ADVERTISEMENT

WAVES Summit 2025 | ಪ್ಯಾನ್ ಇಂಡಿಯಾ ಒಂದು ಪರಿಭಾಷೆಯಷ್ಟೆ: ನಟಿ ಖುಷ್ಬೂ

‘ವೇವ್ಸ್‌‘ನಲ್ಲಿ ನಟಿ ಖುಷ್ಬೂ, ನಟರಾದ ಅನುಪಮ್ ಖೇರ್, ನಾಗಾರ್ಜುನ, ಕಾರ್ತಿ ಸಂವಾದ

​ಪ್ರಜಾವಾಣಿ ವಾರ್ತೆ
Published 2 ಮೇ 2025, 23:33 IST
Last Updated 2 ಮೇ 2025, 23:33 IST
ಸಂವಾದದಲ್ಲಿ ನಟ ನಾಗಾರ್ಜುನ, ನಟಿ ಖುಷ್ಬೂ ಸುಂದರ್ –ಪಿಟಿಐ ಚಿತ್ರ
ಸಂವಾದದಲ್ಲಿ ನಟ ನಾಗಾರ್ಜುನ, ನಟಿ ಖುಷ್ಬೂ ಸುಂದರ್ –ಪಿಟಿಐ ಚಿತ್ರ   

ಮುಂಬೈ: ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ‘ಶಾಂತಿ ಕ್ರಾಂತಿ’ ಚಿತ್ರವನ್ನು ನಟ-ನಿರ್ದೇಶಕ ವಿ. ರವಿಚಂದ್ರನ್ ಮಾಡಲು ಹೊರಟಿದ್ದರು. ಅದು ಹಿಂದಿಗೂ ಡಬ್ ಆಗಿತ್ತು. ಆದರೆ, ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆಗೆಲ್ಲ ‘ಪ್ಯಾನ್ ಇಂಡಿಯಾ’ ಎಂಬ ಪರಿಭಾಷೆ ಇರಲಿಲ್ಲ. ಕನಸು ಅದೇ ಆಗಿತ್ತು ಎಂದು ನಟಿ ಖುಷ್ಬೂ ನೆನಪಿಸಿಕೊಂಡರು.

ಜಾಗತಿಕ ಶ್ರವಣ-ದೃಶ್ಯ ಮನರಂಜನೆ ಶೃಂಗದಲ್ಲಿ (ವೇವ್ಸ್) ಶುಕ್ರವಾರ ನಡೆದ ‘ಪ್ಯಾನ್ ಇಂಡಿಯಾ-ಭ್ರಮೆಯೋ, ಕ್ಷಣಭಂಗುರ ಭಾವವೋ?’ ಎಂಬ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಹೀಗೆ ಹೇಳಿದರು.

‘ಪುಷ್ಪ’ ಚಿತ್ರದ ಕಥಾನಕ ತೆಲುಗಿಗೆ ಹೊಸತೇನೂ ಆಗಿರಲಿಲ್ಲ. ಬಹುಶಃ ಮಾರುಕಟ್ಟೆ ತಂತ್ರದಿಂದಾಗಿ ಅದು ದೇಶ - ವಿದೇಶಗಳನ್ನು ತಲುಪಿತು. ಹೆಚ್ಚು ಹಣ ಬಾಚಿತು ಎಂದು ತೆಲುಗು ನಟ ನಾಗಾರ್ಜುನ ಅಭಿಪ್ರಾಯಪಟ್ಟರು. ಪಟ್ನಾದಲ್ಲಿ ಆ ಚಿತ್ರದ ಆಡಿಯೊ ಬಿಡುಗಡೆ ಮಾಡಿದ್ದನ್ನು ಖುಷ್ಬೂ ಸ್ಮರಿಸಿಕೊಂಡರು.

ADVERTISEMENT

ತಮ್ಮ ಎಲ್ಲ ಸಿನಿಮಾಗಳೂ ಪ್ಯಾನ್‌ ಇಂಡಿಯಾ ಆಗಬೇಕೆಂದೇನೂ ಇಲ್ಲ. ನೆಲದ ಭಾಷೆಯ ಸಿನಿಮಾಗಳನ್ನು ಮಾಡಿದರೆ, ಅದನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನ ಮಾಡಬಹುದು ಎಂದು ತಮಿಳು ನಟ ಕಾರ್ತಿ ಅಭಿಪ್ರಾಯಪಟ್ಟರು. 

ಕೋವಿಡ್ ಕಾಲದಲ್ಲಿ ಎಲ್ಲ ಭಾಷೆಯ ಸಿನಿಮಾಗಳನ್ನೂ ಜನರು ನೋಡಿದ್ದರಿಂದ, ಹಿಂದಿ ಚಿತ್ರರಗದವರಿಗೆ ಇದ್ದ ಶ್ರೇಷ್ಠತೆಯ ದರ್ಪಕ್ಕೆ ಸೂಜಿಮೊನೆ ಚುಚ್ಚಿದಂತಾಯಿತು ಎಂದು ನಟ ಅನುಪಮ್ ಖೇರ್ ಹೇಳಿದರು. 

‘ಕೆಜಿಎಫ್ ಚಿತ್ರದ ನಾಯಕ ತಾಯಿಗೆ ಚಿನ್ನ ಕೊಡಿಸುವ ಕನಸನ್ನು ಬಾಲ್ಯದಲ್ಲೇ ಕಾಣುತ್ತಾನೆ. ಅದೇ ಮುಂದೆ ಅವನು ಚಿನ್ನದ ಗಣಿಗೇ ಕೈಹಾಕುವ ಕಥನವಾಗಿ ವಿಸ್ತರಣೆಗೊಳ್ಳುತ್ತದೆ. ನಮ್ಮ ಸಿನಿಮಾಗಳು ಮೂಲತಃ ಭಾವಪ್ರಧಾನವಾಗಿದ್ದರೆ ಅದೇ ದೊಡ್ಡ ಗೆಲುವಿಗೆ ದಾರಿ ಮಾಡಿಕೊಡಬಲ್ಲದೆನ್ನುವುದಕ್ಕೆ ಇದು ಒಂದು ಉದಾಹರಣೆ’ ಎಂದು ಖುಷ್ಬೂ ಮಾತು ಸೇರಿಸಿದರು. 

ಹತ್ತಾರು ಜನರನ್ನು ಹೊಡೆಯುವ ನಾಯಕನ ಧೋರಣೆಗೆ ಭಾರತದಲ್ಲಿ ತರ್ಕದ ಅಗತ್ಯವೇ ಇಲ್ಲ ಎಂದು ನಾಗಾರ್ಜುನ ಹೇಳಿದರೆ, ಕುಟುಂಬವನ್ನು ರಕ್ಷಿಸುವ ನೈತಿಕ ಪ್ರಜ್ಞೆ ಅಲ್ಲಿ ಕೆಲಸ ಮಾಡುತ್ತದೆ ಎಂದು ಖುಷ್ಬೂ ಹೇಳಿದರು. 

ಕಿರಣ್‌ ಮಜುಂದಾರ್‌ ಶಾ
ನಮ್ಮ ದೇಶದಲ್ಲಿ ಸಿನಿಮಾ ನೋಡುತ್ತಿರುವವರ ಸಂಖ್ಯೆ ಶೇ 2 ಮಾತ್ರ. ಒಟಿಟಿ ಉಳಿಯಲಿ. ಅಲ್ಲಿ ಸಿಗದ ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳಿಗೆ ಜನರನ್ನು ಕರೆತರುವ ದಾರಿ ಹುಡುಕಬೇಕಷ್ಟೆ
ಅಮೀರ್ ಖಾನ್, ನಟ

ದೊಡ್ಡ ಕನಸನ್ನೇ ಕಾಣಿರಿ: ಕಿರಣ್ ಮಜುಂದಾರ್ ಶಾ

‘ನವೋದ್ಯಮಗಳ ಕನಸು ಯಾವಾಗಲೂ ದೊಡ್ಡದಾಗಿರಬೇಕು. ಸೋಲುಗಳು ಮೊದಲು ಎದುರಾದರೂ ಕೆಲ ಕಾಲದ ನಂತರ ಯಶಸ್ಸು ಸಿಕ್ಕೀತು. ಆಲೋಚನೆಗಳಲ್ಲಿ ಚಿಕ್ಕದು ದೊಡ್ಡದು ಎಂದು ಇರುವುದಿಲ್ಲ. ಕೈಗೆ ಹೇಗೆ ಎಟುಕಿಸಿಕೊಳ್ಳುತ್ತೇವೆ ಎನ್ನುವುದಷ್ಟೆ ಮುಖ್ಯ’ ಎಂದು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಕಿವಿಮಾತು ಹೇಳಿದರು.  ‘ವೇವ್ಸ್’ನಲ್ಲಿ ‘ಸೃಜನಶೀಲತೆಯ ಪರಿಧಿ’ ಎಂಬ ವಿಷಯದ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ‘ಅಮೆರಿಕದ ಜಾರ್ಜ್ ಲ್ಯೂಕಸ್ ‘ಸ್ಟಾರ್ ವಾರ್ಸ್’ ಅನ್ನು ರಾಮಾಯಣದ ಆತ್ಮ ಇಟ್ಟುಕೊಂಡು ವಿಸ್ತರಿಸಿದರು. ಆ ಸರಣಿ ಚಿತ್ರಗಳೇ ಹೊಸ ಸಂಕಥನಗಳಾಗಿ ಬೆಳೆದವು’ ಎಂದು ಬಣ್ಣಿಸಿದರು. ‘ಆರೆಂಜ್ ಎಕಾನಮಿ’ ಕುರಿತ ಪ್ರಶ್ನೆಗೆ  ‘ಮನರಂಜನಾ ಮಾಧ್ಯಮ ದೇಶದ ನಿವ್ವಳ ಆದಾಯಕ್ಕೆ ನೀಡುವ ಕಾಣಿಕೆಯನ್ನು ಆರೆಂಜ್ ಎಕಾನಮಿ ಎನ್ನುತ್ತೇವೆ. 2047ರ ಹೊತ್ತಿಗೆ ಭಾರತ ಮೂರು ಟ್ರಿಲಿಯನ್ ಡಾಲರ್ ಆರೆಂಜ್ ಆರ್ಥಿಕತೆಯ ದೇಶವಾಗಿ ಬೆಳೆಯಬೇಕೆಂಬ ಗುರಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.