ADVERTISEMENT

ಟಾಲಿವುಡ್ ಡ್ರಗ್ಸ್‌ ಕೇಸ್: ನಟಿ ಚಾರ್ಮಿ ಕೌರ್‌ಗೆ ಇಡಿ ಡ್ರಿಲ್

ಪಿಟಿಐ
Published 2 ಸೆಪ್ಟೆಂಬರ್ 2021, 12:04 IST
Last Updated 2 ಸೆಪ್ಟೆಂಬರ್ 2021, 12:04 IST
ನಟಿ ಚಾರ್ಮಿ ಕೌರ್, ಚಿತ್ರ–ಇನ್‌ಸ್ಟಾಗ್ರಾಂ
ನಟಿ ಚಾರ್ಮಿ ಕೌರ್, ಚಿತ್ರ–ಇನ್‌ಸ್ಟಾಗ್ರಾಂ   

ಹೈದರಾಬಾದ್: 2017ರಲ್ಲಿ ಸಾಕಷ್ಟು ಸದ್ದು ಮಾಡಿದ್ದ ಟಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಚಾರ್ಮಿ ಕೌರ್ ಅವರನ್ನು ಇಡಿ ಗುರುವಾರ ಸುಧೀರ್ಘವಾಗಿ ವಿಚಾರಣೆ ನಡೆಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ರೂಪಾಯಿ ಹಣಕಾಸು ವಹಿವಾಟು ನಡೆದಿದೆ ಎಂದು ಆರೋಪಿಸಿ ನಿರ್ದೇಶಕ ಪುರಿ ಜಗನ್ನಾಥ್ ಒಳಗೊಂಡಂತೆ 12 ನಟ–ನಟಿಯರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿಚಾರ್ಮಿ ಕೌರ್ ಅವರನ್ನು ಹೈದರಾಬಾದ್‌ನ ಇಡಿ ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದರು.

ಈ ವೇಳೆ ಕೌರ್ ಅವರು ಲೆಕ್ಕ ಪರಿಶೋಧಕರ ಜೊತೆ ಆಗಮಿಸಿ 2015 ರಿಂದ 2021 ರವರೆಗಿನ ತಮ್ಮ ಬ್ಯಾಂಕ್ ವಹಿವಾಟಿನ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಚಾರ್ಮಿ ಅವರು ವಿಜಯ್ ದೇವರಕೊಂಡ ನಟನೆಯ, ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ.

ADVERTISEMENT

2017 ರಲ್ಲಿ ವ್ಯಾಪಕ ಸದ್ದು ಮಾಡಿದ್ದ ಈ ಡ್ರಗ್ಸ್ ಪ್ರಕರಣದ ಬಗ್ಗೆ ತೆಲಂಗಾಣ ಸರ್ಕಾರ ಎಸ್‌ಐಟಿ ರಚಿಸಿತ್ತು. ವಿಚಾರಣೆ ಇನ್ನೂ ನಡೆಯುತ್ತಿದ್ದು, ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಇಡಿ ಮಧ್ಯ ಪ್ರವೇಶಿಸಿದೆ.

ನಿರ್ದೇಶಕ ಪುರಿ ಜಗನ್ನಾಥ್ ಮಂಗಳವಾರವಷ್ಟೇ ವಿಚಾರಣೆಗೆ ಹಾಜರಾಗಿದ್ದರು. ನಟರಾದ ರವಿತೇಜ, ರಾಣಾ ದಗ್ಗೂಬಾಟಿ, ಮುಮೈತ್ ಖಾನ್, ಸೇರಿದಂತೆ 12 ಆರೋಪಿಗಳು ಸೆ.22 ರೊಳಗೆ ಇಡಿ ವಿಚಾರಣೆಗೆ ಹಾಜರಾಗಬೇಕಿದೆ. ಇತ್ತ ಕನ್ನಡ ಚಿತ್ರರಂಗ ಹಾಗೂ ಬಾಲಿವುಡ್‌ನಲ್ಲೂ ಡ್ರಗ್ಸ್ ವಿಚಾರ ಜೋರಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.