ADVERTISEMENT

‘ರೌಡಿ ಬೇಬಿ’ಯ ಹವಾ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 12:08 IST
Last Updated 3 ಏಪ್ರಿಲ್ 2020, 12:08 IST
   

ಬೆಂಗಳೂರಿನ ಬೆಡಗಿ ದಿವ್ಯಾ ರಾವ್ ಕಂಡಿದ್ದ ಕನಸು ಆಕಾಶದಲ್ಲಿ ಹಾರಾಡುವ ವಿಮಾನದ ಪೈಲಟ್ ಆಗುವುದು. ಈಗ ಆಗಿರುವುದು ಬಣ್ಣದ ಲೋಕದಲ್ಲಿ ವಿಹರಿಸುವ ಚಿಟ್ಟೆ!

ಹೌದು ಸಿಲಿಕಾನ್ ಸಿಟಿಯ ಈ ಬೇಬಿ, ಕೃಷ್ಣ ಸಾಯಿರೆಡ್ಡಿ ನಿರ್ದೇಶನದ 'ರೌಡಿಬೇಬಿ' ಸಿನಿಮಾದ ನಾಯಕಿ. ಇದು ಇವರಿಗೆ ಕನ್ನಡದಲ್ಲಿ ಚೊಚ್ಚಲ ಸಿನಿಮಾ ಕೂಡ ಹೌದು. ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆಗಳನ್ನೂ ಹುಟ್ಟುಹಾಕಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, 2 ಗಂಟೆ ಒಂದು ನಿಮಿಷ ಅವಧಿಯ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಮಂಡಳಿಯ ಪ್ರಮಾಣ ಪತ್ರ ಇನ್ನಷ್ಟೆ ಸಿಗಬೇಕಿದೆ.

ಬಿಬಿಎ ಓದಿರುವ ದಿವ್ಯಾಗೆ ಮೊದಲಿನಿಂದಲೂ ಮಾಡೆಲಿಂಗ್‌ನಲ್ಲಿ ಆಸಕ್ತಿ ಇತ್ತು. ಇವರು2017ರ ಸಾಲಿನ ಮಿಸ್‌ ಸೌತ್ ಇಂಡಿಯಾ ಬೆಂಗಳೂರು ಸ್ಪರ್ಧೆಯ ವಿನ್ನರ್‌ ಸಹ ಹೌದು. ಈ ಸ್ಪರ್ಧೆಯೇ ಅವರ ಬದುಕಿಗೆ ತಿರುವು ನೀಡಿತಂತೆ. ಆಗ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿ, ಆಡಿಷನ್ ಕೊಡಲು ಆರಂಭಿಸಿದರಂತೆ. ತೆಲುಗಿನ 'ಡಿಗ್ರಿ ಕಾಲೇಜು' ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನರಸಿಂಹ ನಂದಿ ಅವರ ನಿರ್ದೇಶನ ಮತ್ತು ಅಲೆಟಿ ವರುಣ್‌ ನಾಯಕನಾಗಿ ನಟಿಸಿರುವ ‘ಡಿಗ್ರಿ ಕಾಲೇಜು’ ಚಿತ್ರ ತೆಲುಗಿನಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಈ ಚಿತ್ರ ಟಾಲಿವುಡ್‌ನಲ್ಲೂ ವಿದ್ಯಾಗೆ ಬೇಡಿಕೆ ಕುದುರಿಸಿಕೊಟ್ಟಿದೆ. ತೆಲುಗಿನಲ್ಲಿ ದಿವ್ಯಾ ಅವರ ಎರಡನೇ ಚಿತ್ರವೂ ಈಗ ಸೆಟ್ಟೇರಿದೆ. ಜೀ ಕನ್ನಡ ವಾಹಿನಿಯ ಒಂದು ರಿಯಾಲಿಟಿ ಶೋಗೂ ಇವರು ಆಯ್ಕೆಯಾಗಿದ್ದಾರೆ.

ADVERTISEMENT

‘ರೌಡಿಬೇಬಿ’ ಬಗ್ಗೆ ಮಾತು ಹೊರಳಿಸಿದ ಇವರು, ಈ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ನನಗೆ ಆಡಿಷನ್‌ ಮೂಲಕವೇ ಸಿಕ್ಕಿದ್ದು. ಚಿತ್ರದಲ್ಲಿ ನನ್ನನ್ನು ಎಲ್ಲರೂರೌಡಿಎನ್ನುತ್ತಾರೆ, ನಾಯಕನನ್ನು ನಾನು ಬೇಬಿ ಎನ್ನುತ್ತೇನೆ. ಹಾಗಾಗಿ ಶೀರ್ಷಿಕೆಯೂ ಕಥೆಗೆ ಹೊಂದಿಕೆಯಾಗುವಂತೆ ಇದೆ.ನಾವಿಬ್ಬರು ಪ್ರಾಣಕ್ಕೆ ಪ್ರಾಣಕೊಡುವ ಪ್ರೇಮಿಗಳು.ನಾಯಕ ಮತ್ತು ನನ್ನ ಜೋಡಿ ಕಥೆಗೆ ಹೇಳಿ ಮಾಡಿಸಿದಂತಿದೆ. ನಿಮ್ಮಿಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ವರ್ಕೌಟ್‌ ಆಗಿದೆ’ ಎಂದು ಮಾತು ವಿಸ್ತರಿಸಿದರು.

‘ರೌಡಿಬೇಬಿ‌’ ಮೇಲೆ ವಿದ್ಯಾಗೂ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ. ‘ಇದು ಎಲ್ಲ ಸಿನಿಮಾಗಳಂತೆ ಅಲ್ಲ. ಈಸಿನಿಮಾ ಬೇರೆ ರೀತಿಯೇ ಇದೆ. ಎಲ್ಲ ವಯೋಮಾನದವರಿಗೂ ಬೇಗ ಕನೆಕ್ಟ್ ಆಗಲಿದೆ. ಏಕೆಂದರೆ ಸಿನಿಮಾ ಕಂಟೆಂಟ್ ತುಂಬಾ ಗಟ್ಟಿಯಾಗಿದೆ. ಪ್ರೇಕ್ಷಕರು ಚಿತ್ರವನ್ನು ತುಂಬಾ ಇಷ್ಟಪಡಲಿದ್ದಾರೆ’ ಎನ್ನುವ ಮಾತು ಸೇರಿಸಿದರು.

ಚಿತ್ರದಲ್ಲಿ ನಿಭಾಯಿಸಿರುವ ಪಾತ್ರದ ಬಗ್ಗೆ ದಿವ್ಯಾಗೆ ತುಂಬಾ ಖುಷಿ ಇದೆ. ನಿಜ ಜೀವನದಲ್ಲಿ ತಾನಿರುವಂತೆಯೇ ಈ ಪಾತ್ರ ಇದೆ. ಹಾಗಾಗಿಯೇ ಈ ಚಿತ್ರ ಒಪ್ಪಿಕೊಂಡೆ ಎನ್ನುವುದು ಅವರ ಸಮಜಾಯಿಷಿ.

‘ನಾನು ಕಾಲೇಜಿಗೆ ಹೋಗುವ ಹುಡುಗಿ. ಹೊರಗೆ ನೋಡಲು ನನ್ನ ಪಾತ್ರ ತುಂಬಾ ರಫ್‌ ಅಂಡ್ ಟಫ್‌ ಆಗಿರುವಂತೆ ಕಾಣಿಸುತ್ತದೆ. ಆದರೆ, ಒಳಗೆ ಮಾತೃ ಹೃದಯಿಯ ಪಾತ್ರ. ನನ್ನದು ಅನ್ ಕಂಡಿಷನ್ ಲವ್ ಬೇಡುವ ಪಾತ್ರ. ತಾಯಿ ಪ್ರೀತಿ ಏನೆನ್ನುವುದು ಎಲ್ಲರಿಗೂ ಗೊತ್ತೇ ಇದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ, ನಿಷ್ಕಲ್ಮಷ ಮತ್ತು ಶುದ್ಧ ಅಂತಃಕರಣದ ಪ್ರೀತಿ. ಈ ಪ್ರೀತಿ ಹೇಗೆ ಸಾಗುತ್ತದೆ ಎನ್ನುವುದನ್ನು ಒಂದಿಷ್ಟು ಹಾಸ್ಯ, ರೊಮ್ಯಾಂಟಿಕ್ ಹಾಗೂ ಭಾವುಕ ಜಾಡಿನಲ್ಲಿ ನಿರ್ದೇಶಕ ನಿರೂಪಿಸಿದ್ದಾರೆ. ನನಗೆ ಸ್ಕ್ರೀನ್ ಸ್ಪೇಸ್ ಸಾಕಷ್ಟು ಸಿಕ್ಕಿದೆ’ ಎಂದು ಪಾತ್ರದ ಬಗ್ಗೆಯೂ ಹೇಳಿಕೊಂಡರು.

ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ಇವರು, ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆಯಿತು. ಅದರಲ್ಲೂ ಮಂಗಳೂರಿನಲ್ಲಿ ನಡೆದ ಚಿತ್ರೀಕರಣದ ದಿನಗಳು ತುಂಬಾ ಖುಷಿ ಕೊಟ್ಟವು. ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ ಎಂದರು.

ಚಿತ್ರರಂಗ ಪ್ರವೇಶಿಸಿದ ಸಂದರ್ಭದ ನೆನಪಿಗೆ ಜಾರಿದ ದಿವ್ಯಾ, ‘ಮಿಸ್ ಇಂಡಿಯಾ ಸೌತ್ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ಚಿತ್ರರಂಗದಲ್ಲಿರುವ ಅವಕಾಶಗಳ ಬಗ್ಗೆ ಅಮ್ಮನಿಗೂ ಮನವರಿಕೆ ಮಾಡಿಕೊಟ್ಟೆ. ಇನ್ಫೋಸಿಸ್‌ನಲ್ಲಿ ಕೆಲಸ‌ ಮಾಡುತ್ತಿರುವ ನನ್ನ ಅಣ್ಣನೂ ನನ್ನ ನಿರ್ಧಾರ ಬೆಂಬಲಿಸಿದ. ಜತೆಗೆ ನಮ್ಮ ಸಂಬಂಧಿಕರು 'ಮಗಳು ನೋಡಲು ತುಂಬಾ ಚೆನ್ನಾಗಿದ್ದಾಳೆ, ಎತ್ತರವೂ ಇದ್ದಾಳೆ, ಸಿನಿಮಾರಂಗಕ್ಕೆ ಕಳುಹಿಸಿ ಎಂದು ಅಮ್ಮನ ಬಳಿ ಆಗಾಗ ಹೇಳುತ್ತಿದ್ದುದು ಕೂಡ ನಟಿಯಾಗುವ ಕನಸು ಗರಿಗೆದರುವಂತೆ ಮಾಡಿತು’ ಎನ್ನಲು ಅವರು ಮರೆಯಲಿಲ್ಲ.

ರೌಡಿಬೇಬಿಯಲ್ಲಿ ನಟಿಸಿದ ನಂತರ ಕನ್ನಡ ಚಿತ್ರರಂಗದಿಂದಲೂ ಒಳ್ಳೊಳ್ಳೆಯ ಸ್ಕ್ರಿಪ್ಟ್ ಬರುತ್ತಿವೆ. ಈ ಸಿನಿಮಾ ಬಿಡುಗಡೆಯಾಗುವವರೆಗೂ ಹೊಸ ಪ್ರಾಜೆಕ್ಟ್‌ ಒಪ್ಪಿಕೊಳ್ಳುವುದಿಲ್ಲ.ರೌಡಿಬೇಬಿ ಗಾಂಧಿನಗರದಲ್ಲಿ ಖಂಡಿತಾಹವಾಎಬ್ಬಿಸಲಿದ್ದಾಳೆ. ಈರೌಡಿಬೇಬಿಯನ್ನು ಕನ್ನಡ ಸಿನಿರಸಿಕರು ಖಂಡಿತ ಇಷ್ಟಪಡಲಿದ್ದಾರೆ ಎನ್ನುವುದು ಅವರ ವಿಶ್ವಾಸದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.