ADVERTISEMENT

ಮಾರ್ಚ್‌ 19ಕ್ಕೇ ‘ಧುರಂಧರ್‌: ದಿ ರಿವೇಂಜ್‌’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 23:35 IST
Last Updated 4 ಫೆಬ್ರುವರಿ 2026, 23:35 IST
ರಣ್‌ವೀರ್‌ ಸಿಂಗ್‌ 
ರಣ್‌ವೀರ್‌ ಸಿಂಗ್‌    

ಯಶ್‌ ನಟನೆಯ ‘ಟಾಕ್ಸಿಕ್‌’ ಬಿಡುಗಡೆ ದಿನದಂದೇ ರಣ್‌ವೀರ್‌ ಸಿಂಗ್‌ ನಟನೆಯ ‘ಧುರಂಧರ್‌’ ಸಿನಿಮಾದ ಸೀಕ್ವೆಲ್‌ ‘ಧುರಂಧರ್‌: ದಿ ರಿವೇಂಜ್‌’ ಬಿಡುಗಡೆಯಾಗುವುದು ಖಚಿತವಾಗಿದೆ. 

ಮಂಗಳವಾರ (ಫೆ.3) ಚಿತ್ರದ ಫಸ್ಟ್‌ಲುಕ್‌ ಹಾಗೂ ಟೀಸರ್‌ ಬಿಡುಗಡೆ ಮಾಡಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ‘ಉರಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧರ್‌ ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸಿನಿಮಾದ ಮೊದಲ ಭಾಗ 2025ರ ಡಿಸೆಂಬರ್‌ 5ರಂದು ತೆರೆಕಂಡಿತ್ತು. ವಿಶ್ವದಾದ್ಯಂತ ₹1300 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಈ ಸಿನಿಮಾ ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿತ್ತು. ಅಕ್ಷಯ್‌ ಖನ್ನಾ, ಅರ್ಜುನ್‌ ರಾಂಪಾಲ್‌, ಆರ್‌.ಮಾಧವನ್‌ ಮತ್ತು ರಾಕೇಶ್‌ ಬೇಡಿ ನಟಿಸಿರುವ ಈ ಸಿನಿಮಾದ ಮೊದಲ ಭಾಗ ಅಕ್ಷಯ್‌ ಖನ್ನಾ ಅವರು ನಿಭಾಯಿಸಿದ ‘ರೆಹಮಾನ್‌ ಡಕೈತ್‌’ ಪಾತ್ರದ ಸಾವಿನಿಂದ ಕೊನೆಗೊಂಡಿತ್ತು. 

ಕರಾಚಿಯ ಲಿಯಾರಿ ನಗರದಲ್ಲಿ ನಡೆಯುವ ಘಟನೆಗಳ ಸುತ್ತ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಕಂದಹಾರ್‌ ವಿಮಾನ ಹೈಜಾಕ್‌, 2001ರ ಸಂಸತ್‌ ಭವನದ ಮೇಲಿನ ಉಗ್ರರ ದಾಳಿ ಬೆನ್ನಲ್ಲೇ ಭಾರತ ಕೈಗೊಂಡ ರಹಸ್ಯ ಕಾರ್ಯಾಚರಣೆಯ ಸುತ್ತ ಸಿನಿಮಾ ಕಥೆಯಿದ್ದು, ‘ಹಮ್ಜ ಅಲಿ ಮಜಾರಿ’ ಎಂಬ ಪಾತ್ರದಲ್ಲಿ ರಣ್‌ವೀರ್‌ ಸಿಂಗ್‌ ನಟಿಸಿದ್ದಾರೆ. ಸೀಕ್ವೆಲ್‌ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣಲಿದೆ. ಆದಿತ್ಯ ಧರ್‌ ಹಾಗೂ ಅವರ ಅಣ್ಣ ಲೋಕೇಶ್‌ ಧರ್‌ ಈ ಸಿನಿಮಾ ನಿರ್ಮಾಣ ಮಾಡಿದ್ದು, ಜ್ಯೋತಿ ದೇಶಪಾಂಡೆ ಹಾಗೂ ಜಿಯೊ ಸ್ಟುಡಿಯೊಸ್‌ ಕೈಜೋಡಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.