ನನ್ನೂರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ. ನಂಗೆ ಚಿಕ್ಕಂದಿನಿಂದಲೂ ಕ್ರೀಡೆಯ ಮೇಲೆ ಅಪಾರ ಆಸಕ್ತಿ ಇತ್ತು. ಶಾಲೆಯಲ್ಲಿಯೂ ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂದಿದ್ದೆ. ನನ್ನಪ್ಪ ಸಿಐಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬೆಳಿಗ್ಗೆ ಸೈಕಲ್‌ನಲ್ಲಿ ಹೋಗುವಾಗ ಅವರ ಹಿಂದೆ ಮೂರು ಕಿಲೋಮೀಟರ್ ರನ್ನಿಂಗ್ ಮಾಡಿಸುತ್ತಿದ್ದರು. ಕ್ರೀಡೆಯಲ್ಲಿ ಆಸಕ್ತಿ ಇದ್ದಿದ್ದರಿಂದ ಜಿಮ್ನಾಸ್ಟಿಕ್ ಕಲಿತುಕೊಂಡೆ. ನಿರ್ಮಾಣ ಹಂತದ ಮನೆ, ಕಟ್ಟಡಗಳ ಮುಂದೆ ಮರಳು ಸುರಿದಿರುತ್ತಿದ್ದರು. ಆ ಮರಳಿನ ಮೇಲೆ ನಾನು ಮತ್ತು ನನ್ನ ಸಹೋದರ ಡೈವ್ ಮಾಡುತ್ತಿದ್ದೆವು.
1993ರ ಸಮಯವದು. ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿ ಕುಮಾರ್ ಬಂಗಾರಪ್ಪ ನಟನೆಯ ‘ಅಂಗೈಲಿ ಅಪ್ಸರೆ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅದಕ್ಕೆ ಬಾಲಿವುಡ್‌ನ ರಾಮ್‌ಶೆಟ್ಟಿ ಫೈಟ್ ಮಾಸ್ಟರ್. ಅದೊಂದು ಚಿಕ್ಕ ಕಾಂಪೌಂಡ್. ಹತ್ತು ಅಡಿ ಎತ್ತರದಿಂದ ನೆಲಕ್ಕೆ ಜಿಗಿಯಲು ಬೆಡ್ ಹಾಕಿದ್ದರು. ಬಾಂಬೆಯ ಸ್ಟಂಟ್ ಕಲಾವಿದರು ಕರಸತ್ತು ನಡೆಸುತ್ತಿದ್ದರು. ನಾನು ಮತ್ತು ನನ್ನ ಸಹೋದರ ಕಾಂಪೌಂಡ್ ಮೇಲಿಂದ ಡೈವ್ ಹೊಡೆದೆವು. ಆಗ ರಾಮ್‌ಶೆಟ್ಟಿ ಸೇರಿದಂತೆ ಅಲ್ಲಿದ್ದವರು ನಮ್ಮ ಬಗ್ಗೆ ಮಾತನಾಡಿಕೊಂಡರು.
ಆ ನಂತರ ಸ್ಟುಡಿಯೊದ ಮೇಲಕ್ಕೆ ಹೋಗಿ ಬ್ಯಾಕ್ ಸಮ್ಮರ್ ಶಾಟ್ ಹೊಡೆದು ಲ್ಯಾಂಡ್ ಆದೆ. ಅಲ್ಲಿದ್ದ ಚಿತ್ರತಂಡದ ಸದಸ್ಯರು ಅದನ್ನು ನೋಡಿ ಇಂತಹ ಸಾಹಸ ಮಾಡಬಾರದು ಎಂದು ಸಲಹೆಯಿತ್ತರು. ಬೆಂಗಳೂರಿಗೆ ಬಂದರೆ ಸಾಹಸ ನಿರ್ದೇಶಕರ ಸಂಘದಿಂದ ‘ಫೈಟರ್ ಕಾರ್ಡ್’ ಮಾಡಿಸಿಕೊಡುವುದಾಗಿ ಕುಮಾರ್ ಬಂಗಾರಪ್ಪ ಭರವಸೆ ನೀಡಿದರು. ಆಗಲೇ ನಾನು ಬೆಂಗಳೂರಿನ ಬಸ್ ಹತ್ತಿದ್ದು.
ನನ್ನ ಮೂಲ ಹೆಸರು ಲಕ್ಷ್ಮಣ್. ಸಹೋದರನ ಹೆಸರು ರಾಮ್. ಮೈಸೂರಿನಲ್ಲಿ ರಜ್ಜು ಮಾಸ್ಟರ್ ಎಂಬುವರು ಇದ್ದರು. ‘ಅಂಗೈಲಿ ಅಪ್ಸರೆ’ ಶೂಟಿಂಗ್ ಸ್ಥಳಕ್ಕೆ ಮೈಸೂರಿನ ಫೈಟರ್ಸ್ ಬಂದಿದ್ದರು. ಅವರೇ ನಮ್ಮನ್ನು ರಜ್ಜು ಬಳಿಗೆ ಕರೆದೊಯ್ದರು. ಅಲ್ಲಿಯವರೆಗೂ ನಮಗೆ ಸಿನಿಮಾದ ಫೈಟಿಂಗ್ ಬಗ್ಗೆ ಗೊತ್ತಿರಲಿಲ್ಲ. ಅಲ್ಲಿ ಬಿಟ್ಸ್, ಟೈಮಿಂಗ್ ಬಗ್ಗೆ ಕಲಿತೆವು. ಆ ನಂತರ ಫೈಟರ್ ಕಾರ್ಡ್‌ಗೆ ಹೆಸರು ಕೊಡುವಾಗ ‘ಜಾನಿ– ಡ್ಯಾನಿ’ ಎಂದು ರಜ್ಜು ಅವರೇ ಹೆಸರಿಟ್ಟರು. ನಾನು ಫೈಟರ್ ಆಗಿ ಕೆಲಸ ಮಾಡಿದ ಕೊನೆಯ ಚಿತ್ರ ‘ಅಭಿ’. ಫೈಟ್ ಮಾಸ್ಟರ್ ಆಗಿ ಸಾಹಸ ನಿರ್ದೇಶನ ಆರಂಭಿಸಿದ ಚಿತ್ರ ‘ಎಕ್ಸ್‌ಕ್ಯೂಸ್‌ಮಿ’. ಫೈಟ್ ಮಾಸ್ಟರ್ ಆಗಿ ಇಲ್ಲಿಯವರೆಗೂ 600ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. 326 ಚಿತ್ರಗಳಿಗೆ ಫೈಟರ್ ಆಗಿ ದುಡಿದಿರುವೆ.
‘ಹಿಮಪಾತ’ದ ನೆನಪು: ವಿಷ್ಣುವರ್ಧನ್ ನಟನೆಯ ‘ಹಿಮಪಾತ’ ಚಿತ್ರದ ಶೂಟಿಂಗ್ ಸಂದರ್ಭವದು. ವಿಷ್ಣು ಅವರ ಡೂಪ್ ಆಗಿ ನಾನು ನದಿಗೆ ಬೀಳಬೇಕಿತ್ತು. ಮೇಕೆದಾಟುವಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. 170 ಅಡಿಯ ಮೇಲಿಂದ ಕೆಳಗೆ ಬೀಳಬೇಕಿತ್ತು. ಅಲ್ಲಿನ ಸುಳಿಗಳಿಗೆ ಸಿಲುಕಿ ಆ ವೇಳೆಗೆ 113 ಜನರು ಸತ್ತಿದ್ದರು. ಅಲ್ಲಿನವರೇ ಚಿತ್ರತಂಡಕ್ಕೆ ಈ ಮಾಹಿತಿ ನೀಡಿದ್ದರು.
ಆದರೆ, ಇಡೀ ಚಿತ್ರತಂಡವೇ ಬಂದಿತ್ತು. ಈಜಾಟದಲ್ಲಿ ನನಗೆ ಸಾಕಷ್ಟು ಪರಿಣತಿ ಇದೆ. ನೀರಿನ ಮೇಲೆ ಮಲಗುವುದು, ಸಮುದ್ರದಲ್ಲಿ ಐದಾರು ಗಂಟೆ ಈಜುವ ಸಾಮರ್ಥ್ಯ ಇದೆ. ಹಾಗಾಗಿ, ನೀರಿಗೆ ಜಿಗಿಯಲು ನಿರ್ಧರಿಸಿದೆ. ನನಗೆ ಕೆಂಪುಬಟ್ಟೆಯೇ ಸಿಗ್ನಲ್ ಆಗಿತ್ತು. ನೀರಿಗೆ ಜಿಗಿದು ಬಿಟ್ಟೆ. ಸುಳಿಗೆ ಸಿಕ್ಕಿಕೊಂಡೆ. ನೀರು ನನ್ನನ್ನು ಎಳೆದುಕೊಂಡು ಹೋಗುತ್ತಿತ್ತು. ಸಾಹಸಪಟ್ಟು ನೀರಿನಿಂದ ಮೇಲೆ ಬಂದೆ. ಬಂಡೆಗಳನ್ನು ಹತ್ತಿ ಚಿತ್ರತಂಡವಿದ್ದ ಸ್ಥಳಕ್ಕೆ ಹೋದೆ. ಆ ವೇಳೆ ಬದುಕಿಬಂದಿದ್ದೆ ನನ್ನ ಪುಣ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.