ಮುಂಬೈ: ಮಹಾಕುಂಭ ಮೇಳದಲ್ಲಿ ಗಮನ ಸೆಳೆದಿದ್ದ ಮೊನಾಲಿಸಾ ಭೊನ್ಸಾಲೆ ಅವರಿಗೆ ತಮ್ಮ ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದ ಬರಹಗಾರ ಮತ್ತು ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ, ಯುವತಿಯೊಬ್ಬರ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿರುವ ಆರೋಪದಡಿ ಮಿಶ್ರಾರನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಮಿಶ್ರಾರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಾರಿಯ ಮಹಾಕುಂಭ ಮೇಳದಲ್ಲಿ ಗಮನ ಸೆಳೆದಿದ್ದ ಮೊನಾಲಿಸಾ ಭೊನ್ಸಾಲೆ ಎನ್ನುವ 16 ವರ್ಷದ ಯುವತಿ ಬೆಳ್ಳಿ ತೆರೆಗೆ ಬರಲು ಸಜ್ಜಾಗಿದ್ದಾರೆ ಎಂದು ವರದಿಯಾಗಿತ್ತು.
ಮಾಲೆ ಮಾರುವ ಇಂದೋರ್ ಮೂಲದ ಮೊನಾಲಿಸಾ, ಕಾಜುಗಣ್ಣಿನಿಂದ ನೆಟ್ಟಿಗರನ್ನು ಬೆರೆಗುಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
ಈಕೆಯ ಅಂದ ನೋಡಿ ಹಲವರು ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದ್ದರು ಎನ್ನಲಾಗಿದೆ. ಈಗ ಬರಹಗಾರ ಮತ್ತು ನಿರ್ದೇಶಕ ಸನೋಜ್ ಮಿಶ್ರಾ ಮೊನಾಲಿಸಾ ಕುಟಂಬವನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರ ಮುಂಬರುವ ‘ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಸಹಿ ಹಾಕಿದ್ದಾರೆ.
ಸನೋಜ್ ಮಿಶ್ರಾ ಅವರು ಮೊನಾಲಿಸಾ ಅವರೊಂದಿಗೆ ನಿಂತು ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ವಿಡಿಯೊದಲ್ಲಿ, ‘ಮೊನಾಲಿಸಾ ಕುಟುಂಬವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ನಮ್ಮ ಸಿನಿಮಾದಲ್ಲಿ ನಟಿಸಲು ಆಕೆ ಹಾಗೂ ಕುಟುಂಬ ಒಪ್ಪಿಕೊಂಡಿದೆ. ಮೊನಾಲಿಸಾ ಅವರ ಕುಟುಂಬದವರು ನಿಜಕ್ಕೂ ಮುಗ್ಧರು ಮತ್ತು ವಿನಮ್ರ ನಡವಳಿಕೆಯವರು’ ಎಂದು ಹೇಳಿದ್ದರು.
ಸನೋಜ್ ಮಿಶ್ರಾ ಈ ಹಿಂದೆ ನಿರ್ದೇಶಿಸಿದ್ದ ‘ದಿ ಡೈರಿ ಆಫ್ ಬೆಂಗಾಲ್’ ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು.
ವರದಿಗಳ ಪ್ರಕಾರ, ನಟ ರಾಜ್‌ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಅವರೊಂದಿಗೆ ಮೊನಾಲಿಸಾ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.