ADVERTISEMENT

ಡ್ರಗ್ಸ್‌ ಚಿತ್ರರಂಗದಲ್ಲಷ್ಟೆ ಅಲ್ಲ ಎಲ್ಲ ರಂಗಗಳಲ್ಲಿಯೂ ಇದೆ: ಸಂಸದೆ ಸುಮಲತಾ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 19:18 IST
Last Updated 8 ಸೆಪ್ಟೆಂಬರ್ 2020, 19:18 IST
   

ಬೆಂಗಳೂರು: ‘ಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ರಂಗಗಳಲ್ಲಿಯೂ ಡ್ರಗ್ಸ್ ಇದೆ’ ಎಂದು ಸಂಸದೆ ಸುಮಲತಾ ಅಂಬರೀಷ್‌ ಪ್ರತಿಕ್ರಿಯಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಇಡೀ ಕನ್ನಡ ಚಿತ್ರರಂಗವನ್ನೇ‌ ಬೊಟ್ಟು ಮಾಡಬಾರದು. ಎಷ್ಟು ಪ್ರಮಾಣದಲ್ಲಿದೆ ಎನ್ನುವುದನ್ನೂ ನೋಡಬೇಕು’ ಎಂದರು.

‘ಡ್ರಗ್ಸ್‌ ಸೇವನೆ ಅಭ್ಯಾಸ ಆಗಿರುವವರಿಗೆ ಬಿಡುವುದು ಕಷ್ಟ. ಡ್ರಗ್ಸ್ ಪೆಡ್ಲರ್‌ಗಳ ಜೊತೆ ದಂಧೆ ನಡೆಯುತ್ತದೆ. ನಾಯಕಿಯರ ಹೆಸರೇ ದಂಧೆಯಲ್ಲಿ ಕೇಳಿಬರುತ್ತಿದೆ. ಈ ದಂಧೆಯಲ್ಲಿ ಇತರೆ ನಟರೂ ಇದ್ದಾರೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳೇ ಮಾಹಿತಿ ನೀಡಬೇಕು’ ಎಂದರು.

ADVERTISEMENT

‘ನಾಗಮಂಗಲದಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದೆ’ ಎಂಬ ಮಾಜಿ ಸಂಸದ ಶಿವರಾಮೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ‘ಮಾಧ್ಯಮಗಳ‌ ಮುಂದೆ ಸುಮ್ಮನೆ ಆರೋಪ‌ ಮಾಡಬಾರದು. ದಾಖಲೆ ಇದ್ದರೆ ಪೊಲೀಸರಿಗೆ ಕೊಡಿ. ಸಾಕ್ಷ್ಯ ಸಹಿತ ಸಾಬೀತುಪಡಿಸಿ. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಿ. ಅದನ್ನು ಬಿಟ್ಟು ಸುಖಾಸುಮ್ಮನೆ ಆರೋಪ ಮಾಡಬೇಡಿ’ ಎಂದು ತಿರುಗೇಟು ನೀಡಿದರು.

‘ಚಿತ್ರರಂಗದಲ್ಲಿ ಏನೇ ನಡೆದರೂ ವಿಪರೀತವಾಗಿ ತೋರಿಸುವುದು ಅಭ್ಯಾಸವಾಗಿ ಬಿಟ್ಟಿದೆ. ಇದು ಸರಿ ಇಲ್ಲ ಎನ್ನುವುದು ನನ್ನ ಅಭಿಪ್ರಾಯ’ ಎಂದರು.

ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇಷ್ಟಕ್ಕೆಲ್ಲ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಂಥ ವಿಚಾರಗಳು ನಡೆಯಬೇಕಾದರೆ ಯಾರೂ ಹೇಳಿ ಮಾಡುವುದಿಲ್ಲ. ಎಲ್ಲೆಲ್ಲಿ ನಡೆಯುತ್ತದೆಯೊ ಅಲ್ಲಿ ನಡೆಯುತ್ತಿರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.