ADVERTISEMENT

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಫಿಲಂಫೇರ್‌ ಸೌತ್‌ ಪ್ರಶಸ್ತಿ ಸಮಾರಂಭ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 9:27 IST
Last Updated 6 ಡಿಸೆಂಬರ್ 2021, 9:27 IST
ಜಿತೇಶ್ ಪಿಳ್ಳೈ, ಪೂಜಾ ಹೆಗ್ಡೆ, ಕಮರ್ ಹಾಗೂ ತಾರಾ ಅನುರಾಧ
ಜಿತೇಶ್ ಪಿಳ್ಳೈ, ಪೂಜಾ ಹೆಗ್ಡೆ, ಕಮರ್ ಹಾಗೂ ತಾರಾ ಅನುರಾಧ   

ಬೆಂಗಳೂರು: 2019–21 ಸಾಲಿನ ಫಿಲಂಫೇರ್‌ ಸೌತ್‌ 67ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದ್ದು, ಮಾರ್ಚ್‌ನಲ್ಲಿ ಎರಡು ದಿನ ಕಾರ್ಯಕ್ರಮ ನಡೆಯಲಿದೆ.

ಕಮರ್ ಫಿಲಂ ಫ್ಯಾಕ್ಟರಿ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದ್ದು, ಈ ಕುರಿತು ಫಿಲಂಫೇರ್ ಸಂಪಾದಕ ಜಿತೇಶ್ ಪಿಳ್ಳೈ, ನಟಿ ಪೂಜಾ ಹೆಗ್ಡೆ, ಕಮರ್ ಫಿಲಂ ಫ್ಯಾಕ್ಟರಿಯ ಕಮರ್ ಹಾಗೂ ನಟಿ ತಾರಾ ಅನುರಾಧ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಾನು ಮಂಗಳೂರಿನವಳು. ಆದರೆ ಹುಟ್ಟಿಬೆಳೆದದ್ದು ಮುಂಬೈನಲ್ಲಿ.‌ ನನಗೆ ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ. ಫಿಲಂಫೇರ್ ಕಲಾವಿದರ ಹಾಗೂ ತಂತ್ರಜ್ಞರ ಪ್ರತಿಭೆಗಳನ್ನು ಗುರುತಿಸುವ ಉತ್ತಮ ವೇದಿಕೆ. ನಾನು ನನ್ನ ತಂದೆ, ತಾಯಿಯೊಂದಿಗೆ ಚಿಕ್ಕವಳಿದ್ದಾಗ ಫಿಲಂಫೇರ್ ನೋಡಲು ಹೈದರಾಬಾದ್‌ಗೆ ಹೋಗಿದ್ದೆ. ಆದರೆ ನಮ್ಮ ಬಳಿ ಪಾಸ್ ಇರಲಿಲ್ಲ. ‌ಹೈದರಾಬಾದ್‌ನ‌ ನಮ್ಮ ಕುಟುಂಬದ ಸ್ನೇಹಿತರೊಬ್ಬರು ಪಾಸ್ ವ್ಯವಸ್ಥೆ ಮಾಡಿದ್ದರು’ ಎಂದು ನೆನಪಿಸಿಕೊಂಡು ಪೂಜಾ ಹೆಗ್ಡೆ ಸಮಾರಂಭಕ್ಕೆ ಶುಭ ಕೋರಿದರು.

ADVERTISEMENT

‘ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಶಸ್ತಿ ಸಮಾರಂಭ ಕಮರ್ ಫಿಲಂ ಫ್ಯಾಕ್ಟರಿ ಸಹಯೋಗದೊಂದಿಗೆ ನಡೆಸಲು ಸಂತಸವಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಎರಡು ದಿನಗಳ ಕಾಲ ಈ ಸಮಾರಂಭ ನಡೆಯಲಿದೆ’ ಎಂದರು ಜಿತೇಶ್ ಪಿಳ್ಳೈ.

‘ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಫಿಲಂಫೇರ್ ಪ್ರಶಸ್ತಿ ಸಮಾರಂಭ ನಡೆದಿಲ್ಲ. ಕಳೆದ ಬಾರಿ ಈ ಸಮಾರಂಭ ನಮ್ಮ ಕೈ ತಪ್ಪಿತ್ತು. ನಾವು ಈ ಸಲ ನಮ್ಮ ಊರಿನಲ್ಲೇ ನಡೆಯಬೇಕೆಂದು ಕೇಳಿಕೊಂಡೆವು. 2022ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಈ ಸಮಾರಂಭ ನಡೆಯಲಿದೆ’ ಎಂದರು ಕಮರ್.

‘66 ವರ್ಷಗಳ ಬಳಿಕ ನಮ್ಮ ಬೆಂಗಳೂರಿನಲ್ಲಿ ಈ ಸಮಾರಂಭ ನಡೆಯುತ್ತಿರುವುದು ಬಹಳ ಸಂತೋಷ. ಇದೊಂದು ಕಲಾವಿದರ ಹಾಗೂ ತಂತ್ರಜ್ಞರ ಸಮ್ಮಿಲನದ ಮಹಾವೇದಿಕೆ’ ಎಂದು ತಾರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.