗಾಗಿ ಕನ್ನಡದಲ್ಲಿ ಬಂಡವಾಳ ಹೂಡುತ್ತಿದ್ದೇವೆ’ ಎಂದರು ನಿರ್ಮಾಪಕರು.
ನಟಿ ರಚಿತಾ ರಾಮ್ ಮಾತನಾಡಿ, ಎಂಟು ವರ್ಷಗಳ ನಂತರ ನನ್ನ ಒಳ್ಳೆ ಸ್ನೇಹಿತ ಧ್ರುವ ಅವರ ಜೊತೆ ಸಿನಿನಾ ಮಾಡುತ್ತಿರುವುದು ಖುಷಿಯ ವಿಷಯ. ‘ಭರ್ಜರಿ’ ಸಿನಿಮಾದ ಮುಹೂರ್ತವಾದ ಜಾಗದಲ್ಲೇ ‘ಕ್ರಿಮಿನಲ್’ ಚಿತ್ರ ಸೆಟ್ಟೇರಿದೆ. ಹೊಸ ತಂಡದ ಜತೆ ಕೆಲಸ ಮಾಡುತ್ತಿರುವುದು ಖುಷಿ ಇದೆ’ ಎಂದರು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಂದನ್ ಶೆಟ್ಟಿ ಸಂಗೀತ, ವೈದಿ ಛಾಯಾಚಿತ್ರಗ್ರಹಣ, ರವಿವರ್ಮಾ, ವಿಕ್ರಂ ಮೋರ್ ಸಾಹಸ ಸಂಯೋಜನೆ ಚಿತ್ರಕ್ಕಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.