ADVERTISEMENT

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯ: ನಿರ್ದೇಶಕ ‘ಜೋಗಿ’ ಪ್ರೇಮ್‌

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 12:10 IST
Last Updated 7 ಫೆಬ್ರುವರಿ 2022, 12:10 IST
ಪ್ರೇಮ್‌
ಪ್ರೇಮ್‌   

‘ಎಕ್ಸ್‌ಕ್ಯೂಸ್‌ ಮಿ’ ಸಿನಿಮಾದಿಂದ ಹಿಡಿದು ನಿರ್ದೇಶಕ ಪ್ರೇಮ್‌ ನಿರ್ದೇಶನದ ಬಹುತೇಕ ಸಿನಿಮಾಗಳ ಹಾಡುಗಳು ಹಿಟ್‌ ಆಗಿವೆ. ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಪ್ರೇಮ್‌ ಅವರು ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಲ್ಲಿನ ಹಿನ್ನಲೆ ಸಂಗೀತ ಹಾಗೂ ಹಾಡುಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಸಿನಿಮಾ ಫೆ.24ರಂದು ತೆರೆಕಾಣುತ್ತಿದ್ದು, ಚಿತ್ರದ ಹಾಡುಗಳು ಈಗಾಗಲೇ ಹಿಟ್‌ ಆಗಿವೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಿ.ಆರ್‌.ಜೈರಾಜ್‌ ಅವರನ್ನು ಭೇಟಿಯಾಗಿರುವ ಪ್ರೇಮ್‌, ಮಲ್ಟಿಪ್ಲೆಕ್ಸ್‌ಗಳಲ್ಲಿ ಆಗುತ್ತಿರುವ ಅನ್ಯಾಯ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

‘ಮಲ್ಟಿಪ್ಲೆಕ್ಸ್‌ಗಳಲ್ಲಿ ಇಂಗ್ಲಿಷ್‌ ಹಾಗೂ ಹಿಂದಿ ಸಿನಿಮಾಗಳಿಗೆ ಒಂದು ಹಂತದ ಧ್ವನಿ(ಸೌಂಡ್‌) ಇಡುತ್ತಾರೆ. ಕನ್ನಡ ಸಿನಿಮಾಗಳಿಗೆ ತೀರಾ ಕೆಳ ಹಂತದ ಸೌಂಡ್‌ ಇಡುತ್ತಾರೆ. ತೆಲುಗು ಹಾಗೂ ತಮಿಳು ಸಿನಿಮಾಗೆ ಕನ್ನಡಕ್ಕಿಂತ ಉತ್ತಮ ಗುಣಮಟ್ಟದ ಧ್ವನಿ ಇಡುತ್ತಾರೆ. ಇದರಿಂದ ಕನ್ನಡ ಸಿನಿಮಾಗಳ ಸಂಗೀತದ ಗುಣಮಟ್ಟವೇ ಇಳಿಕೆಯಾದಂತೆ ತೋರುತ್ತದೆ. ‘ಏಕ್‌ ಲವ್‌ ಯಾ’ ಸಿನಿಮಾದಲ್ಲಿನ ಹಾಡು ಹಾಗೂ ಹಿನ್ನೆಲೆ ಸಂಗೀತಕ್ಕೇ ನಾನು ₹1.5 ಕೋಟಿ ಖರ್ಚು ಮಾಡಿದ್ದೇನೆ. ಈ ರೀತಿ ಅನ್ಯಾಯ ಮಾಡುವ ಮೂಲಕ ಕನ್ನಡ ಸಿನಿಮಾಗಳನ್ನೇ ಮಲ್ಟಿಪ್ಲೆಕ್ಸ್‌ಗಳು ಕೊಲ್ಲುತ್ತಿವೆ. ‘ದಿ ವಿಲನ್‌’ಗೂ ಇದೇ ರೀತಿ ಸಮಸ್ಯೆಯಾಗಿತ್ತು.ಕೆಲ ಏಕಪರದೆ ಚಿತ್ರಮಂದಿರಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಿಗಿಂತ ಉತ್ತಮ ಗುಣಮಟ್ಟದ ಸೌಂಡ್‌ ವ್ಯವಸ್ಥೆಯಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಎಲ್ಲ ಸಿನಿಮಾಗಳಿಗೂ ಒಂದೇ ಹಂತದ ಸೌಂಡ್‌ ವ್ಯವಸ್ಥೆ ಇರಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜೊತೆಗೆ ಕನ್ನಡ ಸಿನಿಮಾಗಳನ್ನು ಅಪ್‌ಲೋಡ್‌ ಮಾಡಲು ನಾವು ಚೆನ್ನೈಗೆ ಹೋಗಬೇಕು. ಅಲ್ಲಿ ನಮ್ಮನ್ನು ದಿನಗಟ್ಟಲೆ ಕಾಯಿಸುತ್ತಾರೆ. ಜೊತೆಗೆ ಚಿತ್ರದಲ್ಲಿ ಧ್ವನಿಯು ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ವೀಕ್ಷಿಸಲು ಚಿತ್ರಮಂದಿರಗಳನ್ನೂ ನೀಡುವುದಿಲ್ಲ. ಇವೆಲ್ಲವುದಕ್ಕೆ ಪರಿಹಾರವಾಗಿ ಯುಎಫ್‌ಒ ಕ್ಯೂಬ್‌ ಅನ್ನು ಬೆಂಗಳೂರಿನಲ್ಲಿಯೂ ಸ್ಥಾಪಿಸಬೇಕು’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಪ್ರೇಮ್‌ ಮನವಿ ಪತ್ರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.