ADVERTISEMENT

‘ಕಡವುಲೆ... ಅಜಿತೇ’ ಎನ್ನಬೇಡಿ: ಅಭಿಮಾನಿಗಳಿಗೆ ತಮಿಳು ನಟ ಅಜಿತ್ ಮನವಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 3:10 IST
Last Updated 11 ಡಿಸೆಂಬರ್ 2024, 3:10 IST
<div class="paragraphs"><p>ನಟ ಅಜಿತ್&nbsp;ಕುಮಾರ್‌</p></div>

ನಟ ಅಜಿತ್ ಕುಮಾರ್‌

   

ಚೆನ್ನೈ: ‘ಕಡವುಲೆ... ಅಜಿತೇ’(ದೇವರು...ಅಜಿತ್) ಘೋಷಣೆ ಬಗ್ಗೆ ತಮಿಳು ಚಿತ್ರ ನಟ ಅಜಿತ್ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನ ಹೆಸರ ಮುಂದೆ ಇಂತಹ ವಿಶೇಷಣಗಳನ್ನು ಬಳಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಅಜಿತ್ ಪರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಅವರ ಆಪ್ತ ಸುರೇಶ್‌ ಚಂದ್ರ, ‘ಇತ್ತೀಚೆಗೆ ಒಂದು ನಿರ್ದಿಷ್ಟ ಅಂಶವು ನನಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತಿದೆ. ‘ಕಡವುಲೆ.. ಅಜಿತೇ’ ಎಂಬ ಘೋಷಣೆಯನ್ನು ವಿವಿಧ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಠಿಸಲಾಗುತ್ತಿದೆ. ನನ್ನ ಹೆಸರಿನ ಜೊತೆಗೆ ಇಂತಹ ವಿಶೇಷಣಗಳನ್ನು ಬಳಸುವುದು ನನಗೆ ಇಷ್ಟವಿಲ್ಲ. ನನ್ನ ಪೂರ್ಣ ಹೆಸರು ಅಥವಾ ಹೆಸರಿನ ಮೊದಲ ಅಕ್ಷರವನ್ನು ಸಂಭೋಧಿಸುವಂತೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಸಾರ್ವಜನಿಕ ಸ್ಥಳಗಳಲ್ಲಿ ಈ ಘೋಷಣೆ ಕೂಗುವ ಅಭ್ಯಾಸದಲ್ಲಿ ತೊಡಗುವವರೆಲ್ಲರೂ ತಕ್ಷಣದಿಂದಲೇ ಇದನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ. ಮುಂದೆಂದೂ ಹಾಗೆ ಮಾಡದಂತೆ ನಿಮ್ಮನ್ನು ನೀವು ನಿರ್ಬಂಧಿಸಿಕೊಳ್ಳಬೇಕು’ ಎಂದು ಅಭಿಮಾನಿಗಳಿಗೆ ತಿಳಿ ಹೇಳಿದ್ದಾರೆ.

‘ನಿಮ್ಮೆಲ್ಲರಿಗೂ ನನ್ನ ಪ್ರಾಮಾಣಿಕ ವಿನಂತಿ ಏನೆಂದರೆ ಯಾರಿಗೂ ನೋವುಂಟು ಮಾಡದೆ ಕಷ್ಟಪಟ್ಟು ಕೆಲಸ ಮಾಡಿ ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ಕಾನೂನು ಪಾಲಿಸುವ ನಾಗರಿಕರಾಗಿರಿ. ಬದುಕಿ ಮತ್ತು ಬದುಕಲು ಬಿಡಿ’ ಎಂದು ಸಲಹೆ ನೀಡಿದ್ದಾರೆ.

ಸದ್ಯ ‘ವಿದಾ ಮುಯರ್ಚಿ’ ಮತ್ತು ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಗಳ ಚಿತ್ರೀಕರಣದಲ್ಲಿ ಅಜಿತ್ ನಿರತರಾಗಿದ್ದಾರೆ. ಅವರ ಕೊನೆಯ ಚಿತ್ರ ‘ತುನಿವು’ 2023 ರಲ್ಲಿ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.