ADVERTISEMENT

‘ಏಕ್‌ ಲವ್‌ ಯಾ’ ಟ್ರೇಲರ್‌ ಬಿಡುಗಡೆ: ಪ್ರೇಮ್‌ ದೃಶ್ಯ ವೈಭವಕ್ಕೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 13:01 IST
Last Updated 11 ಫೆಬ್ರುವರಿ 2022, 13:01 IST
ರಾಣಾ ಹಾಗೂ ರೀಷ್ಮಾ ನಾಣಯ್ಯ
ರಾಣಾ ಹಾಗೂ ರೀಷ್ಮಾ ನಾಣಯ್ಯ   

‘ಜೋಗಿ’ ಖ್ಯಾತಿಯ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಸಿನಿಮಾ ಫೆ.24ರಂದು ತೆರೆಕಾಣಲಿದ್ದು, ಚಿತ್ರದ ಟ್ರೇಲರ್‌ ಶುಕ್ರವಾರ ಮೈಸೂರಿನಲ್ಲಿ ಬಿಡುಗಡೆಯಾಗಿದೆ.

ಪ್ರೇಮ್‌, ಸಿನಿಮಾದಲ್ಲಿ ಹಾಡುಗಳಿಗೆ ಹಾಗೂ ಅದ್ಧೂರಿತನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿರ್ದೇಶಕರಲ್ಲೊಬ್ಬರು. ಇದಕ್ಕೆ ಪೂರಕವಾಗಿಯೇ ‘ಏಕ್‌ ಲವ್‌ ಯಾ’ ಟ್ರೇಲರ್‌ ಮೂಡಿಬಂದಿದೆ. ಸಿಗರೇಟ್‌ ಸೇದುತ್ತಾ, ಡೈಲಾಗ್‌ ಹೊಡೆಯುತ್ತಾ ನಟಿ ರಚಿತಾ ರಾಮ್‌ ಬೋಲ್ಡ್‌ ಲುಕ್‌ನಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ರಾಣಾ ಹಾಗೂ ರೀಷ್ಮಾ ನಾಣಯ್ಯ ಪ್ರೇಮಕಥೆಯ ದೃಶ್ಯವೈಭವಕ್ಕೆ ಸಾಮಾಜಿಕ ಜಾಲತಾಣದ ಮುಖಾಂತರ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ರಕ್ಷಿತಾ ಸೋದರ ರಾಣಾ, ಚೊಚ್ಚಲ ಚಿತ್ರದಲ್ಲೇ ಭರ್ಜರಿ ಆ್ಯಕ್ಷನ್‌ ಸೀಕ್ವೆನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕಳೆದ ಜ.21ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರದ ಹೇರಿದ್ದ ನಿರ್ಬಂಧಗಳ ಕಾರಣ ಸಿನಿಮಾ ಬಿಡುಗಡೆಯನ್ನು ಚಿತ್ರತಂಡವು ಮುಂದೂಡಿತ್ತು.

ರಕ್ಷಿತಾ ಪ್ರೇಮ್‌ ನಿರ್ಮಾಣದ, ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ ನೀಡಿರುವ ಈ ಸಿನಿಮಾದ ‘ಮೀಟ್‌ ಮಾಡೋಣ ಇಲ್ಲ ಡೇಟ್‌ ಮಾಡೋಣ’, ‘ಎಣ್ಣೆಗೂ ಹೆಣ್ಣಿಗೂ..’ ಹಾಡುಗಳು ಈಗಾಗಲೇ ಹಿಟ್‌ ಆಗಿದ್ದು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಚಿತ್ರದ ಐದು ಹಾಡುಗಳು ಬಿಡುಗಡೆಯಾಗಿದ್ದು, ಆರನೇ ಹಾಡನ್ನು ಫೆ.14ರಂದು ಪ್ರೇಮಿಗಳ ದಿನದ ಸಂದರ್ಭದಲ್ಲಿ ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸುವುದಾಗಿ ಪ್ರೇಮ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.