ADVERTISEMENT

ರೈತ ಕುಟುಂಬದ ವಿಷಯದಲ್ಲಿ ಮೋಸ ಹೋದರೆ ಸೋನು ಸೂದ್?

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 8:42 IST
Last Updated 28 ಜುಲೈ 2020, 8:42 IST
ಸೋನು ಸೂದ್ 
ಸೋನು ಸೂದ್    

ಲಾಕ್‌ಡೌನ್‌ ಆರಂಭದ ದಿನಗಳಿಂದಲೂ ಜನರಿಗೆ ಒಂದಲ್ಲ ಒಂದು ರೀತಿ ಸಹಾಯ ಮಾಡುವ ಮೂಲಕ ನಿಜ ಜೀವನದ ಹೀರೊ ಎನ್ನಿಸಿಕೊಂಡಿದ್ದಾರೆ ನಟ ಸೋನು ಸೂದ್‌. ಕಳೆದ ಕೆಲ ದಿನಗಳ ಹಿಂದೆ ಆಂಧ್ರಪ್ರದೇಶದ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್‌ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.

ಆದರೆ ಸೋನು ಸೂದ್‌ ಟ್ರ್ಯಾಕ್ಟರ್ ಉಡುಗೊರೆ ನೀಡಿದ್ದ ರೈತ ಕುಟುಂಬ ಸೋನುಗೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಆ ಕುಟುಂಬ ಮೋಜಿಗಾಗಿ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು. ಅಲ್ಲದೇ ಅವರೂ ರೈತ ಕುಟುಂಬವೇ ಅಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.

ವಿಡಿಯೊ ಹೀಗಿತ್ತು
ಆ ವಿಡಿಯೊದಲ್ಲಿರೈತ ದಂಪತಿಗಳು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಎತ್ತುಗಳಂತೆ ಕಟ್ಟಿಕೊಂಡು ಉಳುಮೆ ಮಾಡುತ್ತಿರುವ ದೃಶ್ಯವಿತ್ತು. ಅದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗಿತ್ತು. ಇದನ್ನು ಮಾಧ್ಯಮ ವರದಿಗಾರರೊಬ್ಬರು ಸೋನು ಸೂದ್‌ಗೆ ಟ್ವಿಟ್ಟರ್‌ನಲ್ಲಿ ಟ್ಯಾಗ್‌ ಮಾಡಿದ್ದರು. ಆ ವಿಡಿಯೊ ನೋಡಿದ್ದ ಸೋನು ತಕ್ಷಣ ಸ್ಪಂದಿಸಿದಲ್ಲದೇ ಆ ರೈತ ಕುಟುಂಬಕ್ಕೆ ಹೊಚ್ಚ ಹೊಸ ಟ್ರ್ಯಾಕ್ಟರ್ ಕೊಡಿಸಿದ್ದರು.‌

ADVERTISEMENT

ಆದರೆ ಹೆಣ್ಣುಮಕ್ಕಳನ್ನು ಎತ್ತುಗಳಂತೆ ಕಟ್ಟಿಕೊಂಡು ಉಳುಮೆ ಮಾಡಿದ ರೈತ ಕುಟುಂಬದ ಕಥೆಯೇ ಬೇರೆ.ಅವರು ಬಡವರೂ ಅಲ್ಲ, ರೈತರೂ ಅಲ್ಲ. ಲಾಕ್‌ಡೌನ್ ರಜೆಯಲ್ಲಿ ಹಳ್ಳಿ ಬಂದಿದ್ದ ಹೆಣ್ಣುಮಕ್ಕಳು ಎಂಜಾಯ್‌ಮೆಂಟ್‌ಗಾಗಿ ಈ ರೀತಿ ಮಾಡಿದ್ದರು ಎನ್ನಲಾಗುತ್ತಿದೆ.

ಈ ಕುರಿತು ಅಲ್ಲಿನ ಪಂಚಾಯತಿ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ‘ಆ ರೈತ ಕುಟುಂಬದವರು ಬಡವರು ಹಾಗೂ ಅವರಿಗೆ ಎತ್ತು ಅಥವಾ ಟ್ರ್ಯಾಕ್ಟರ್‌ ಕೊಳ್ಳುವ ಸಾಮರ್ಥ್ಯವಿಲ್ಲ, ಆ ಕಾರಣಕ್ಕೆ ಮಕ್ಕಳನ್ನೇ ಎತ್ತುಗಳ ರೀತಿ ಮುಂದೆ ಕಟ್ಟಿಕೊಂಡು ಊಳುತ್ತಿದ್ದಾರೆ ಎಂಬುದು ಸುಳ್ಳು. ಅಲ್ಲದೇ ಕುಟುಂಬದವರು ತಮ್ಮ ಖುಷಿಗಾಗಿ ಹೀಗೆ ಮಾಡಿದ್ದಾರೆ’ ಎಂದಿದ್ದಾರೆ.

‘ಆ ಕುಟುಂಬ ತಮ್ಮ ಸಂತೋಷ ಹಾಗೂ ನೆನಪಿನಲ್ಲಿ ಉಳಿಯುವ ಒಂದು ಕ್ಷಣವಿರಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದೆ. ನಮ್ಮ ಖುಷಿಗಾಗಿ ನಾವು ಮಾಡಿಕೊಂಡ ವಿಡಿಯೊದಿಂದ ಇಷ್ಟು ದೊಡ್ಡ ಘಟನೆ ನಡೆಯುತ್ತದೆ ಎಂಬುದು ನಮಗೆ ಅರಿವಿರಲಿಲ್ಲ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ಕ್ಷಮೆ ಕೂಡ ಕೇಳಿದ್ದಾರೆ’ ಎಂದಿದ್ದಾರೆ ಅಧಿಕಾರಿ. ಜೊತೆಗೆ ಆ ಕುಟುಂಬವು ತಾತ್ಕಾಲಿಕವಾಗಿ ನೆಲೆಸಲು ಹಳ್ಳಿಗೆ ಬಂದಿದ್ದರು ಎಂಬುದನ್ನೂ ತಿಳಿಸಿದ್ದಾರೆ.

ಈ ಕುಟುಂಬ ಹೊಸ ಟ್ರ್ಯಾಕ್ಟರ್‌ನೊಂದಿಗೆ ಫೋಟೊಗೆ ಪೋಸ್‌ ನೀಡಿದ್ದ ದೃಶ್ಯಗಳನ್ನು ನೋಡಿದ್ದ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿತ್ತು. ಅಲ್ಲದೇ ಇದು ಕಟ್ಟು ಕಥೆ ಎಂಬುದನ್ನು ಬಹಿರಂಗ ಪಡಿಸಿತ್ತು ಎನ್ನಲಾಗುತ್ತಿದೆ. ತಮ್ಮ ಸಂತೋಷಕ್ಕಾಗಿ ಈ ರೀತಿ ಮಾಡಿದ್ದು, ತಂದೆಯೇ ಸ್ನೇಹಿತರ ಬಳಿ ವಿಡಿಯೊ ಚಿತ್ರೀಕರಿಸಲು ಹೇಳಿದ್ದರು ಎನ್ನಲಾಗುತ್ತಿದೆ.

ಅಸಲಿ ಕಥೆ
ಆಂಧ್ರಪ್ರದೇಶದ ಮಹಲ್‌ರಾಜುವಾರಿಪಲ್ಲೇ ಗ್ರಾಮದ ನಾಗೇಶ್ವರರಾವ್ ಮದನಪಲ್ಲಿಯಲ್ಲಿ ಟೀ ಅಂಗಡಿಯೊಂದರ ಮಾಲಿಕ. ಅವರ ಒಬ್ಬರು ಹೆಣ್ಣುಮಕ್ಕಳು ಪಟ್ಟಣದಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿ ಓದುತ್ತಿದ್ದಾರೆ.ಲಾಕ್‌ಡೌನ್ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಂಡ ಕುಟುಂಬ ತಮ್ಮ ಹಳ್ಳಿಗೆ ಮರಳಿತ್ತು.

ಹಳ್ಳಿಯಲ್ಲಿ ಎಂಜಾಯ್‌ಮೆಂಟ್‌ಗಾಗಿನಾಗೇಶ್ವರ್ ರಾವ್ ತಮ್ಮ ಇಬ್ಬರು ಪುತ್ರಿಯರಾದ ವೆನ್ನೆಲಾ ಹಾಗೂ ಚಂದನಾ ಅವರನ್ನು ಎತ್ತುಗಳಂತೆ ಕಟ್ಟಿಕೊಂಡ ಉಳುಮೆ ಮಾಡಿದ್ದರು. ಅವರ ಪತ್ನಿ ಕಡಲೆ ಹಾಗೂ ತೊಗರಿ ಬಿತ್ತಿದ್ದರು. ಇದನ್ನು ನಾಗೇಶ್ವರ ರಾವ್ ತಮ್ಮ ಸ್ನೇಹಿತರ ಬಳಿ ವಿಡಿಯೊ ಮಾಡಲು ಹೇಳಿದ್ದರು.

ಆದರೆ ಈ ವಿಡಿಯೊ ಎಲ್ಲೆಡೆ ಹರಿದಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಮಾಧ್ಯಮಗಳಲ್ಲೂ ವರದಿ ಪ್ರಸಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.