ADVERTISEMENT

ಇದೇ ಅಕ್ಟೋಬರ್‌ನಲ್ಲಿ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ತೆರೆಗೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 0:56 IST
Last Updated 15 ಜುಲೈ 2025, 0:56 IST
<div class="paragraphs"><p>KD Film teaser launch </p></div>
   

KD Film teaser launch

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. 

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ ಕೆ. ವೆಂಕಟ್‌ ನಾರಾಯಣ್‌ ಈ ಮಾಹಿತಿ ನೀಡಿದ್ದಾರೆ. ‘ಏಕ್‌ ಲವ್‌ ಯಾ’ ಸಿನಿಮಾ ನಂತರ ಪ್ರೇಮ್ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದ್ದು, ಈಗಾಗಲೇ ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ 4 ಭಾಷೆಗಳಲ್ಲಿ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. 

ADVERTISEMENT

‘ಪಾತ್ರಗಳನ್ನು ಈ ಟೀಸರ್‌ ಮೂಲಕ ಪರಿಚಯಿಸಿದ್ದೇವೆ. ಚಿತ್ರದಲ್ಲಿ ಆ್ಯಕ್ಷನ್‌ ಜೊತೆಗೆ ಕೌಟುಂಬಿಕ ಚಿತ್ರಕ್ಕೆ ಬೇಕಾದ ಅಂಶಗಳೂ ಇವೆ. ಧ್ರುವ, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೀಷ್ಮಾ ಈ ರೀತಿಯ ಪಾತ್ರಗಳನ್ನು ಹಿಂದೆ ಮಾಡಿಲ್ಲ. ಈ ಪಾತ್ರಗಳನ್ನು ಕಟ್ಟಲು ಪ್ರೇಮ್ ಮೂರು ವರ್ಷಗಳಿಂದ ಕಷ್ಟಪಟ್ಟಿದ್ದಾರೆ. ಚಿತ್ರದಲ್ಲಿ ಎಲ್ಲರೂ ಮಚ್ಚು ಹಿಡಿದಿದ್ದಾರೆ. ಅವರು ಮಚ್ಚು ಹಿಡಿಯುವುದಕ್ಕೆ ಕಾರಣ ‘ಸತ್ಯವತಿ’. ಆಕೆಯಿಂದಲೇ ಧ್ರುವ, ರಮೇಶ್ ವೈಲೆಂಟ್ ಆಗಿ ಕಾಣಿಸಿದ್ದಾರೆ. ಈಗಾಗಲೇ 2 ಹಾಡುಗಳು ಬಿಡುಗಡೆಯಾಗಿದ್ದು, ಇನ್ನೂ ನಾಲ್ಕು ಹಾಡುಗಳು ಚಿತ್ರದಲ್ಲಿವೆ. ಈ ವರ್ಷದ ಅಕ್ಟೋಬರ್‌ನಲ್ಲಿ ‘ಕೆಡಿ’ ಪ್ರೇಕ್ಷಕರ ಮುಂದೆ ಬರಲಿದೆ’ ಎಂದರು ವೆಂಕಟ್‌ ನಾರಾಯಣ್‌. 

‘ಇಷ್ಟೊಂದು ಖ್ಯಾತ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಈ ಸಿನಿಮಾ ಮೂಲಕ ದೊರಕಿದೆ. ಸಂಜಯ್‌ ದತ್‌ ಹಾಗೂ ಶಿಲ್ಪಾ ಶೆಟ್ಟಿ ಅವರಿಂದ ಬಹಳ ಕಲಿತೆ. ಈ ಸಿನಿಮಾದ ನಿಜವಾದ ಹೀರೊ ಪ್ರೇಮ್‌. ಅವರದು ಅತೃಪ್ತ ಆತ್ಮ. ಎಷ್ಟು ಕೆಲಸ ಮಾಡಿದರೂ ಅವರಿಗೆ ತೃಪ್ತಿಯಾಗುವುದಿಲ್ಲ’ ಎಂದು ನಗೆಚಟಾಕಿ ಹಾರಿಸಿದರು ಧ್ರುವ ಸರ್ಜಾ. 

1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರಲ್ಲಿದೆ. ಕೆಡಿ ಅಂದ್ರೆ ಕಾಳಿದಾಸ. ಈತ ಎಷ್ಟು ಮುಗ್ಧನೋ ಅಷ್ಟೇ ಕ್ರೂರಿಯಾಗುತ್ತಾನೆ. 1970ರ ದಶಕದಲ್ಲಿದ್ದ ಬೆಂಗಳೂರನ್ನು ಕಲಾ ನಿರ್ದೇಶನ ಮೋಹನ್ ಬಿ.ಕೆರೆ ಅವರು ಮರುಸೃಷ್ಟಿಸಿದ್ದು, 20 ಎಕರೆ ಪ್ರದೇಶದಲ್ಲಿ ಪುರಭವನ, ಕೆ.ಆರ್‌.ಮಾರ್ಕೆಟ್‌, ಮೈಸೂರು ಬ್ಯಾಂಕ್‌, ಧರ್ಮರಾಯ ದೇವಸ್ಥಾನ, ಶಿವಾಜಿ ಟಾಕೀಸ್‌ ಸೆಟ್‌ ಹಾಕಿ ಚಿತ್ರದ ಬಹುತೇಕ ಭಾಗ ಚಿತ್ರೀಕರಣಗೊಂಡಿತ್ತು. ಸುಮಾರು 180 ದಿನ ಚಿತ್ರೀಕರಣ ನಡೆಸಿರುವ ತಂಡ ಇದೀಗ ಬಿಡುಗಡೆಯ ಸಿದ್ಧತೆ ಆರಂಭಿಸಿದೆ.

ಚಿತ್ರದಲ್ಲಿ ನನ್ನದು ಢಾಕ್ ದೇವಾ ಎಂಬ ಭಯಾನಕ ವಿಲನ್‌ ಪಾತ್ರ ನನ್ನದು. ಈತನಿಗೂ ಒಂದು ಕುಟುಂಬವಿದೆ. ರಮೇಶ್‌ ಅರವಿಂದ್‌ ಹಾಗೂ ರವಿಚಂದ್ರನ್‌ ಜೊತೆಗೆ ಕೆಲಸ ಮಾಡಿರುವುದು ಖುಷಿ ಇದೆ. ಈ ಪಾತ್ರ ಬಹಳ ಅಪಾಯಕಾರಿಯಾಗಿದೆ. ಧ್ರುವ ಸರ್ಜಾ ಬರೀ ಕನ್ನಡದ ನಟ ಅಲ್ಲ. ಆತ ಇಂಡಿಯನ್ ಆ್ಯಕ್ಟರ್.
–ಸಂಜಯ್‌ ದತ್‌, ನಟ 

ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ನ ಸಂಜಯ್‌ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್‌, ರಮೇಶ್‌ ಅರವಿಂದ್‌, ನೋರಾ ಫತೇಹಿ ತಾರಾಬಳಗದಲ್ಲಿದ್ದಾರೆ. ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

‘ಸತ್ಯವತಿ’ ಪಾತ್ರಕ್ಕಾಗಿ ಸಿನಿಮಾ ಒಪ್ಪಿಕೊಂಡೆ

‘18 ವರ್ಷಗಳ ಬಳಿಕ ‘ಕೆಡಿ’ ಮೂಲಕ ಮತ್ತೆ ನಾನು ಕನ್ನಡ ಸಿನಿಮಾಗೆ ಬರುತ್ತಿದ್ದೇನೆ. ನಾನು ಕರ್ನಾಟಕ ಹುಡುಗಿ. ನನಗೆ ತುಳು ಭಾಷೆ ಚೆನ್ನಾಗಿಯೇ ಮಾತನಾಡಲು ಬರುತ್ತದೆ. ನಾನು ಈ ಸಿನಿಮಾವನ್ನು ಮೊದಲು ಒಪ್ಪಿಕೊಂಡಿರಲಿಲ್ಲ. ಪ್ರೇಮ್‌ ಅವರು ಬಂದು ನನಗೆ ಈ ಸಿನಿಮಾದ ಕಥೆ ಹೇಳುವಾದ ನಾನು ಕಾಲು ಮುರಿದುಕೊಂಡು ವ್ಹೀಲ್‌ಚೇರ್‌ನಲ್ಲಿದ್ದೆ. ಮಕ್ಕಳನ್ನು ಬಿಟ್ಟು ಬೆಂಗಳೂರಿಗೆ ಬರಲು ಸಾಧ್ಯವಿಲ್ಲ ಎಂದಿದ್ದೆ. ಮೊದಲು ನೀವು ಕಥೆ ಹಾಗೂ ನಿಮ್ಮ ಪಾತ್ರವನ್ನು ಕೇಳಿ ಎಂದು ಪ್ರೇಮ್‌ ಒತ್ತಾಯಿಸಿದರು.

ಕಥೆಯು ಮಧ್ಯಂತರಕ್ಕೆ ಬರುವ ಸಂದರ್ಭದಲ್ಲಿ ನಾನು ಕಥೆಯೊಳಗೆ ತಲ್ಲೀನಳಾಗಿ ಹೋಗಿದ್ದೆ. ಆಗ ಬಂದ ದೃಶ್ಯವೊಂದಕ್ಕಾಗಿ ನಾನು ಪಾತ್ರವನ್ನು ಮಾಡಲು ಒಪ್ಪಿಕೊಂಡೆ.

‘ಸತ್ಯವತಿ’ ಪಾತ್ರ ಹಾಗಿದೆ. ಧ್ರುವ ಜೊತೆ ಮೊದಲ ಸಿನಿಮಾವಿದು. ಧ್ರುವ ಓರ್ವ ಅತ್ಯುತ್ತಮ ಕಲಾವಿದ’ ಎಂದಿದ್ದಾರೆ ಶಿಲ್ಪಾ ಶೆಟ್ಟಿ.      

ಶಿಲ್ಪಾ ಶೆಟ್ಟಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.