ADVERTISEMENT

ಸ್ಯಾಂಡಲ್‌ವುಡ್: ಇಂದು ಆರು ಸಿನಿಮಾಗಳ ಧಮಾಕ!

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 20:07 IST
Last Updated 18 ಜುಲೈ 2024, 20:07 IST
ಮನಸ್ವಿ
ಮನಸ್ವಿ   

ವಿದ್ಯಾರ್ಥಿ ವಿದ್ಯಾರ್ಥಿನಿಯರೇ:

ಚಂದನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಇಂದು (ಜು.19) ತೆರೆ ಕಾಣುತ್ತಿದೆ. ಈಗಿನ ಯುವ ಸಮೂಹದ ಕುರಿತ ಕಥೆ ಹೊಂದಿರುವ ಚಿತ್ರವನ್ನು ಅರುಣ್ ಅಮುಕ್ತ ನಿರ್ದೇಶಿದ್ದಾರೆ.

‘ಕಾಲೇಜು ವಿದ್ಯಾರ್ಥಿಗಳ ಕುರಿತಾದ ಕಥೆ ಹೊಂದಿರುವ ಚಿತ್ರ. ಹೊಡೆದಾಟ, ರ‍್ಯಾಗಿಂಗ್​, ಬಿಸಿರಕ್ತದ ಯುವಕರ ಪುಂಡಾಟ ಸೇರಿದಂತೆ ಹಲವು ಅಂಶಗಳು ಇವೆ. ಶಾಲೆಗಳಲ್ಲಿ ಇರುವ ಕ್ರೌರ್ಯದ ಮುಖವೊಂದನ್ನು ಬಯಲಾಗಿಸುವ ಪ್ರಯತ್ನ ಕೂಡ ಇದರಲ್ಲಿದೆ. ಮೋಜು-ಮಸ್ತಿ ಮಾಡುತ್ತ ಮೈಮರೆತವರ ಕಥೆ ಕೂಡ ಈ ಸಿನಿಮಾದಲ್ಲಿ ಇರಲಿದೆ. ದಾರಿ ತಪ್ಪಿದ ಮಕ್ಕಳನ್ನು ಹಾದಿಗೆ ತರುವ ಪ್ರಯತ್ನವೂ ಈ ಚಿತ್ರದಿಂದ ಆಗಲಿದೆ. ಚಿತ್ರರಂಗದ ಒಟ್ಟಾಗಿ ಜೊತೆಗೆ ನಿಂತರೆ ಇಂಥ ಚಿತ್ರ ಗೆಲ್ಲಬಹುದು’ ಎನ್ನುತ್ತಾರೆ ನಿರ್ದೇಶಕರು.

ADVERTISEMENT

ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ, ಕುಮಾರ್ ಗೌಡ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ರಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣಗೊಂಡಿದೆ.

ಹೆಜ್ಜಾರು

ಕಿರುತೆರೆ ಹೆಸರಾಂತ ನಿರ್ದೇಶಕ ಕೆ.ಎಸ್.ರಾಮಜಿ ಗಗನ ಎಂಟಪ್ರೈಸಸ್‌ ಮೂಲಕ ನಿರ್ಮಿಸಿ, ಗೀತ ಸಾಹಿತಿ ಹರ್ಷಪ್ರಿಯ ನಿರ್ದೇಶಿಸಿರುವ ‘ಹೆಜ್ಜಾರು’ ಚಿತ್ರ ಈ ವಾರ ತೆರೆಗೆ ಬರುತ್ತಿದೆ.

ಭಗತ್ ಆಳ್ವಾ ಚಿತ್ರದ ನಾಯಕ. ನಾಯಕಿಯಾಗಿ ಶ್ವೇತ ಲೀಯೊನಿಲ್ಲಾ ಡಿಸೋಜಾ ಹಾಗೂ ಮೊದಲ ಬಾರಿಗೆ ನವೀನ್ ಕೃಷ್ಣ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಅರುಣಾ ಬಾಲರಾಜ್, ಮುನಿರಾಜ್ ಮೊದಲಾದವರು ಚಿತ್ರದಲ್ಲಿದ್ದಾರೆ. 

‘ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್‌ ಸಿನಿಮಾವಿದು. ಥ್ರಿಲ್ಲರ್‌ ಜಾನರ್‌ನ ಕಥೆ ಹೊಂದಿದೆ. ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎನ್ನುತ್ತಾರೆ ನಿರ್ದೇಶಕ ಹರ್ಷಪ್ರಿಯ ಭದ್ರಾವತಿ.

ಅಪ್ಪ–ಮಗನ ಕಥೆಯನ್ನು ಹೊಂದಿರುವ ಸಿನಿಮಾದಲ್ಲಿ ಕಥೆ ಎರಡು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ ಎಂಬುದನ್ನು ಟ್ರೇಲರ್‌ ಹೇಳುತ್ತಿದೆ. ಮೇಲ್ನೋಟಕ್ಕೆ ಗೋಪಾಲಕೃಷ್ಣ ದೇಶಪಾಂಡೆ ಕಥೆಗೆ ತಿರುವು ನೀಡುವ ಪ್ರಬಲ ಪಾತ್ರದಲ್ಲಿ ಕಾಣಿಸಿಕೊಂಡಂತೆ ತೋರುತ್ತಿದೆ. ‘ಲೂಸಿಯಾ’ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಮರ್ ಗೌಡ ಕ್ಯಾಮೆರಾ ಕೈಚಳಕವಿದೆ. ಮಂಗಳೂರು, ಉಪ್ಪಿನಂಗಡಿ, ಗುರುವಾಯನಕೆರೆ ಹಾಗೂ ಮಲೆನಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಾಟ್ ಔಟ್:

ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಿಸಿರುವ, ಅಂಬರೀಶ್ ಎಂ ನಿರ್ದೇಶನದ ‘ನಾಟ್ ಔಟ್’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ಅಜಯ್ ಪೃಥ್ವಿಗೆ ರಚನಾ ಇಂದರ್ ಜೋಡಿಯಾಗಿದ್ದಾರೆ. ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಚಿತ್ರಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ.

ಕಡಲೂರ ಕಣ್ಮಣಿ: 

ಪ್ರೇಮಕಥಾಹಂದರ ಹೊಂದಿರುವ ‘ಕಡಲೂರ ಕಣ್ಮಣಿ’ ಚಿತ್ರ ತೆರೆ ಕಾಣುತ್ತಿದೆ. ರಾಮ್ ಪ್ರಸನ್ನ ಹುಣಸೂರು ಕಥೆ ಬರೆದು ನಿರ್ದೇಶಿಸಿದ್ದಾರೆ. ಅರ್ಜುನ್ ನಗರಕರ್ ಚಿತ್ರದ ನಾಯಕ. ಕೊಳ ಶೈಲೇಶ್ ಆರ್ ಪೂಜಾರಿ, ಬಸವರಾಜ್ ಗಚ್ಚಿ ಬಂಡವಾಳ ಹೂಡಿದ್ದಾರೆ. ಮನೋಹರ್‌ ಅವರ ಛಾಯಾಚಿತ್ರಗ್ರಹಣವಿದೆ. 

ಬ್ಯಾಕ್ ಬೆಂಚರ್ಸ್

ಕಾಲೇಜು ಜೀವನದ ಕಥೆ ಹೊಂದಿರುವ ಮತ್ತೊಂದು ಚಿತ್ರ ‘ಬ್ಯಾಕ್ ಬೆಂಚರ್ಸ್’ ಕೂಡ ಇಂದೇ ತೆರೆಗೆ ಬರುತ್ತಿದೆ. ಬಿ.ಆರ್ ರಾಜಶೇಖರ್ ನಿರ್ದೇಶನ, ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್ ಮುಂತಾದವರ ತಾರಾಗಣವಿದೆ.

ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಚಿತ್ರಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.

ಹಿರಣ್ಯ:

ರಾಜವರ್ಧನ್‌,  ರಿಹಾನಾ ಜೋಡಿಯಾಗಿರುವ ‘ಹಿರಣ್ಯ’ ಚಿತ್ರ ಇಂದು ತೆರೆ ಕಾಣುತ್ತಿದೆ. ಪ್ರವೀಣ್ ಅವ್ಯುಕ್ತ್ ಈ ಚಿತ್ರ ನಿರ್ದೇಶಕರು. ಆ್ಯಕ್ಷನ್‌-ಥ್ರಿಲ್ಲರ್‌ ಜೊತೆಗೆ ತಾಯಿ ಸೆಂಟಿಮೆಂಟ್‌ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ಬಿಗ್‌ ಬಾಸ್‌ ಖ್ಯಾತಿಯ ದಿವ್ಯಾ ಸುರೇಶ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವೇದಾಸ್‌ ಇನ್ಫಿನಿಟಿ ಪಿಕ್ಚರ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಚಿತ್ರಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.