ADVERTISEMENT

ಅಣ್ಣಾವ್ರ ಮಕ್ಕಳು: ಪರಸ್ಪರ ಅಭಿಮಾನಿ ಸಹೋದರರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 10:34 IST
Last Updated 29 ಅಕ್ಟೋಬರ್ 2021, 10:34 IST
ಭಜರಂಗಿ –2 ಬಿಡುಗಡೆಪೂರ್ವ ಸಮಾರಂಭದಲ್ಲಿ ಶಿವರಾಜ್‌ಕುಮಾರ್‌, ಯಶ್‌ ಜೊತೆ ಹೆಜ್ಜೆ ಹಾಕಿದ ಪುನೀತ್‌ ರಾಜ್‌ಕುಮಾರ್‌
ಭಜರಂಗಿ –2 ಬಿಡುಗಡೆಪೂರ್ವ ಸಮಾರಂಭದಲ್ಲಿ ಶಿವರಾಜ್‌ಕುಮಾರ್‌, ಯಶ್‌ ಜೊತೆ ಹೆಜ್ಜೆ ಹಾಕಿದ ಪುನೀತ್‌ ರಾಜ್‌ಕುಮಾರ್‌   

ನಾನು ಶಿವಣ್ಣನ ಅಭಿಮಾನಿ, ಶಿವಣ್ಣ ‘ಅಪ್ಪು’ ಅಭಿಮಾನಿ... ಹೀಗೆ ಪರಸ್ಪರ ಗೆಳೆಯರಂತೆ ಮಾತನಾಡಿಕೊಂಡಿದ್ದರು ನಟ ಶಿವರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌. ಈ ಘಟನೆಗೆ ಇಬ್ಬರ ನಡುವೆ ನಿಂತು ಸಾಕ್ಷಿಯಾದವರು ನಟ ಯಶ್‌.

ಅಕ್ಟೋಬರ್‌ 24ರಂದು ಶಿವರಾಜ್‌ಕುಮಾರ್‌ ಅಭಿನಯದ ಭಜರಂಗಿ – 2 ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮೇಲಿನ ಸನ್ನಿವೇಶ ನಡೆಯಿತು. ಅಣ್ಣನ ಚಿತ್ರ ಬಿಡುಗಡೆ ವೇಳೆ ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಪುನೀತ್‌, ‘ನಾನು ಶಿವಣ್ಣನ ಅಭಿಮಾನಿ’ ಎಂದರು.

ಅದಕ್ಕೆ ಅದೇ ರೀತಿ ಪ್ರತಿಕ್ರಿಯೆ ಕೊಟ್ಟ ಶಿವರಾಜ್‌ಕುಮಾರ್‌, ‘ನಾನು ಅಪ್ಪು ಅಭಿಮಾನಿ. ಅವನು ಒಳ್ಳೆಯ ಡ್ಯಾನ್ಸರ್‌. ತುಂಬಾ ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಾನೆ’ ಎಂದು ಜೊತೆಗೆ ಇತರ ಡ್ಯಾನ್ಸರ್‌ ನಟರ ಹೆಸರುಗಳನ್ನು ಉಲ್ಲೇಖಿಸಿದರು ಶಿವಣ್ಣ.

‘ಶಿವಣ್ಣನ ಮನಮೆಚ್ಚಿದ ಹುಡುಗಿ, ಜನುಮದ ಜೋಡಿ, ಕುರುಬನ ರಾಣಿ ತುಂಬಾ ಇಷ್ಟ. ಅಲ್ಲಿ ಶಿವಣ್ಣನ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುವಾಗ ಅದರ ಲುಕ್ಕೇ ಬೇರೆ’ ಎಂದು ಮುಕ್ತವಾಗಿ ಹೊಗಳಿದ್ದರು ಪುನೀತ್‌. ಭಜರಂಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅರ್ಧ ಪ್ರದರ್ಶನ ಕಾಣುವಾಗಲೇ ಚಿತ್ರದ ಯಶಸ್ಸಿಗೆ ಶುಭ ಕೋರಿದ್ದ ಪುನೀತ್‌ ಇಲ್ಲವಾದರು.

ಭಜರಂಗಿ – 2 ಚಿತ್ರದ ಪ್ರಧಾನ ಹಾಡಿಗೆ ಶಿವಣ್ಣ, ಯಶ್‌ ಮತ್ತು ಪುನೀತ್‌ ಜೊತೆಯಾಗಿ ಹೆಜ್ಜೆ ಹಾಕಿ ರಂಜಿಸಿದ್ದರು. ಈ ಪುಟ್ಟ ವಿಡಿಯೋ ತುಣುಕು ಎಲ್ಲ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿ ಪ್ರಶಂಸೆಗೆ ಪಾತ್ರವಾಗಿತ್ತು.

ಪಟಾಕಿ ಸುಡಬೇಡಿ; ಕ್ಯಾಲೊರಿ ಸುಡಲು ಹೇಳಿದ್ದ ಪುನೀತ್‌
‘ಪಟಾಕಿ ಸುಡಬೇಡಿ ಕ್ಯಾಲೊರಿ ಸುಟ್ಟುಬಿಡಿ’. ಹೀಗೆ ಹೇಳುತ್ತಾ ಕಳೆದ ವರ್ಷ ದೀಪಾವಳಿ ವೇಳೆಗೆ ಪುಟ್ಟ ವಿಡಿಯೋವೊಂದನ್ನು ಹರಿಯಬಿಟ್ಟಿದ್ದರು ಪುನೀತ್‌.

ತಂದೆ ಡಾ.ರಾಜ್‌ಕುಮಾರ್‌ ದೀಪಾವಳಿ... ಗೋವಿಂದ ಲೀಲಾವಳಿ ಹಾಡನ್ನು ಗುನುಗಿ ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿ ಮಾತನಾಡಿದ್ದ ಅವರು, ಈ ದೀಪಾವಳಿಯಲ್ಲಿ ಯಾರೂ ಪಟಾಕಿ ಸುಡುವುದು ಬೇಡ. ನಮ್ಮಲ್ಲಿರುವ ಕ್ಯಾಲೊರಿ ಸುಟ್ಟುಬಿಡಿ. ಜೊತೆಗೆ ಅಕ್ಕಪಕ್ಕದಲ್ಲಿರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ ಎಂದು ಹಾರೈಸಿದ್ದರು ಪುನೀತ್‌.

ಆಗಾಗ ತಮ್ಮ ಜೀವನ ಶೈಲಿ, ಆರೋಗ್ಯ ಕಾಪಾಡಿಕೊಳ್ಳುವ ಟಿಪ್ಸ್‌, ವ್ಯಾಯಾಮಗಳ ಬಗೆಗೆ ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಹತ್ತಿರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.