ADVERTISEMENT

Dr. Rajkumar Birthday: ಇಂದು ರಾಜ್‌ಕುಮಾರ್‌ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 23:30 IST
Last Updated 23 ಏಪ್ರಿಲ್ 2025, 23:30 IST
ರಾಜಕುಮಾರ್‌
ರಾಜಕುಮಾರ್‌   

ಇಂದು (ಏ.24) ವರನಟ ರಾಜ್‌ಕುಮಾರ್‌ ಅವರ 96ನೇ ಜನ್ಮದಿನ. ಅವರು ನಮ್ಮನ್ನು ಅಗಲಿ 19 ವರ್ಷ ಉರುಳಿದ್ದರೂ, ಅವರ ನೆನಪು ಇನ್ನೂ ಹಸಿರಾಗಿದೆ. ಜನ್ಮದಿನದ ಅಂಗವಾಗಿ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೊದಲ್ಲಿರುವ ರಾಜ್‌ ಅವರ ಸಮಾಧಿಗೆ ಬೆಳಗ್ಗೆ ಪೂಜೆ ಸಲ್ಲಿಸಲಿದ್ದು, ಸಾವಿರಾರು ಅಭಿಮಾನಿಗಳು ಭೇಟಿ ನೀಡಲಿದ್ದಾರೆ. 

ತಾತನ (ರಾಜ್‌ಕುಮಾರ್‌) ಜನ್ಮದಿನದಂದೇ ತಮ್ಮ ನಿರ್ಮಾಣದ ಚೊಚ್ಚಲ ಚಿತ್ರ ‘ಫೈರ್‌ಫ್ಲೈ’ ಅನ್ನು ಮೊಮ್ಮಗಳು ನಿವೇದಿತಾ ಶಿವರಾಜ್‌ಕುಮಾರ್‌ ಬಿಡುಗಡೆಗೊಳಿಸುತ್ತಿದ್ದಾರೆ. ಜೊತೆಗೆ ಶಿವರಾಜ್‌ಕುಮಾರ್‌ ಅವರು ನಟಿಸಲಿರುವ ಹೊಸ ಚಿತ್ರದ ಘೋಷಣೆಯೂ ಇದೇ ಸಂದರ್ಭದಲ್ಲಿ ಆಗಿದೆ. ಶ್ರಿತಿಕ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ಈ ನೂತನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಾಲಾಜಿ ಮಾಧವನ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವ ಬಾಲಾಜಿ ಮಾಧವನ್, ನಿರ್ದೇಶಕ ಪಿ.ವಾಸು ಅವರ ಸಹೋದರಿಯ ಪುತ್ರ.

ರಾಜ್‌ ನೃತ್ಯ ವೈಭವ

ADVERTISEMENT

ರಾಜ್‌ಕುಮಾರ್‌ ಜನ್ಮದಿನದ ಅಂಗವಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸೇವಾ ಸದನದಲ್ಲಿ ಏ.24ರ ಸಂಜೆ 5ರಿಂದ ಇಂಟರ್‌ನ್ಯಾಷನಲ್‌ ಆರ್ಟ್ಸ್ ಆ್ಯಂಡ್‌ ಕಲ್ಚರಲ್ ಫೌಂಡೇಶನ್ ಸಂಸ್ಥೆಯು ‘ರಾಜ್‌ ನೃತ್ಯ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ. ರಾಜ್‌ಕುಮಾರ್‌ ನಟಿಸಿರುವ ಚಲನಚಿತ್ರ ಗೀತೆಗಳಿಗೆ ಅದರಲ್ಲೂ ಶಾಸ್ತ್ರಿಯ ಸಂಗೀತ ಹಿನ್ನೆಲೆ ಇರುವ ಹಾಡುಗಳಿಗೆ ಹೆಸರಾಂತ ನೃತ್ಯಗಾರರು ಭರತನಾಟ್ಯ, ಕುಚುಪುಡಿ ಶೈಲಿಯಲ್ಲಿ ಹೆಜ್ಜೆ ಹಾಕಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.