ADVERTISEMENT

ಎಡಿಟಿಂಗ್‌ ಹೌಸ್‌ಗಳ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 17 ಮೇ 2020, 19:30 IST
Last Updated 17 ಮೇ 2020, 19:30 IST
ಬಿ.ಎಸ್‌. ಕೆಂಪರಾಜು
ಬಿ.ಎಸ್‌. ಕೆಂಪರಾಜು   

ಸಿನಿಮಾ, ಧಾರಾವಾಹಿ, ಕಿರುಚಿತ್ರ, ಸಾಕ್ಷ್ಯಚಿತ್ರಗಳ ಸಂಕಲನ ಮಾಡುತ್ತಿದ್ದ ಎಡಿಟಿಂಗ್‌ ಹೌಸ್‌ಗಳ ಮೇಲೆಯೂ ಕೋವಿಡ್ ‌19 ಬಿಸಿ ತಟ್ಟಿದೆ. ಪರದೆ ಮೇಲೆ ಸಿನಿಮಾಗಳ ಅಂದಚೆಂದ ಹೆಚ್ಚಿಸುವ ಸಂಕಲನಕಾರರ ಕಥೆ ಶೋಚನೀಯವಾಗಿದೆ.

ಹೊಸಬರಿಗೆ ಕಡಿಮೆ ಖರ್ಚಿನಲ್ಲಿ ಡಬ್ಬಿಂಗ್‌, ವಿಡಿಯೊ ಮತ್ತು ಆಡಿಯೊ ಸಂಕಲನ ಮಾಡಿಕೊಡಬೇಕು ಎಂಬ ಆಸೆ ಇಟ್ಟುಕೊಂಡು ಆರಂಭವಾಗಿದ್ದೇ ಶಂಕ್ರಣ್ಣ ಸ್ಟುಡಿಯೊ. ಈ ಸ್ಟುಡಿಯೊ ಈಗ ಖಾಲಿ ಹೊಡೆಯುತ್ತಿದೆ. ‘ಕಟ್ಟಡ ಬಾಡಿಗೆ, ವಿದ್ಯುತ್‌ ಹೀಗೆ ಎಲ್ಲದಕ್ಕೂ ಹಣ ಹೊಂದಿಸುವುದು ಎಲ್ಲಿಂದ? ಇಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಬೇಕು. ಎಡಿಟಿಂಗ್‌ ಸೌಲಭ್ಯಗಳಿಗೆ ಹಾಕಿದ ಬಂಡವಾಳವೂ ಬರುತ್ತಿಲ್ಲ’ ಎಂದು ನೋವು ತೋಡಿಕೊಳ್ಳುತ್ತಾರೆ ಸ್ಟುಡಿಯೊ ಮಾಲೀಕ ಜೀವನ್‌ ಗಂಗಾಧರಯ್ಯ.

ಮನೆಯಲ್ಲೇ ಪುಟ್ಟ ಸ್ಟುಡಿಯೊ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಸಂಕಲನಕಾರರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಮನೆಯಲ್ಲಿಯೇ ಕಂಪ್ಯೂಟರ್‌ ಇಟ್ಟುಕೊಂಡು ಸಾಕ್ಷ್ಯಚಿತ್ರಗಳನ್ನು ಎಡಿಟ್‌ ಮಾಡಿಕೊಂಡಿದ್ದ ಅಶ್ವಿನಿ ಲೋಕೇಶ್‌ ಅವರು ಕಳೆದ ಎರಡು ತಿಂಗಳಿಂದ ನಿರುದ್ಯೋಗಿಯಾಗಿದ್ದಾರೆ.

ADVERTISEMENT

ಸಣ್ಣ ಸ್ಟುಡಿಯೊಗಳ ಕಥೆ ಹೀಗಾದರೆ, ದೊಡ್ಡ ಸ್ಟುಡಿಯೊಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿವೆ. ‘ನಮ್ಮ ಸ್ಟುಡಿಯೊದಲ್ಲಿ ‘ದಂತ ಪುರಾಣ’, ‘ತಲೆದಂಡ’, ‘ಅಮೃತ ಅಪಾರ್ಟ್‌ಮೆಂಟ್ಸ್’ ಸಿನಿಮಾಗಳ ಸಂಕಲನ ನಡೆಯುತಿತ್ತು. ಕೊರೊನಾ ಲಾಕ್‌ಡೌನ್‌ನಿಂದ ಎಲ್ಲವೂ ಸ್ಥಗಿತಗೊಂಡಿದೆ.ನಾವಿಲ್ಲಿ ಸಂಕಲನ ಮಾಡದೆ ಡಬ್ಬಿಂಗ್‌ ಕೂಡ ಸಾಧ್ಯವಿಲ್ಲ. ನಮಗೆ ವರ್ಕ್‌ ಫ್ರಮ್‌ ಹೋಂ ಇಲ್ಲ. ಆನ್‌ಲೈನ್‌ ಮೂಲಕ ಸಂವಹನ ಮಾಡಿ ಕೆಲಸ ಮಾಡಲು ಸಾಧ್ಯವಿಲ್ಲ.ತಾಂತ್ರಿಕ ತಂಡವು ಜತೆಯಲ್ಲೇ ಇರಬೇಕು. ಧಾರಾವಾಹಿಯ ಪ್ರತಿದಿನ ಸಂಚಿಕೆಯಂತೆ ಚಿತ್ರೀಕರಣವಾಗಬೇಕು. ಅದು ಸಂಪೂರ್ಣ ಬಂದ್ ಆಗಿದೆ’ ಎನ್ನುತ್ತಾರೆ ನೆನಪಿರಲಿ ಎಡಿಟಿಂಗ್ ಸ್ಟುಡಿಯೊ ಹಾಗೂ ಲ್ಯಾಟಿಟ್ಯೂಡ್‌ಫ್ರೇಮ್‌ ಟು ಸ್ಕ್ರೀನ್‌ ಡಿಜಿಟಲ್‌ ಲ್ಯಾಬ್‌ ಮಾಲೀಕರಾದ ಸಂಪತ್‌ ಹಾಗೂಬಿ.ಎಸ್‌. ಕೆಂಪರಾಜು.

ಸಂಘದಿಂದ ನೆರವು

ಕರ್ನಾಟಕ ಸಂಕಲನಕಾರರ ಸಂಘದ ಸದಸ್ಯರಿಗೆ ಆಹಾರದ ಕಿಟ್‌ ವಿತರಿಸಲಾಗಿದೆ. ಜೊತೆಗೆ ಸ್ವಯಂ ಸೇವಾ ಸಂಸ್ಥೆಯ ಒಕ್ಕೂಟ, ಕಲ್ಯಾಣ್‌ ಜ್ಯುವೆಲ್ಲರಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಮೂರು ಸಾವಿರ ರಿಲೈನ್ಸ್‌ ಓಚರ್‌ ಮತ್ತು ಫಿಲಂ ಚೇಂಬರ್‌ನಿಂದ 50 ಮೂಟೆ ಅಕ್ಕಿ ವಿತರಿಸಲಾಗಿದೆ. ತೀರ ಕಷ್ಟದಲ್ಲಿ ಇರುವವರಿಗೆ ಸಂಕಲನಕಾರರಾದ ಬಸವರಾಜ್‌ ಅರಸ್ (ಶಿವು), ಸಂಪತ್ ಆರ್ಥಿಕ ಸಹಾಯ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.