ADVERTISEMENT

ಆನ್‌ಲೈನ್‌ನಲ್ಲಿ ‘ಹೇಳಿ ಹೋಗು ಕಾರಣ’ ನಕಲಿ ಪುಸ್ತಕ ಮಾರಾಟ: ಭಾವನಾ ಬೆಳಗೆರೆ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2026, 8:30 IST
Last Updated 28 ಜನವರಿ 2026, 8:30 IST
<div class="paragraphs"><p>ಭಾವನಾ ಬೆಳಗೆರೆ </p></div>

ಭಾವನಾ ಬೆಳಗೆರೆ

   

ಚಿತ್ರ: ಇನ್‌ಸ್ಟಾಗ್ರಾಂ

ದಿ. ರವಿ ಬೆಳಗೆರೆ ಅವರು ಕನ್ನಡದ ಖ್ಯಾತ ಪತ್ರಕರ್ತ, ‘ಹಾಯ್ ಬೆಂಗಳೂರು’ ಟ್ಯಾಬ್ಲಾಯ್ಡ್ ಮತ್ತು ‘ಓ ಮನಸೇ’ ಪಾಕ್ಷಿಕದ ಸಂಪಾದಕರಾಗಿದ್ದರು. ಅವರ ಅನೇಕ ಕಾದಂಬರಿಗಳು ಇಂದಿಗೂ ಓದುಗರನ್ನು ಸೆಳೆಯುತ್ತವೆ. ಅಂತಹವುಗಳಲ್ಲಿ ಒಂದಾದ ‘ಹೇಳಿ ಹೋಗು ಕಾರಣ’ ಪ್ರೇಮ ಕಾದಂಬರಿ ಆನ್‌ಲೈನ್‌ ವೇದಿಕೆಗಳಲ್ಲಿ ಹೆಚ್ಚು ಮಾರಾಟವಾಗುತ್ತಿದ್ದು, ಪುಸ್ತಕದ ದುರ್ಬಳಕೆ ಆಗುತ್ತಿದೆ ಎಂದು ನಟಿ ಭಾವನಾ ಬೆಳಗೆರೆ ಆಕ್ರೋಶ ಹೊರ ಹಾಕಿದ್ದಾರೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಹೇಳಿ ಹೋಗು ಕಾರಣ ಪ್ರೇಮ ಕಾದಂಬರಿ ಓದುಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬಹುತೇಕರು ಆನ್‌ಲೈನ್‌ ಅಪ್ಲಿಕೇಷನ್‌ಗಳಾದ ಮೀಶೋ, ಫ್ಲಿಪ್ ಕಾರ್ಟ್, ಅಮೆಜಾನ್‌ಗಳಲ್ಲಿ ಪುಸ್ತಕವನ್ನು ಖರೀದಿಸುತ್ತಿದ್ದಾರೆ. ಆದರೆ ಆನ್‌ಲೈನ್‌ಗಳಲ್ಲಿ ಪುಸ್ತಕವನ್ನು ನಕಲು ಮಾಡಿ, ಕಡಿಮೆ ಬೆಲೆಯಲ್ಲಿ ಓದುಗರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ನಟಿ ಭಾವನಾ ಬೆಳಗೆರೆ ಆರೋಪಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮೂಲಕ ಆನ್‌ಲೈನ್‌ ಆ್ಯಪ್‌ಗಳ ವಿರುದ್ಧ ಕಿಡಿ ಕಾರಿದ್ದಾರೆ.

ಭಾವನಾ ಬೆಳಗೆರೆ ಹೇಳಿದ್ದೇನು?

‘ನನಗೆ ತುಂಬಾ ಕೋಪ ಬರುತ್ತಿದೆ. ನಮ್ಮ ತಂದೆ ಇರುವವರೆಗೂ ನಾವು ಕಾಪಾಡಿಕೊಂಡು ಬಂದಿರುವಂತಹ ಗುಣಮಟ್ಟ, ಬರಹ ನಮ್ಮ ಪ್ರತಿಯೊಂದು ಪುಸ್ತಕವನ್ನು ಕೈಗೆತ್ತಿಕೊಂಡರೆ ನಿಮಗೆ ಗೊತ್ತಾಗುತ್ತದೆ. ಒಂದು ಪುಟ ಕೂಡ ಬದಲಾಗದಂತೆ ನೋಡಿಕೊಳ್ಳುತ್ತೇವೆ. ಆದರೆ ನಾನು ಮೀಶೋ, ಫ್ಲಿಪ್ ಕಾರ್ಟ್, ಅಮೆಜಾನ್‌ಗಳಲ್ಲಿ ‘ಹೇಳಿ ಹೋಗು ಕಾರಣ’ ಮುದ್ರಣವನ್ನು ಖರೀದಿ ಮಾಡಿದ್ದೀನಿ. ಇದಕ್ಕೂ ನಮ್ಮ ಪುಸ್ತಕಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಇದನ್ನು ನೋಡುತ್ತಿದ್ದರೇ ನನ್ನ ರಕ್ತ ಕುದಿಯುತ್ತಿದೆ. ನಿಮಗೆ ಗೊತ್ತಿಲ್ಲದೇ ನನ್ನ ಮೇಲೆ ಆರೋಪ ಬರುತ್ತದೆ. ಹೀಗಾಗಿ ಈ ಮೂರು ಆನ್‌ಲೈನ್‌ ವೇದಿಕೆ ವಿರುದ್ಧ ತಲಾ ₹1 ಕೋಟಿ ಕೇಸ್‌ ಹಾಕುತ್ತಿದ್ದೇನೆ. ಈಗಾಗಲೇ ಕೋರ್ಟ್‌ಗೆ ಇದನ್ನು ಸಲ್ಲಿಸಲು ವಕೀಲರನ್ನು ಸಿದ್ಧಪಡಿಸಿದ್ದೇನೆ. ಇವರನ್ನು ಸುಮ್ಮನೆ ಬಿಡೋದಿಲ್ಲ. ಇದು ನನ್ನ ಕಡೆಯಿಂದ ಮುದ್ರಣ ಆಗುತ್ತಿದೆ ಎಂದು ತಿಳಿದುಕೊಳ್ಳಬೇಡಿ. ಇದೆಲ್ಲಾ ನಕಲಿ ಪುಸ್ತಕ. ಅದರಲ್ಲಿ ಕೆಲವೊಂದು ಪುಟಗಳೇ ಇಲ್ಲ. ಇದಕ್ಕೆ ನನಗೆ ನ್ಯಾಯ ಬೇಕು. ಈ ಪುಸ್ತಕವನ್ನು ಖರೀದಿ ಮಾಡಲೇಬೇಡಿ. ಖರೀದಿಸಿ ಮೋಸ ಹೋಗಬೇಡಿ. ಇದೆಲ್ಲ ಕೊಳಕು ಮನಸ್ಥಿತಿಯವರು ಮಾಡುತ್ತಿರುವ ಕೆಲಸ’ ಎಂದು ಕಿಡಿ ಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.