ಶ್ಯಾಮ್ ಬೆನಗಲ್ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ, ಹೂಮಾಲೆಗಳಿಂದ ಅಲಂಕರಿಸಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಮುಂಬೈ: ಸೋಮವಾರ ಇಲ್ಲಿ ನಿಧನರಾದ ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ (90) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು.
ದಾದರ್‌ನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ, ಗೌರವ ಸಲ್ಲಿಸಿದರು.
ಇದಕ್ಕೂ ಮೊದಲು ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ, ಹೂಮಾಲೆಗಳಿಂದ ಅಲಂಕರಿಸಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಶ್ಯಾಮ್ ಅವರ ಪತ್ನಿ ನೀರಾ ಬೆನಗಲ್ ಮತ್ತು ಪುತ್ರಿ ಪಿಯಾ ಬೆನಗಲ್ ಸೇರಿದಂತೆ ಸಿನಿಮಾ ರಂಗದಲ್ಲಿನ ಬೆನಗಲ್ ಅವರ ಸಮಕಾಲೀನರು, ಸಹೋದ್ಯೋಗಿಗಳು, ನಟ–ನಟಿಯರು ಹಾಗೂ ಕಲಾವಿದರು ಅಂತಿಮ ಗೌರವ ಸಲ್ಲಿಸಿದರು.
ಬೆನಗಲ್ ಅವರ ಹಲವು ಚಿತ್ರಗಳಲ್ಲಿ ನಟಿಸಿರುವ ನಾಸಿರುದ್ದೀನ್ ಶಾ, ರಜಿತ್ ಕಪೂರ್, ಕುಲಭೂಷಣ್ ಖರಬಂದ ಮತ್ತು ಇಲಾ ಅರುಣ್ ಅವರು ಅಂತ್ಯಕ್ರಿಯೆ ವೇಳೆ ಪಾಲ್ಗೊಂಡಿದ್ದರು.
‘ಬೆನಗಲ್ ಅವರೊಂದಿಗಿನ ಒಟನಾಟ, ಕೆಲವು ಸಂಗತಿಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದು ನಾಸಿರುದ್ದೀನ್ ಶಾ ಭಾವುಕರಾಗಿ ನುಡಿದರು.
ಡಿಸೆಂಬರ್ 14 ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಶ್ಯಾಮ್ ಬೆನಗಲ್ ಆಚರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.