ADVERTISEMENT

ಸ್ಮೃತಿ ಇರಾನಿ ನಡಿಗೆ,ಏಕ್ತಾ ಕಪೂರ್ ಬೆರಗು!

ಏಕ್ತಾ ಕಪೂರ್ ಮತ್ತು ಸ್ಮೃತಿ ಇರಾನಿ ಬಂಧ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:30 IST
Last Updated 2 ಜೂನ್ 2019, 19:30 IST
ಸಮಾರಂಭವೊಂದರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಏಕ್ತಾ ಕಪೂರ್ ಮತ್ತು ಸ್ಮೃತಿ ಇರಾನಿ
ಸಮಾರಂಭವೊಂದರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಏಕ್ತಾ ಕಪೂರ್ ಮತ್ತು ಸ್ಮೃತಿ ಇರಾನಿ   

ಏಕ್ತಾ ಕಪೂರ್ ಕಿರುತೆರೆಯಲ್ಲಿ ದೊಡ್ಡ ಹೆಸರು. ಈಗ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವತ್ತ ಮುನ್ನುಗ್ಗುತ್ತಿರುವ ಸ್ಮೃತಿ ಇರಾನಿ ಅವರಿಗೆ ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಬ್ರೇಕ್ ನೀಡಿದ, ಸ್ವತಃ ನಿರ್ಮಾಪಕಿಯಾಗಿ ಬ್ರೇಕ್ ಪಡೆದುಕೊಂಡ ಧಾರಾವಾಹಿಗಳ ಪ್ರತಿಭಾವಂತ ನಿರ್ಮಾಪಕಿ. 'ಕ್ಯುಂಕಿ ಸಾಸ್ ಬೀ ಕಭಿ ಬಹು ಥೀ’ ಈ ಇಬ್ಬರಿಗೂ ಬ್ರೇಕ್ ನೀಡಿದ ಧಾರಾವಾಹಿ. ಹೆಸರು, ನಟಿಯರ ಆಯ್ಕೆ, ಸಂಭಾಷಣೆ, ಮಹಿಳಾ ವೀಕ್ಷಕರನ್ನು ಹೆಚ್ಚು ಸೆಳೆದ ಗುಣಗಳಿಂದಾಗಿ ಅತ್ಯಧಿಕ ಟಿಆರ್‌ಪಿ ಇದ್ದ ಈ ಧಾರಾವಾಹಿ ಸ್ಮೃತಿಯನ್ನು ನಟಿಯಾಗಿ ಮನೆಮನೆಗಳಿಗೆ ತಲುಪಿಸಿತು.

ಈ ಸಂಗತಿಯನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವಿದೆ. ಅಮೇಠಿಯಲ್ಲಿ ಸ್ಮೃತಿ ಇರಾನಿ ದೊಡ್ಡ ಅಂತರದಿಂದ ಗೆದ್ದ ಬಳಿಕ ಏಕ್ತಾ ಮತ್ತೆ ಜೊತೆಗೂಡಿದ್ದಾರೆ. ಹಾಂ, ಧಾರಾವಾಹಿ ಮಾಡಲು ಅಲ್ಲ! ಏಕೆಂದರೆ ಸ್ಮೃತಿ ಈಗ ಮಾಜಿ ನಟಿ. ಸದ್ಯ ಯಶಸ್ವಿ ರಾಜಕಾರಣಿ. ಅವರಿಗೆ ಧಾರಾವಾಹಿ ಮಾಡಲು ಪುರುಸೊತ್ತಾದರೂ ಎಲ್ಲಿದೆ?! ತನಗೆ ಬ್ರೇಕ್ ನೀಡಿದ ಕಿರುತೆರೆ ನಿರ್ಮಾಪಕಿ ಜೊತೆ ಗೂಡಿದ್ದು ಟೆಂಪಲ್ ನಡಿಗೆಗಾಗಿ! ಅದು, ಚುನಾವಣೋತ್ತರದಲ್ಲಿ, ಭಾರಿ ಗೆಲುವಿನ ನಂತರ.

ಮುಂಬೈನಲ್ಲಿ ಈಚೆಗೆ ಈ ಇಬ್ಬರೂ ಕೂಡಿ ಸುಮಾರು 14 ಕಿ.ಮೀ ದೂರ ನಡೆದು ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿದ್ದು, ವಿಘ್ನನಿವಾರಕನ ದರ್ಶನ ಮಾಡಿದ್ದಾರೆ. ‘ನಾವು ನಡೆದೆವು. ಬರಿಗಾಲಿನಲ್ಲಿ ನಡೆದೆವು. ಕಾಲಿನಲ್ಲಿ ಶೂ ಇರಲಿಲ್ಲ. ನಂಬಲು ಆಗುತ್ತಿಲ್ಲ’ ಎಂದು ಏಕ್ತಾ ಇನ್‌ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ದೊಡ್ಡವರಿಗೆ ನಡೆಯುವ ಸಣ್ಣ ಸಂಗತಿಯೂ ಖುಷಿ ಕೊಡುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಆಗಬಹುದು. ಬಹುಶಃ ಇಲ್ಲಿ ಏಕ್ತಾಗೆ ಹೆಚ್ಚು ಖುಷಿ ನೀಡಿದ್ದು, ಬರಿಗಾಲಿನಲ್ಲಿ ನಡೆದುದಕ್ಕಿಂತಲೂ ಮಗ ರಾವಿ ಈ 'ನಡೆಯುವ ಸಂಭ್ರಮ'ದಲ್ಲಿ ಹೆಚ್ಚು ಅಳಲಿಲ್ಲ ಎಂಬುದು. 'ಸ್ಮೃತಿ ಇದ್ದರು. ಮಗನನ್ನು ಹಿಡಿದಿದ್ದು. ನಿಮಗೆ ಹೇಗೆ ಅನ್ನಿಸುತ್ತದೆ' ಎಂದು ಏಕ್ತಾ ಇದನ್ನು ಸ್ಮೃತಿಗೆ ಕ್ರೆಡಿಟ್ ನೀಡಿದ್ದಾರೆ.

ADVERTISEMENT

ಅಂದ ಹಾಗೇ, ರಾವಿ ಏಕ್ತಾಳ ಪುತ್ರ. ‘ಬಾಡಿಗೆ ತಾಯಿ’ ಪ್ರಕ್ರಿಯೆಯ ಮೂಲಕ ಪುತ್ರನನ್ನು ಪಡೆದವರು ಏಕ್ತಾ ಕಪೂರ್. ಏಕ್ತಾ ಸಂಭ್ರಮಕ್ಕೆ ದನಿಗೂಡಿಸಿರುವ ಸ್ಮೃತಿ, ‘ಇದು, ಆತನ ಮೊದಲ ದೇಗುಲ ದರ್ಶನ. ಆತನಿಗೀಗ ನಾಲ್ಕು ತಿಂಗಳು. ಅವನು ತುಂಬಾ ಅಳುತ್ತಿದ್ದ, ನನ್ನ ತೆಕ್ಕೆಯಲ್ಲಿದೆ. ನಾನು ವಿಶೇಷ ಮಾಸಿ (ಆಂಟಿ)’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ, ಏಕ್ತಾ ಬಾಲಿವುಡ್ ನಟ ಜಿತೇಂದ್ರ ಮತ್ತು ಶೋಭಾ ಕಪೂರ್ ದಂಪತಿಯ ಪುತ್ರಿ, ತುಷಾರ್ ಕಪೂರ್ ಈಕೆಯ ಸಹೋದರ. 17ನೇ ವಯಸ್ಸಿಗೆ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದರು. ಕಿರುತೆರೆಯ ಆರಂಭದ ದಿನಗಳಲ್ಲಿ ಯಶಸ್ಸಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಒಮ್ಮೆ ‘ಹಮ್ ಪಾಂಚ್’ ಧಾರಾವಾಹಿ ಯಶಸ್ವಿಯಾಗಿ ಕೈಹಿಡಿದ ಮೇಲೆ ಹಿಂದಿರುಗಿ ನೋಡಿದ್ದಿಲ್ಲ.

ಬಾಲಾಜಿ ಮೋಷನ್ ಪಿಕ್ಚರ್ಸ್‌ ಅಡಿ ಅನೇಕ ಧಾರಾವಾಹಿಗಳು, ಸಿನಿಮಾಗಳನ್ನು ನಿರ್ಮಿಸಿದ್ದಾರೆ. ‘ಹಮ್ ಪಾಂಚ್’ ಧಾರಾವಾಹಿ ಮೂಲಕ ಆರಂಭವಾದ ಯಶಸ್ಸಿನ ಪಯಣ ಇನ್ನು ಮುಂದುವರಿದಿದೆ. ‘ಡ್ರೀಂ ಗರ್ಲ್‍’ ಅವರ ಇತ್ತೀಚಿನ ಚಿತ್ರ. ಸದ್ಯ ಏಕ್ತಾ ಅವರು ಕಿರು, ಹಿರಿತೆರೆಯಲ್ಲಿ ಹೆಸರು ಮಾಡುವ ಅನೇಕ ಯುವತಿಯರ ಕನಸುಗಳು ಸಾಕಾರಕ್ಕೆ ವೇದಿಕೆ ಒದಗಿಸುತ್ತಿರುವ ಮಾನಿನಿ. ನಿರಂತರ ಶ್ರಮ ಎಂದಿಗೂ ಯಶಸ್ಸು ತರಲಿದೆ ಎಂಬುದಕ್ಕೆ ಏಕ್ತಾ, ಸ್ಮೃತಿ ಜೋಡಿಯೇ ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.