ADVERTISEMENT

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ: ‘ದ್ವೀಪ’ದ ಸುತ್ತ ಕುತೂಹಲಕಾರಿ ಸುತ್ತು

15ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಂವಾದ

ಅಭಿಲಾಷ್ ಪಿ.ಎಸ್‌.
Published 4 ಮಾರ್ಚ್ 2024, 19:57 IST
Last Updated 4 ಮಾರ್ಚ್ 2024, 19:57 IST
‘ದ್ವೀಪ’ ಸಿನಿಮಾದ ಕುರಿತು ಸಂವಾದದಲ್ಲಿ ನಿರ್ದೇಶಕ ಗಿರೀಶ ಕಾಸರವಳ್ಳಿ (ಎಡದಿಂದ ನಾಲ್ಕನೇಯವರು), (ಎಡದಿಂದ) ಛಾಯಾಚಿತ್ರಗ್ರಾಹಕರಾದ ಅದ್ವೈತ್ ಗುರುಮೂರ್ತಿ, ಜಿ.ಎಸ್‌.ಭಾಸ್ಕರ್‌, ಎಚ್‌.ಎಂ.ರಾಮಚಂದ್ರ, ನಿರ್ದೇಶಕ ಪಿ.ಶೇಷಾದ್ರಿ ಮತ್ತು ಕಲಾನಿರ್ದೇಶಕ ಶಶಿಧರ್‌ ಅಡಪ ಇದ್ದರು.    -ಪ್ರಜಾವಾಣಿ ಚಿತ್ರ
‘ದ್ವೀಪ’ ಸಿನಿಮಾದ ಕುರಿತು ಸಂವಾದದಲ್ಲಿ ನಿರ್ದೇಶಕ ಗಿರೀಶ ಕಾಸರವಳ್ಳಿ (ಎಡದಿಂದ ನಾಲ್ಕನೇಯವರು), (ಎಡದಿಂದ) ಛಾಯಾಚಿತ್ರಗ್ರಾಹಕರಾದ ಅದ್ವೈತ್ ಗುರುಮೂರ್ತಿ, ಜಿ.ಎಸ್‌.ಭಾಸ್ಕರ್‌, ಎಚ್‌.ಎಂ.ರಾಮಚಂದ್ರ, ನಿರ್ದೇಶಕ ಪಿ.ಶೇಷಾದ್ರಿ ಮತ್ತು ಕಲಾನಿರ್ದೇಶಕ ಶಶಿಧರ್‌ ಅಡಪ ಇದ್ದರು.    -ಪ್ರಜಾವಾಣಿ ಚಿತ್ರ   

ಬೆಂಗಳೂರು: ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ ‘ದ್ವೀಪ’ ಸಿನಿಮಾ ತೆರೆಕಂಡು ಎರಡು ದಶಕಗಳು ಉರುಳಿವೆ. ಈ ಸಂದರ್ಭದಲ್ಲಿ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ದ್ವೀಪ’ದ ಸುತ್ತ ಸುತ್ತುವ ಅವಕಾಶ ಲಭಿಸಿತ್ತು.

ನಗರದ ಒರಾಯನ್‌ ಮಾಲ್‌ನಲ್ಲಿ ನಡೆದ ವಿ.ಕೆ.ಮೂರ್ತಿ ಸ್ಮರಣಾರ್ಥದ ಮಾಸ್ಟರ್‌ಕ್ಲಾಸ್‌ನಲ್ಲಿ ಒಂದಿಷ್ಟು ಕುತೂಹಲಕಾರಿ ವಿಷಯಗಳನ್ನು ಚಿತ್ರದ ನಿರ್ದೇಶಕ ಗಿರೀಶ ಕಾಸರವಳ್ಳಿ, ಛಾಯಾಚಿತ್ರಗ್ರಾಹಕ ಎಚ್‌.ಎಂ.ರಾಮಚಂದ್ರ ಹಾಗೂ ಕಲಾ ನಿರ್ದೇಶಕ ಶಶಿಧರ್‌ ಅಡಪ ತೆರೆದಿಟ್ಟರು. 

‘ಸಿನಿಮಾವೊಂದನ್ನು ನೋಡಿದಾಗ ಎಲ್ಲವೂ ಒಮ್ಮೆಯೇ ಅರ್ಥವಾಗಬೇಕು ಎಂದುಕೊಳ್ಳುತ್ತೇವಲ್ಲ ಅದು ತಪ್ಪು. ಒಂದು ಸಿನಿಮಾವನ್ನು ಓದುವುದೂ ಅಷ್ಟೇ ಕಷ್ಟ. ಮೊದಲ ಬಾರಿಗೆ ಸಿನಿಮಾ ವೀಕ್ಷಿಸಿದಾಗ ಅರ್ಥವಾಗುವುದು ಕಥೆಯಷ್ಟೇ. ಒಳಾರ್ಥಗಳು ಎಟಕುವುದಿಲ್ಲ. ಮತ್ತೆ ಮತ್ತೆ ಸಿನಿಮಾ ನೋಡಿದಾಗಷ್ಟೇ ಸಿನಿಮಾ ಅರ್ಥವಾಗಲು ಸಾಧ್ಯ. ಸಿನಿಮಾದ ಸಣ್ಣ ಸಣ್ಣ ವಿವರಗಳನ್ನು ನೋಡಬೇಕು. ಉದಾಹರಣೆಗೆ ‘ದ್ವೀಪ’ ಸಿನಿಮಾದಲ್ಲಿ ಪಾತ್ರಗಳು ಬಳಸಿರುವ ಭಾಷೆ ಕುಂದಾಪುರ ಕನ್ನಡ. ಅವರ ಬಟ್ಟೆ ಮಲೆನಾಡಿನದ್ದು. ಹೀಗೆ ಹಲವು ವಿಷಯಗಳನ್ನು ಬುದ್ಧಿಪೂರ್ವಕವಾಗಿ ಅಳವಡಿಸಿದ್ದಾರೆ ಎನ್ನುವುದನ್ನೂ ಅರಿಯಬೇಕು. ಸಣ್ಣ ಸಣ್ಣ ವಿವರಗಳಿಂದ ಸಿನಿಮಾಗೆ ಜೀವ ಬರುತ್ತದೆ. ಹೀಗಾಗಿಯೇ ನಾನು ಚಿತ್ರಕಥೆ ರಚಿಸುವಾಗ ಎರಡು ಪ್ರತಿಗಳನ್ನು ಮಾಡಿಕೊಳ್ಳುತ್ತೇನೆ. ಒಂದು ತಾಂತ್ರಿಕ ವಿಭಾಗಕ್ಕೆ, ಇನ್ನೊಂದು ಕಲಾವಿದರಿಗೆ. ಇದರಲ್ಲಿ ಯಾವ ಲೆನ್ಸ್‌ ಬಳಸಿಕೊಳ್ಳಬೇಕು ಎನ್ನುವ ಸೂಕ್ಷ್ಮ ವಿಚಾರವೂ ಇರುತ್ತದೆ. ಈ ಎಲ್ಲ ಕಾರಣಗಳಿಂದಲೇ 1987ರಲ್ಲೇ ಸಿದ್ಧವಾಗಬೇಕಿದ್ದ ‘ದ್ವೀಪ’ 2002ರಲ್ಲಿ ತೆರೆಕಂಡಿತು’ ಎಂದು ಸಂವಾದಕ್ಕೆ ವೇದಿಕೆ ಹಾಕಿಕೊಟ್ಟರು ಕಾಸರವಳ್ಳಿ. 

ADVERTISEMENT

‘ಡ್ರೋನ್‌ ಅವಶ್ಯಕತೆಯೇ ಬರುತ್ತಿರಲಿಲ್ಲ’: ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ರಾಮಚಂದ್ರ, ‘ಯಾವುದೇ ಡ್ರೋನ್‌ ಶಾಟ್‌ಗಳು ಇಲ್ಲದೆಯೇ ದ್ವೀಪದ ಅನುಭವ ಕಟ್ಟಿಕೊಟ್ಟಿದ್ದೇವೆ ಎಂದರೆ ಅದರ ಅವಶ್ಯಕತೆಯೂ ಇಲ್ಲ. ಕ್ಯಾಮೆರಾ ಎನ್ನುವುದು ಕೇವಲ ಉಪಕರಣವಷ್ಟೇ. ಇಂದಿಗೂ ಆ ಕಥಾನಕಕ್ಕೆ ಡ್ರೋನ್‌ ಶಾಟ್‌ ಅವಶ್ಯಕತೆ ಇದೆ ಎಂದು ಅನಿಸುತ್ತಿಲ್ಲ. ಆ ಕಥೆ ಒಂದು ಭೌಗೋಳಿಕ ದ್ವೀಪಕ್ಕಿಂತಲೂ ಹೆಚ್ಚಾಗಿ ವ್ಯಕ್ತಿಗಳ ದ್ವೀಪವಾಗಿತ್ತು. ಅಂದು ಬಜೆಟ್‌ ಕೊರತೆಯಿಂದ ದಿನಕ್ಕೆ ಸಾವಿರಾರು ರೂಪಾಯಿ ಬಾಡಿಗೆ ಇದ್ದ ಕ್ಯಾಮೆರಾ ಬದಲು ಡಿ.ವಿ.ರಾಜಾರಾಂ ಅವರಿಂದ ವಿಲೇವಾರಿಯಾಗಬೇಕಿದ್ದ ಒಂದು 2ಸಿ ಕ್ಯಾಮೆರಾ ಪಡೆದಿದ್ದೆವು. ಅದರಲ್ಲಿ ಇಂಟರ್‌ನಲ್‌ ರಿಫ್ಲೆಕ್ಷನ್‌ ಇದ್ದ ಕಾರಣ ಇಡೀ ಕ್ಯಾಮೆರಾಗೆ ಕಪ್ಪುಪೇಪರ್‌ ಸುತ್ತಿದ್ದೆವು. ನಾಲ್ಕು ಪೈಪ್‌ಗಳಿಂದ ಮಾಡಿದ್ದ ರ‍್ಯಾಫ್ಟ್‌ ಮೇಲೆ ಕ್ಯಾಮೆರಾ ಇಟ್ಟು ಚಿತ್ರೀಕರಣ ಮಾಡಿದ್ದೆವು’ ಎಂದರು.

ಸೌಂದರ್ಯಗೆ ನೀರೆಂದರೆ ಭಯ: ನಟಿ ಸೌಂದರ್ಯ ಅವರಿಗೆ ನೀರೆಂದರೆ ಭಯವಿತ್ತು. ದೋಣಿಯಲ್ಲಿ ಸಾಗುವಾಗ ಅದರ ಕೆಳಗೆ ಸುರಕ್ಷತೆಗಾಗಿ ಬಲೆ ಹಾಕಲು ಸಾಧ್ಯವೇ ಎಂದು ಅವರ ಅಣ್ಣ ಕೇಳುತ್ತಿದ್ದರು. ಕಲಾ ವಿಭಾಗದ ಯಾರಾದರು ಒಬ್ಬರು ಜೊತೆಗಿಲ್ಲದೆ ಸೌಂದರ್ಯ ಅವರು ನೀರಿಗೆ ಇಳಿಯುತ್ತಿರಲಿಲ್ಲ. ನಂತರದಲ್ಲಿ ಅವರು ವಿಮಾನ ಅಪಘಾತದಲ್ಲಿ ನಿಧನರಾದರು. ನೀರಲ್ಲಿ ರಕ್ಷಣೆ ಮಾಡಲು ನಾವಿದ್ದೆವು. ಆದರೆ ಆಕಾಶದಲ್ಲಿ ರಕ್ಷಣೆ ಮಾಡಲು ನಮಗೇನು ಮಾಡಲು ಸಾಧ್ಯವಾಗಲಿಲ್ಲ. ಇದು ನನ್ನನ್ನು ಇನ್ನೂ ಕಾಡುತ್ತಿದೆ’ ಎನ್ನುತ್ತಾ ಕಲಾ ನಿರ್ದೇಶಕ ಶಶಿಧರ್‌ ಅಡಪ ಭಾವುಕರಾದರು.

ಕಾರ್ಯಕ್ರಮದಲ್ಲಿ ಛಾಯಾಚಿತ್ರಗ್ರಾಹಕರಾದ ಅದ್ವೈತ್ ಗುರುಮೂರ್ತಿ, ಜಿ.ಎಸ್‌.ಭಾಸ್ಕರ್‌, ನಿರ್ದೇಶಕ ಪಿ.ಶೇಷಾದ್ರಿ ಉಪಸ್ಥಿತರಿದ್ದರು. 

ದಿನದ ಪಾಸ್‌ ಲಭ್ಯ 

ಚಿತ್ರೋತ್ಸವದಲ್ಲಿ ಭಾಗವಹಿಸಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದ್ದು ಸೋಮವಾರದಿಂದ(ಮಾರ್ಚ್‌ 4) ₹200ಕ್ಕೆ ದಿನದ ಪಾಸ್‌ ವಿತರಿಸಲಾಗಿದೆ. ಮೊದಲ ದಿನವೇ 160ಕ್ಕೂ ಅಧಿಕ ಜನರು ಈ ಪಾಸ್‌ ಖರೀದಿಸಿದ್ದಾರೆ. ಮಾರ್ಚ್‌ 6ರವರೆಗೆ ಚಿತ್ರೋತ್ಸವ ನಡೆಯಲಿದೆ. 

ಮಲೆನಾಡಿನ ಮಳೆಗಾಲದ ಸಾಹಸ!

ಮಲೆನಾಡಿನ ಮಳೆಗಾಲದ ಅನುಭವವನ್ನು ತೆರೆ ಮೇಲೆ ತರಲು ಚಿತ್ರತಂಡ ಯಾವೆಲ್ಲಾ ಸಾಹಸ ಮಾಡಿತ್ತು ಎನ್ನುವುದನ್ನು ಕಾಸರವಳ್ಳಿ ಅವರು ವಿವರಿಸಿದ್ದು ಹೀಗೆ. 

*ಮೋಡವಿದ್ದಾಗಲೇ ಚಿತ್ರೀಕರಣ. ಹೀಗಾದಾಗ ದೃಶ್ಯಗಳಲ್ಲಿ ನೀಲಿಬಣ್ಣ ತುಂಬಿ ಮಳೆಗಾಲದ ಅನುಭವ *ಬೆಟ್ಟಹತ್ತಿ ಮೋಡವಿಲ್ಲದೆ ಸಂಜೆಯವರೆಗೂ ಕಾದು ಮರಳಿದ್ದೂ ಇದೆ

*ಯಾವ ಸಂದರ್ಭದಲ್ಲೂ ಕಣ್ಣಿಗೆ ಕುಕ್ಕುವ ಬಣ್ಣದ ಬಟ್ಟೆಗಳ ಬಳಕೆ ಇಲ್ಲ 

*ಕ್ಯಾಮೆರಾ ಮುಂದೆ ಏನೇನು ಕಾಣುತ್ತದೆಯೋ ಅವುಗಳೆಲ್ಲವೂ ಒದ್ದೆಯಾಗಿರಬೇಕು

*ಎಳೆ ಹಸಿರು ಬೇಕು ಎಂದು ಒಂದೇ ದೃಶ್ಯಕ್ಕಾಗಿ 25 ಕಿ.ಮೀ. ಪ್ರಯಾಣ 

*ಮೋಡಗಳ ಮೇಲೆ ನಿಗಾ ಇಡಲು ‘ಕ್ಲೌಡ್‌ ವಾಚರ್‌’ ನಿಯೋಜಿಸಿದ್ದೆವು. ಆತನ ಹೆಸರು ಆನಂದ್‌. ಮೊದಲೆರಡು ದಿನ ಹುಮ್ಮಸ್ಸಿನಲ್ಲಿ ಮೋಡ ಬಂತು ಎಂದು ಕೂಗುತ್ತಿದ್ದ ಈತ ದಿನ ಉರುಳಿದಂತೆ ‘ಮೋಡ ಬರ್ತಿದೆ ಆದರೆ ನಮ್ಮ ಮೇಲೆಯೇ ಬರುತ್ತದೆಯೇ ಎಂದು ತಿಳಿದಿಲ್ಲ’ ಎನ್ನುತ್ತಿದ್ದ.

ಕಾಸರವಳ್ಳಿ ಸಿನಿಮಾಗಳ ಕುರಿತು

ಕೃತಿ ನಿರ್ದೇಶಕ ಗಿರೀಶ ಕಾಸರವಳ್ಳಿ ನಿರ್ದೇಶನದ 16 ಸಿನಿಮಾಗಳ ಕುರಿತು ‘ಬಿಂಬ–ಬಿಂಬನ’ ಎಂಬ ಕೃತಿ ಶೀಘ್ರದಲ್ಲೇ ಬರಲಿದ್ದು ಇದರಲ್ಲಿ ಗೋಪಾಲಕೃಷ್ಣ ಪೈ ಅವರ ಜೊತೆಗೂಡಿ ಕಾಸರವಳ್ಳಿ ಅವರೇ ತಮ್ಮ ಸಿನಿಮಾಗಳ ಕಥಾನಕವನ್ನು ವಿಸ್ತರಿಸಿದ್ದಾರೆ. ಉದಾಹರಣೆಗೆ ‘ದ್ವೀಪ’ ಚಿತ್ರದಲ್ಲಿ ಹುಲಿಯ ಪ್ರಸ್ತಾಪ ಮತ್ತೆ ಮತ್ತೆ ಬಂದರೂ ಹುಲಿ ಏಕೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಕಾಸರವಳ್ಳಿಯವರು ಈ ಕೃತಿಯಲ್ಲಿ ವಿವರ ನೀಡಿದ್ದಾರೆ. ಪ್ರಶ್ನೋತ್ತರದ ರೀತಿಯಲ್ಲಿ ಪ್ರತಿ ಸಿನಿಮಾದ ಕುರಿತು ತಲಾ 20–25 ಪುಟಗಳಷ್ಟು ವಿವರಣೆ ಈ ಕೃತಿಯಲ್ಲಿದೆ.    

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.