ADVERTISEMENT

ಹೊರಗಿನವರ ಹುಬ್ಬೇರಿಸಿದ ಕನ್ನಡದ ಕೆಜಿಎಫ್‌

ಯಶ್ ನಟನೆಯ ಚಿತ್ರದ ಬಗ್ಗೆ ನಾಗತಿಹಳ್ಳಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 20:20 IST
Last Updated 24 ಫೆಬ್ರುವರಿ 2019, 20:20 IST
ಕೆಜಿಎಫ್‌ ಚಿತ್ರದಲ್ಲಿ ‘ಯಶ್‌’
ಕೆಜಿಎಫ್‌ ಚಿತ್ರದಲ್ಲಿ ‘ಯಶ್‌’   

ಬೆಂಗಳೂರು: ‘ಮುಂಬೈ, ಚೆನ್ನೈ, ಹೈದರಾಬಾದ್, ತಿರುವನಂತಪುರಗಳಿಗೆ ನಾವು ಹೋದಾಗ ಅಲ್ಲಿನ ಸಿನಿಮಾ ಉದ್ಯಮವು ಕನ್ನಡದ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡುತ್ತಿದೆ. ಕನ್ನಡ ಸಿನಿಮಾ ಉದ್ಯಮ ಇಂಥದ್ದೊಂದು ಸ್ಥಿತಿಗೆ ಬರಬೇಕು ಎಂಬುದು ನಮ್ಮ ಕನಸಾಗಿತ್ತು...’

ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ‘ಕೆಜಿಎಫ್’ ಚಿತ್ರದ ಬಗ್ಗೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಹೀಗೆ ಹೆಮ್ಮೆಯಿಂದ ಮಾತನಾಡಿದವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್. ಕೆಜಿಎಫ್‌ ಚಿತ್ರದ ಕಲಾವಿದರ ಜೊತೆ ಸಂವಾದ ಕಾರ್ಯಕ್ರಮ ಸಿನಿಮೋತ್ಸವದಲ್ಲಿ ಭಾನುವಾರ ನಡೆಯಿತು.

‘ಕನ್ನಡ ಸಿನಿಮಾ ಉದ್ಯಮದವರು ಎರವಲು ಪಡೆಯುವವರು, ಇಲ್ಲಿ ಸ್ವಂತದ್ದು ಇರುವುದಿಲ್ಲ ಎಂಬ ಚುಚ್ಚು ಮಾತುಗಳು ಇದ್ದವು. ಆದರೆ, ಕೆಜಿಎಫ್‌ ಚಿತ್ರ ಕನ್ನಡದ ಹೆಮ್ಮೆ. ಇದು ತಾಂತ್ರಿಕವಾಗಿ ಕೂಡ ಬಹಳ ಹೆಸರು ಮಾಡಿದೆ’ ಎಂದು ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಾಂತ್ ನೀಲ್ ಮತ್ತು ಯಶ್ ಅವರು ಸಂವಾದದಲ್ಲಿ ಭಾಗವಹಿಸಿರಲಿಲ್ಲ.

ADVERTISEMENT

‘ಈ ಚಿತ್ರಕ್ಕೆ ಇಷ್ಟು ದೊಡ್ಡ ಪ್ರಮಾಣದ ಯಶಸ್ಸು ಸಿಗುತ್ತದೆ ಎಂದು ಮೊದಲು ಭಾವಿಸಿರಲಿಲ್ಲ. ಈ ಸಿನಿಮಾ ದೊಡ್ಡ ಮಟ್ಟದ್ದಾಗಿರಬೇಕು ಅಂತ ಮಾಡಲಿಲ್ಲ. ಆದರೆ, ನಾವೆಲ್ಲರೂ ಇದೇ ನಮ್ಮ ಜೀವನ ಎಂದು ಭಾವಿಸಿ ಕೆಲಸ ಮಾಡಿದೆವು’ ಎಂದರು ಚಿತ್ರದ ಛಾಯಾಗ್ರಹಣದ ಹೊಣೆ ಹೊತ್ತಿದ್ದ ಭುವನ್ ಗೌಡ.

‘ಕೋಲಾರ ಗೋಲ್ಡ್‌ ಫೀಲ್ಡ್ ಪ್ರದೇಶದಲ್ಲಿ ನಡೆದ ಶೇಕಡ 80ರಷ್ಟು ಚಿತ್ರೀಕರಣದಲ್ಲಿ ಕ್ಯಾಮೆರಾವನ್ನು ಹೆಗಲ ಮೇಲೆ ಹೊತ್ತುಕೊಂಡು ಮಾಡಲಾಯಿತು. ಇದರಲ್ಲಿನ ಶೇಕಡ 95ರಷ್ಟು ದೃಶ್ಯಗಳು ಒರಿಜಿನಲ್. ಉಳಿದ ಶೇಕಡ 5ರಷ್ಟನ್ನು ಮಾತ್ರ ಸಿಜಿ ಎಫೆಕ್ಟ್ಸ್‌ ಬಳಸಿ ಸಿದ್ಧಪಡಿಸಿದ್ದು’ ಎಂದರು ಭುವನ್.

ಒಳ್ಳೆಯ ಸಿನಿಮಾ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರಬೇಕು. ಪ್ರಯತ್ನಕ್ಕೆ ತಕ್ಕ ಪ್ರಶಂಸೆ ಒಂದಲ್ಲ ಒಂದು ಸಂದರ್ಭದಲ್ಲಿ ಬಂದೇ ಬರುತ್ತದೆ ಎಂದರು ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು.

ಹೆಚ್ಚಿದ ಜನಸಂದಣಿ

ವಾರಾಂತ್ಯದ ರಜೆ ಇದ್ದ ಕಾರಣ ಸಿನಿಮಾ ಪ್ರಿಯರು ಸಿನಿಮೋತ್ಸವದತ್ತ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಒರಾಯನ್ ಮಾಲ್‌ನಲ್ಲಿರುವ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ಎದುರು ಸಿನಿಮಾ ಪ್ರಿಯರು ತಮ್ಮ ಇಷ್ಟದ ಸಿನಿಮಾ ವೀಕ್ಷಿಸಲು ಸಾಲುಗಟ್ಟಿ ನಿಲ್ಲುತ್ತಿದ್ದರು. ಕೆಲವು ಸಿನಿಮಾಗಳಿಗೆ ಆಸನಗಳು ಭರ್ತಿಯಾದ ಕಾರಣ ಸಿನಿಮಾ ವೀಕ್ಷಿಸಲು ಅವಕಾಶ ಸಿಗದ ಪ್ರಸಂಗಗಳೂ ನಡೆದವು.

***

ಕೆಜಿಎಫ್‌ ಪ್ರದೇಶದಲ್ಲಿ ಹಾಕಿದ ಸೆಟ್‌ಗೆ ಪ್ಲಾಸ್ಟಿಕ್ ಬಳಸಿಲ್ಲ. ಅಲ್ಲಿ ಇದ್ದಿದ್ದು ಸಡಿಲ ಮಣ್ಣು. ಸೆಟ್ ಹಾಕಲು ಮೂರು ತಿಂಗಳು ಬೇಕಾಗಿತ್ತು.

-ಶಿವಕುಮಾರ್, ಕೆಜಿಎಫ್ ಚಿತ್ರದ ಕಲಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.