
ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರ ತೆರೆಕಂಡು ವಾರಗಳ ಬಳಿಕ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. 9ನೇ ದಿನ ಚಿತ್ರ ₹50 ಕೋಟಿ ಗಳಿಕೆ ಕಂಡಿದ್ದು, ಒಟ್ಟು ಗಳಿಕೆ ₹300 ಕೋಟಿ ಹೊಸ್ತಿಲು ತಲುಪಿದೆ.
ಆದಿತ್ಯ ಧರ್ ನಿರ್ದೇಶನದ ಚಿತ್ರಕ್ಕೆ ಪ್ರಾರಂಭದಲ್ಲಿ ದೀರ್ಘ ಅವಧಿ ಕಾರಣದಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೂರುವರೆ ಗಂಟೆ ಅವಧಿ ಚಿತ್ರ ಅಲ್ಲಲ್ಲಿ ತಾಳ್ಮೆ ಪರೀಕ್ಷಿಸುತ್ತದೆ ಎಂಬ ವಿಮರ್ಶೆಗಳು ಬಂದಿದ್ದವು. ಬಿಡುಗಡೆಗೆ ಮುನ್ನವೇ ಕೆಲ ವಿವಾದಗಳಿಂದ ಚಿತ್ರತಂಡ ಸುದ್ದಿಯಲ್ಲಿತ್ತು. ಆದರೆ ಎಲ್ಲ ರೀತಿಯ ಪ್ರಚಾರಗಳು ಚಿತ್ರಕ್ಕೆ ಧನಾತ್ಮಕ ಪರಿಣಾಮ ಬೀರಿದೆ. ದೇಶಭಕ್ತಿ, ಪಾಕಿಸ್ತಾನದ ಭೂಗತ ಜಗತ್ತು, ಬೇಹುಗಾರಿಕೆ ಕಥೆಯನ್ನು ಹೊಂದಿರುವ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಮುಂಬೈ, ಪುಣೆಯಂಥ ನಗರಗಳಲ್ಲಿ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಪ್ರದರ್ಶನಗಳನ್ನು ಹೆಚ್ಚಿಸಲಾಗಿದೆ. ಮುಂಜಾನೆ ಮತ್ತು ತಡರಾತ್ರಿ ಕೂಡ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿಯೂ ಈ ಚಿತ್ರದ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿದೆ.
ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್ ಮಾಧವನ್ ಮತ್ತು ಸಾರಾ ಅರ್ಜುನ್ ಚಿತ್ರದಲ್ಲಿದ್ದಾರೆ. ವಿಶೇಷವಾಗಿ ಅಕ್ಷಯ್ ಖನ್ನಾ ಅಭಿನಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದಿತ್ಯ ಧರ್ ಅವರ ಹಿಂದಿನ ಚಿತ್ರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಕೂಡ ಗಳಿಕೆಯಲ್ಲಿ ವ್ಯಾಪಕ ಯಶಸ್ಸು ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.