ADVERTISEMENT

Sandalwood: ಫಾರೆಸ್ಟ್, ರಾಯಲ್, ರುದ್ರ ಗರುಡ ಪುರಾಣ ಸಿನಿಮಾಗಳು ಇಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 23:30 IST
Last Updated 23 ಜನವರಿ 2025, 23:30 IST
ಸಂಜನಾ, ವಿರಾಟ್‌ 
ಸಂಜನಾ, ವಿರಾಟ್‌    

ಚಂದನವನದ ತೆರೆಗಳಲ್ಲಿ ಇಂದು (ಜ.24) ಮೂರು ಸಿನಿಮಾಗಳು ತೆರೆಕಾಣುತ್ತಿವೆ. 

ಫಾರೆಸ್ಟ್‌: ಅಡ್ವೆಂಚರ್‌ ಕಾಮಿಡಿ ಜಾನರ್‌ನ ಚಿತ್ರ ಇದಾಗಿದ್ದು, ರಂಗಾಯಣ ರಘು, ಚಿಕ್ಕಣ್ಣ, ಅನೀಶ್‌ ತೇಜೇಶ್ವರ್‌, ಗುರುನಂದನ್‌, ಅರ್ಚನಾ ಕೊಟ್ಟಿಗೆ ಮುಖ್ಯಭೂಮಿಕೆಯಲ್ಲಿದ್ದಾರೆ. ಎನ್‌ಎಂಕೆ ಸಿನಿಮಾಸ್ ಲಾಂಛನದಲ್ಲಿ ಎನ್.ಎಂ. ಕಾಂತರಾಜ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.

ಐದು ಪಾತ್ರಗಳ ಸುತ್ತ ಈ ಚಿತ್ರದ ಕಥೆಯಿದ್ದು, ಶರಣ್ಯ ಶೆಟ್ಟಿ ಅವರೂ ತಾರಾಬಳಗದಲ್ಲಿದ್ದಾರೆ. ಮಡಿಕೇರಿಯ ಸಂಪಾಜೆ ಕಾಡಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಮಲೆ ಮಹದೇಶ್ವರ ಬೆಟ್ಟ, ಬೆಂಗಳೂರಿನಲ್ಲೂ ಚಿತ್ರೀಕರಣವಾಗಿದೆ. ಕಾಡಿನಲ್ಲಿರುವ ಚಿನ್ನದ ನಿಧಿಯನ್ನು ಹುಡುಕುವ ಕಥೆ ಇದಾಗಿದೆ. ಮಾಟ ಮಂತ್ರದ ಅಂಶಗಳೂ ಸಿನಿಮಾದಲ್ಲಿದೆ. ಮಂತ್ರವಾದಿಯಾಗಿ ರಂಗಾಯಣ ರಘು ನಟಿಸಿದ್ದಾರೆ. ಚಿತ್ರಕ್ಕೆ ಚಂದ್ರಮೋಹನ್‌, ಸತ್ಯ ಶೌರ್ಯ ಸಾಗರ್‌ ಕಥೆ, ಚಿತ್ರಕಥೆ ಬರೆದಿದ್ದಾರೆ.

ADVERTISEMENT

ರಾಯಲ್‌: ಜಯಣ್ಣ ಕಂಬೈನ್ಸ್ ಬ್ಯಾನರ್‌ನಡಿ ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ನಿರ್ಮಿಸಿರುವ, ದಿನಕರ್‌ ತೂಗುದೀಪ ನಿರ್ದೇಶನದ ಚಿತ್ರ ಇದಾಗಿದೆ. ‘ಕಿಸ್‌’ ಚಿತ್ರದ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ನಟ ವಿರಾಟ್‌ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ‘ಸಲಗ’ ಖ್ಯಾತಿಯ ಸಂಜನಾ ನಾಯಕಿಯಾಗಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಗೋವಾ ಮುಂತಾದೆಡೆ ಚಿತ್ರೀಕರಣ ನಡೆದಿದೆ. ರಘು ಮುಖರ್ಜಿ, ಛಾಯಾ ಸಿಂಗ್‍, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್‍ ಶೆಟ್ಟಿ, ರವಿ ಭಟ್‍, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಸಂಕೇತ್ ಛಾಯಾಚಿತ್ರಗ್ರಹಣ, ಚರಣ್‍ ರಾಜ್‍ ಸಂಗೀತ, ಕೆ.ಎಂ. ಪ್ರಕಾಶ್‍ ಸಂಕಲನ, ಮೋಹನ್‍ ಬಿ. ಕೆರೆ ಕಲಾ ನಿರ್ದೇಶನ, ರವಿ ವರ್ಮ ಸಾಹಸ ನಿರ್ದೇಶನವಿದೆ.

ರುದ್ರ ಗರುಡ ಪುರಾಣ: ನಟ ರಿಷಿ ಅಭಿನಯದ ಚಿತ್ರವಿದು. ಸಿನಿಮಾದಲ್ಲಿ ರಿಷಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ಕುಮಾರ್‌ ಚಿತ್ರದ ನಾಯಕಿ. ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಹಿಂದೆ ‘ಡಿಯರ್ ವಿಕ್ರಮ್’ ಚಿತ್ರವನ್ನು ‌ನಿರ್ದೇಶಿಸಿದ್ದ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

‘25 ವರ್ಷಗಳ ಹಿಂದೆ ಬಸ್ಸೊಂದು ಅಪಘಾತವಾಗಿ ಅದರಲ್ಲಿದ್ದ ಎಲ್ಲರೂ ಸಾವನ್ನಪ್ಪಿರುತ್ತಾರೆ. ಆದರೆ ಅದೇ ಬಸ್ಸು ಮತ್ತು ಅದರಲ್ಲಿದ್ದ ಜನಗಳು ಮತ್ತೆ ವಾಪಸ್‌ ಬರುವ ರೋಚಕ ತಿರುವುಗಳನ್ನು ಅನ್ವೇಷಣೆ ಮಾಡುವ ಚಿತ್ರವಿದು’ ಎಂದಿದ್ದಾರೆ ನಂದೀಶ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.