ADVERTISEMENT

ಆರೋಪ ಸಾಬೀತಾದರೆ ನಟಿ ರಾಗಿಣಿ ವಿರುದ್ಧ ಕ್ರಮ: ಫಿಲ್ಮ್‌ ಚೇಂಬರ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 13:50 IST
Last Updated 5 ಸೆಪ್ಟೆಂಬರ್ 2020, 13:50 IST
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ   

ಡ್ರಗ್ಸ್‌ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ವಿರುದ್ಧದ ಆರೋಪ ಸಾಬೀತಾದರೆ ಆಕೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.

ಕನ್ನಡ ಚಲನಚಿತ್ರ ನಟ, ನಟಿಯರ ವಿರುದ್ಧ ಕೇಳಿಬರುತ್ತಿರುವ ಆರೋಪ ಸಂಬಂಧ ಬೆಂಗಳೂರಿನಲ್ಲಿರುವ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಶನಿವಾರ ಪದಾಧಿಕಾರಿಗಳ ತುರ್ತು ಸಭೆ ನಡೆಯಿತು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌, ‘ಡಾ.ರಾಜ್‌ಕುಮಾರ್‌ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ. ಅವರ ಆದರ್ಶಗಳೇ ಇಂದಿಗೂ ನಮಗೆ ಮಾದರಿ. ಈಗ ಚಿತ್ರರಂಗಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿವೆ. ತಪ್ಪಿತಸ್ಥರ ವಿರುದ್ಧ ಮಂಡಳಿಯಿಂದಲೂ ಕ್ರಮಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ADVERTISEMENT

ರಾಗಿಣಿ ಫಿಲ್ಮ್‌ ಚೇಂಬರ್‌ನ ಸದಸ್ಯತ್ವ ಪಡೆದಿಲ್ಲ. ಆದರೆ, ನಿರ್ಮಾಪಕರು ಆಕೆ ನಟಿಸುವ ಸಿನಿಮಾಗಳ ಮೇಲೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡುತ್ತಾರೆ. ನಿರ್ಮಾಪಕರ ಹಿತದೃಷ್ಟಿಯಿಂದ ಆಕೆಯ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

‘ಡ್ರಗ್ಸ್‌ ದಂಧೆ ಸಂಬಂಧ ಮುಕ್ತವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಯಾರೋ ಒಬ್ಬರು ಮಾಡಿರುವ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಶಾಂತ್‌ ಸಂಬರಗಿ ವಿರುದ್ಧವೂ ಕ್ರಮ

‘ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿರುವ ಪ್ರಶಾಂತ್‌ ಸಂಬರಗಿ ವಾಣಿಜ್ಯ ಮಂಡಳಿಯ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಚಿತ್ರರಂಗಕ್ಕೆ ಅವಮಾನ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಶೀಘ್ರವೇ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ಚಂದ್ರಶೇಖರ್‌ ತಿಳಿಸಿದರು.

ಸಾ.ರಾ. ಗೋವಿಂದು ಸವಾಲು

ನಿರ್ಮಾಪಕ ಸಾ.ರಾ. ಗೋವಿಂದು ಮಾತನಾಡಿ, ‘ಪ್ರಶಾಂತ್‌ ಸಂಬರಗಿ ವಾಣಿಜ್ಯ ಮಂಡಳಿಯ ವಿರುದ್ಧ ಅನಗತ್ಯವಾಗಿ ಆರೋಪ ಮಾಡಿದ್ದಾರೆ. ಆ ಆರೋಪ ಸಾಬೀತಾದರೆ ನಾನು ಸಿನಿಮಾ ಇಂಡಸ್ಟ್ರಿಯಿಂದ ಹೊರಹೋಗುತ್ತೇನೆ; ಆರೋಪ ಸಾಬೀತಾಗದಿದ್ದರೆ ಅವರು ರಾಜ್ಯದಿಂದ ಹೊರಹೋಗಬೇಕು’ ಎಂದು ಸವಾಲು ಹಾಕಿದರು.

‘ಸಂಬರಗಿ ಅವರಿಗೆ ಚುನಾವಣೆಯ ಹುಚ್ಚು ಹಿಡಿದಿದೆ. ಅವರ ವಿರುದ್ಧವೂ ಸಿಸಿಬಿ ತನಿಖೆ ನಡೆಸಬೇಕು. ಪರರ ಮೇಲೆ ಆರೋಪ ಹೊರಿಸುವುದೇ ಅವರ ಚಟವಾಗಿದೆ’ ಎಂದು ಟೀಕಿಸಿದರು.

ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಡಿ.ಆರ್‌. ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.