ADVERTISEMENT

ಫಿಟ್‌ನೆಸ್‌ ಮೋಹಿ ದಿಶಾ!

ಸತೀಶ ಬೆಳ್ಳಕ್ಕಿ
Published 31 ಮೇ 2019, 9:59 IST
Last Updated 31 ಮೇ 2019, 9:59 IST
disha
disha   

ಸ್ಯಾಂಡಲ್‌ವುಡ್‌ನಲ್ಲಿ ಬೆಳಗುತ್ತಿರುವ ಮಸ್ಕತ್‌ ಚೆಲುವೆ ದಿಶಾ ದಿನಕರ್‌ ವೃತ್ತಿಯಲ್ಲಿ ವೈದ್ಯೆ. ವೈದ್ಯಕೀಯ ವೃತ್ತಿ ಜತೆಗೆ ಚಿತ್ರೋದ್ಯಮದಲ್ಲೂ ತೊಡಗಿಸಿಕೊಂಡಿರುವ ಅವರು ಮೂರು ತಿಂಗಳಲ್ಲಿ ಬರೋಬ್ಬರಿ 12 ಕಿಲೋ ತೂಕ ಇಳಿಸಿಕೊಂಡಿದ್ದಾರೆ. ಜಿಮ್‌ ಟ್ರೇನರ್‌ ಶ್ರೇಯಸ್‌ ಅವರ ಮಾರ್ಗದರ್ಶನದಿಂದ ಅವರ ದೇಹಕ್ಕೊಂದು ಚೆಂದದ ಆಕಾರ ಬಂದರೆ; ದಿಶಾ ಅವರು ವೃತ್ತಿಯಲ್ಲಿ ವೈದ್ಯೆ ಆದ್ದರಿಂದ ತಮ್ಮದೇ ಸ್ವಂತ ಆಹಾರ ಪದ್ಧತಿ ಅನುಸರಿಸಿದರು. ಆ ಮೂಲಕ ತಮ್ಮ ದೇಹಕ್ಕೆ ಹೊಳಪು ತುಂಬಿಕೊಂಡರು. ಹೀಗೆ ಮೂರು ತಿಂಗಳಲ್ಲಿ ದೇಹವನ್ನು ಅದ್ಭುತವಾಗಿ ಕಟೆದುಕೊಂಡ ಗುಟ್ಟನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ಅತ್ಯಾಕರ್ಷಕವಾಗಿ ದೇಹ ಕಟೆಕೊಳ್ಳಬೇಕು ಎಂಬುದರ ಕುರಿತಂತೆ ಯವಜನತೆಗೆ ಅಪಾರ ಆಸಕ್ತಿ. ಈ ವಿಚಾರದಲ್ಲಿ ಯುವತಿಯರು ಕೂಡ ಹಿಂದೆ ಬಿದ್ದಿಲ್ಲ. ಅದರಲ್ಲೂ ಫ್ಯಾಷನ್‌ ಅಥವಾ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಹೆಣ್ಣು ಮಕ್ಕಳಂತೂ ದೇಹಕಾರದ ಬಗ್ಗೆ ವಿಪರೀತ ಕಾಳಜಿ ಹೊಂದಿರುತ್ತಾರೆ. ಚೆಂದದ ದೇಹಾಕಾರ ಪಡೆಯಬೇಕು ಅಂದರೆ ಅದಕ್ಕೆ ಕೆಲವೊಂದು ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು.

ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ತುಂಬ ಪರಿಣಾಮ ಬೀರುತ್ತದೆ. ಹಾಗಾಗಿ, ಆಹಾರ ತುಂಬ ಮುಖ್ಯವಾಗುತ್ತದೆ. ಯಾವುದೇ ವ್ಯಾಯಾಮ ಮಾಡಿದರೂ ಅದರಿಂದ ನಾವು ಫಿಟ್‌ ಆಗಲು ಹಾಗೂ ದೇಹವನ್ನು ಟೋನ್‌ ಮಾಡಲು ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ನಾನು ಹೇಳುವುದೇನೆಂದರೆ, ಪ್ರತಿಯೊಬ್ಬರೂ ಶೇ 50 ಆಹಾರ, ಶೇ 30 ವ್ಯಾಯಾಮ ಮತ್ತು ಶೇ 20 ಉತ್ತಮವಾದಂಹ ನಿದ್ದೆ ಈ ಸೂತ್ರವನ್ನು ಅನುಸರಿಸಬೇಕು. ಇದರಿಂದಾಗಿ ಅದ್ಭುತವಾದ ಫಿಟ್‌ನೆಸ್‌ ಕಾಯ್ದುಕೊಳ್ಳಬಹುದು.

ADVERTISEMENT

ತೂಕ ಕಳೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಅತಿಯಾದ ಡಯೆಟ್‌ ಅಥವಾ ಕ್ರಾಸ್‌ ಡಯೆಟ್‌ ಮಾಡಬಾರದು. ಇದರಿಂದಾಗಿ ಆರೋಗ್ಯ ಹಾಳಾಗುತ್ತದೆ. ಒಳ್ಳೆ ರೀತಿಯಲ್ಲಿ ದೇಹದ ತೂಕವನ್ನು ಇಳಿಸಿಕೊಳ್ಳಬೇಕಿದ್ದರೆ ಹೆಲ್ತಿ ಫುಡ್‌ ತಿನ್ನಬೇಕು. ನಮಗೆ ಇಷ್ಟ ಇರುವುದೆಲ್ಲವನ್ನೂ ತಿನ್ನಬಹುದು. ಆದರೆ, ಅತಿಯಾಗಿ ತಿನ್ನಬಾರದು. ತಿನ್ನುವುದರಲ್ಲಿ ಸಮತೋಲನ ಇರಬೇಕು.

ನಾನು ವಾರದಲ್ಲಿ ನಾಲ್ಕು ದಿನ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತೇನೆ. 45 ನಿಮಿಷದ ವ್ಯಾಯಾಮದಲ್ಲಿ 20 ನಿಮಿಷ ಕಾರ್ಡಿಯೋ, 25 ನಿಮಿಷ ಸ್ಟ್ರೆಂಥ್‌ ಟ್ರೇನಿಂಗ್‌ ಮಾಡುತ್ತೇನೆ. ಹೆವಿ ಎಕ್ಸರ್‌ಸೈಜ್‌ ಮಾಡುವುದಿಲ್ಲ. ಬಾಡಿ ಶೇಪ್‌ ಬರಲಿಕ್ಕೆ ಲೈಟ್‌ ವೇಯ್ಟ್ಸ್‌ ವ್ಯಾಯಾಮ ಮಾಡುತ್ತೇನೆ. ಈ ಸೂತ್ರವನ್ನು ಇರಿಸಿಕೊಂಡು ಜಿಮ್‌ನಲ್ಲಿ ಕಸರತ್ತು ಮಾಡಿದ್ದರಿಂದಾಗಿ ನಾನು ಮೂರು ತಿಂಗಳಿನಲ್ಲಿ 12 ಕಿಲೋ ತೂಕ ಇಳಿಸಿದ್ದೇನೆ. ಏರೋಬಿಕ್ಸ್‌ ಮತ್ತು ಜುಂಬಾ ನನ್ನ ಅಚ್ಚುಮೆಚ್ಚಿನ ವರ್ಕೌಟ್‌ಗಳು.

ಮಸಲ್‌ ಫಿಟ್‌ನೆಸ್‌ ಜಿಮ್‌ನ ಶ್ರೇಯಸ್‌ ನನ್ನ ಟ್ರೈನರ್‌. ಅವರು ಬ್ಯಾಡ್ಮಿಂಟನ್‌ ಕೋಚ್‌ ಸಹ ಆಗಿದ್ದಾರೆ. ಜಿಮ್‌ಗೆ ಬರುವ ಹೆಣ್ಣುಮಕ್ಕಳಿಗೆಲ್ಲಾ ಅವರೇ ಟ್ರೇನ್‌ ಮಾಡುತ್ತಾರೆ. ಅವರು ಜಿಮ್‌ನಲ್ಲಿ ನಮಗೆ ಹೆಚ್ಚಾಗಿ ಗ್ರೂಪ್‌ ವರ್ಕೌಟ್‌ ಸೆಷನ್ಸ್‌ ಮಾಡಿಸುತ್ತಿದ್ದರು. ಜತೆಗೆ ಪ್ರತಿದಿನವೂ ಬೇರೆ ಬೇರೆ ವರ್ಕೌಟ್‌ ಕೊಡುತ್ತಿದ್ದರು. ಇದರಿಂದಾಗಿ ಬೋರ್‌ ಅನ್ನಿಸುತ್ತಿರಲಿಲ್ಲ. ಜುಂಬಾದ ಮತ್ತೊಂದು ಫಾರ್ಮ್‌ ಆದಂತಹ ‘ಟಬಾಟ’ ವ್ಯಾಯಾಮವನ್ನು ಒಂದು ದಿನ ಮಾಡಿದರೆ, ಇನ್ನೊಂದು ದಿನ ಸ್ಟ್ರೆಂಥ್‌ ಟ್ರೇನಿಂಗ್‌, ಡಂಬಲ್ಸ್‌ ಜತೆಗೆ ವರ್ಕೌಟ್‌ ಆ ರೀತಿ ಮಿಕ್ಸ್‌ ವರ್ಕೌಟ್‌ ಕೊಡುತ್ತಿದ್ದರು. ಎಕ್ಸರ್‌ಸೈಜ್‌ ಕುರಿತಂತೆ ಅವರ ಮಾರ್ಗದರ್ಶನ ನನ್ನ ದೇಹ ಫಿಟ್‌ ಆಗಲು ಕಾರಣವಾಯಿತು.

ನಾನು ಡಾಕ್ಟರ್‌ ಆಗಿರುವುದರಿಂದ ಏನೇನು ಆಹಾರ ತೆಗೆದುಕೊಳ್ಳಬೇಕು ಎಂಬುದರ ಕುರಿತಂತೆ ಅರಿವಿತ್ತು. ನ್ಯೂಟ್ರೀಷಿಯನ್‌ ವಿಚಾರದಲ್ಲಿ ಎಂದಿಗೂ ರಾಜಿ ಆಗಲಿಲ್ಲ.

ನನ್ನ ದಿನ ಶುರುವಾಗುತ್ತಿದ್ದು ಗ್ರೀನ್‌ ಟೀ ಜತೆಗೆ. ಈ ಮೂರು ತಿಂಗಳಲ್ಲಿ ನಾನು ಒಂದು ದಿನವೂ ಬ್ರೇಕ್‌ಫಾಸ್ಟ್‌ ತಪ್ಪಿಸಿಲ್ಲ. ಮೀಲ್‌ ಸ್ಕಿಪ್‌ ಮಾಡಲಿಲ್ಲ. ರಾತ್ರಿ ಊಟಕ್ಕೆ ಅನ್ನವನ್ನು ವರ್ಜಿಸಿದ್ದೆ. ಲಘು ಆಹಾರ ಸೇವಿಸುತ್ತಿದ್ದೆ. ನಾನು ನಾನ್‌ವೆಜ್‌ ತಿನ್ನುವುದಿಲ್ಲ. ಆದ್ದರಿಂದ ಸಂಪೂರ್ಣವಾಗಿ ಸಸ್ಯಾಹಾರ ತಿನಿಸುಗಳನ್ನು ಸೇವಿಸುತ್ತಿದ್ದೆ. ನಾನ್‌ವೆಜ್‌ ತಿನ್ನುವವರಿಗೆ ನನ್ನ ಸಲಹೆ ಏನೆಂದರೆ, ರೆಡ್‌ ಮೀಟ್‌ ತಿನ್ನುವುದನ್ನು ಕಡಿಮೆ ಮಾಡಬೇಕು. ಇದರಿಂದ ಆರೋಗ್ಯಕ್ಕೂ ಒಳ್ಳೆಯದು. ತೂಕ ಇಳಿಸುವುದಕ್ಕೂ ಉತ್ತಮ ವಿಧಾನ. ಮೊಟ್ಟೆ, ಮೀನು, ಚಿಕನ್‌ ತಿಂದರೆ ಏನೂ ತೊಂದರೆ ಇಲ್ಲ. ಪ್ರೋಟಿನ್‌ ಇರುವಂತಹ ಆಹಾರ ಸೇವಿಸಬೇಕು. ಫ್ಯಾಟ್‌ ತಿನ್ನಬಹುದು. ಆದರೆ, ಒಳ್ಳೆ ಫ್ಯಾಟ್‌ ತಿನ್ನಬೇಕು. ಅಂದರೆ, ಡ್ರೈಫ್ರೂಟ್ಸ್‌, ಮೊಟ್ಟೆ, ಪನ್ನಿರ್‌ ಇವೆಲ್ಲವೂ ಒಳ್ಳೆ ಫ್ಯಾಟ್‌.

ತಿನಿಸುಗಳ ಜತೆಗೆ ನನ್ನ ಅಚ್ಚುಮೆಚ್ಚಿನ ಬೇರೆ ಬೇರೆ ಹಣ್ಣುಗಳ ಸ್ಮೂತೀಸ್‌ ಮಾಡಿ ಕುಡಿಯುತ್ತಿದ್ದೆ. ಮಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ದೇಹಕ್ಕೂ ತಂಪು. ಆರೋಗ್ಯಕ್ಕೂ ಒಳ್ಳೆಯದು. ಸಕ್ಕರೆ ತುಂಬ ಕಡಿಮೆ ಬಳಕೆ ಮಾಡುತ್ತಿದ್ದೆ. ಅದಕ್ಕೆ ಬದಲಾಗಿ ಜೇನು ಅಥವಾ ಬೆಲ್ಲವನ್ನು ಬಳಕೆ ಮಾಡುತ್ತಿದ್ದೆ. ಜಂಕ್ಸ್‌ ಮತ್ತು ಚಾಕೊಲೆಟ್‌ ಸಂಪೂರ್ಣ ತ್ಯಜಿಸಿರಲಿಲ್ಲ. ವಾರಕ್ಕೊಮ್ಮೆ ಮಾತ್ರ ತಿನ್ನುತ್ತಿದ್ದೆ. ವಾರಾಂತ್ಯದಲ್ಲಿ ಚೆನ್ನಾಗಿ ತಿಂದರೂ ಕೂಡ ವಾರದ ಆರಂಭದಿಂದ ದೇಹವನ್ನು ಡಿಟಾಕ್ಸ್ ಮಾಡುತ್ತಿದ್ದೆ.

ನನಗೆ ಬೆಲ್ಲಿ ಫ್ಯಾಟ್‌ ಇರಲಿಲ್ಲ. ಬೆಲ್ಲಿ ಫ್ಯಾಟ್‌ ಇರುವವರು ಅದನ್ನು ಕರಗಿಸಲಿಕ್ಕೆ ಹೀಗೆ ಮಾಡಬಹುದು. ಲೋ ಕಾರ್ಬೋಹೈಡ್ರೇಟ್ಸ್‌ ಡಯೆಟ್‌ ಅನುಸರಿಸಬೇಕು. ಅನ್ನ ತಿನ್ನುವುದನ್ನು ಬಿಡಬೇಕು. ವಿಟಮಿನ್‌ ಸಿ ಅಂಶ (ಮೂಸಂಬಿ, ಕಿತ್ತಳೆ) ಜಾಸ್ತಿ ಇರುವಂತಹ ಜ್ಯೂಸ್‌ ಕುಡಿಯಬೇಕು. ಮಲಗುವುದಕ್ಕೆ ಎರಡು ಗಂಟೆ ಮುಂಚಿತವಾಗಿ ಊಟ ಮಾಡಬೇಕು. ಅದು ಲಘುವಾಗಿ ಇರಬೇಕು. ರಾತ್ರಿ ಸಮಯ ಅತಿಯಾಗಿ ತಿನ್ನಬಾರದು. ಲೇಟ್‌ನೈಟ್‌ ಏನೇ ತಿಂದರೂ ಕರಗುವುದಿಲ್ಲ. ಅದು ಕೊಬ್ಬು ರೂಪುಗೊಳ್ಳಲು ಕಾರಣವಾಗುತ್ತದೆ. ದೇಹವನ್ನು ಫಿಟ್‌ಆಗಿ ಇರಿಸಿಕೊಳ್ಳಲು ವ್ಯಾಯಾಮ ಸಹಕರಿಸುತ್ತದೆ ನಿಜ. ಆದರೆ, ಎಲ್ಲವೂ ಇರುವುದು ನಾವು ಸೇವಿಸುವ ಆಹಾರದಲ್ಲಿ. ನೀರನ್ನು ಜಾಸ್ತಿ ಕುಡಿಯಬೇಕು. ರೈಸ್‌ ಬದಲಿಗೆ ಚಪಾತಿ ಅಥವಾ ಸ್ಯಾಂಡ್‌ವಿಚ್‌ ಹಾಗೂ ತರಕಾರಿ ಸೇವಿಸಬಹುದು.

ಹೀಗೆ ತಿನ್ನುವ ಆಹಾರ, ಮಾಡುವ ವರ್ಕೌಟ್‌ ಜತೆಗೆ ಕಣ್ತುಂಬ ನಿದ್ದೆ ಮಾಡುವುದರಿಂದ ಪ್ರತಿಯೊಬ್ಬರೂ ದೇಹವನ್ನು ಸುಂದರವಾಗಿ ಕಟೆದುಕೊಳ್ಳಬಹುದು. ಕನ್ನಡಿ ಮುಂದೆ ನಿಂತು ನಮ್ಮ ದೇಹವನ್ನು ನೋಡಿಕೊಂಡಾಗ ನಮ್ಮ ದೇಹದ ಬಗ್ಗೆ ನಮಗೆ ಪ್ರೀತಿ ಹುಟ್ಟುತ್ತದೆ. ಜೀವನೋತ್ಸಾಹ ಹೆಚ್ಚುತ್ತದೆ.

ನಾನು ಈಗ ಸ್ವಂತದ್ದೊಂದು ಕಂಪನಿ ಆರಂಭಿಸಿದ್ದೇನೆ. ಇನ್ನೊಂದು ತಿಂಗಳಲ್ಲಿ ಅದು ಆರಂಭಗೊಳ್ಳಲಿದೆ. ಹಾಗಾಗಿ, ಸದ್ಯಕ್ಕೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದರೆ, ಶೀಘ್ರದಲ್ಲೇ ಒಳ್ಳೆ ಬ್ಯಾನರ್‌ನ ಸಿನಿಮಾದೊಂದಿಗೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.