ADVERTISEMENT

ಚಾಮರಾಜನಗರ: ನಾಲ್ಕು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ, ಸಿನಿ ಪ್ರಿಯರ ಸಂತಸ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 15:01 IST
Last Updated 5 ಫೆಬ್ರುವರಿ 2021, 15:01 IST
ಕೊಳ್ಳೇಗಾಲದ ಕೃಷ್ಣ ಚಿತ್ರಮಂದಿರದಲ್ಲಿ ಶುಕ್ರವಾರ ಚಿತ್ರ ವೀಕ್ಷಿಸಿ ಹೊರ ಬಂದ ಪ್ರೇಕ್ಷಕರು
ಕೊಳ್ಳೇಗಾಲದ ಕೃಷ್ಣ ಚಿತ್ರಮಂದಿರದಲ್ಲಿ ಶುಕ್ರವಾರ ಚಿತ್ರ ವೀಕ್ಷಿಸಿ ಹೊರ ಬಂದ ಪ್ರೇಕ್ಷಕರು   

ಚಾಮರಾಜನಗರ: ಚಿತ್ರಮಂದಿರಗಳಲ್ಲಿ ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬಹುದು ಎಂದು ಸರ್ಕಾರ ಆದೇಶ ಹೊರಡಿಸಿದ ನಂತರ ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯಿತು. ಆದರೆ, ಚಿತ್ರಮಂದಿರಗಳು ಭರ್ತಿಯಾಗುವಷ್ಟು ಪ್ರೇಕ್ಷಕರು ಇರಲಿಲ್ಲ.

ಚಾಮರಾಜನಗರದ ಎರಡು (ಬಸವೇಶ್ವರ, ಗುರು ರಾಘವೇಂದ್ರ), ಕೊಳ್ಳೇಗಾಲದ ಒಂದು (ಕೃಷ್ಣ) ಹಾಗೂ ಗುಂಡ್ಲುಪೇಟೆಯ ಒಂದು ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರು ಚಿತ್ರ ವೀಕ್ಷಿಸಿದರು.

ಜಿಲ್ಲೆಯಲ್ಲಿ ಒಂದು ಪರದೆಯ 10 ಚಿತ್ರ ಮಂದಿರಗಳಿವೆ (ಚಾಮರಾಜನಗರದಲ್ಲಿ ಐದು, ಕೊಳ್ಳೇಗಾಲದಲ್ಲಿ 2, ಗುಂಡ್ಲುಪೇಟೆಯಲ್ಲಿ 2, ಯಳಂದೂರು–1).ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಕಳೆದ ವಾರವೇ ಚಿತ್ರ ಪ್ರದರ್ಶನ ಆರಂಭವಾಗಿತ್ತು. ಶುಕ್ರವಾರ ನಾಲ್ಕು ಚಿತ್ರ ಮಂದಿರಗಳು ತೆರೆದಿದ್ದು, ಉಳಿದವುಗಳಲ್ಲಿ ಚಿತ್ರ ಪ್ರದರ್ಶನ ಇನ್ನು ಆರಂಭವಾಗಬೇಕಿದೆ.

ADVERTISEMENT

ಶೇ 100ರಷ್ಟು ಆಸನಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ್ದರೂ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ಮಂದಿರಗಳತ್ತ ಬಂದಿಲ್ಲ. ಆದರೆ, ಬಂದಿದ್ದ ಪ್ರೇಕ್ಷಕರು 11 ತಿಂಗಳ ಬಳಿಕ ಬೆಳ್ಳಿ ಪರದೆಯಲ್ಲಿ ಚಿತ್ರಗಳನ್ನು ವೀಕ್ಷಿಸಿ ಖುಷಿ ಪಟ್ಟರು.

ಬಸವೇಶ್ವರ ಚಿತ್ರಮಂದಿರದಲ್ಲಿ ಮಧ್ಯಾಹ್ನದ ಪ್ರದರ್ಶನಕ್ಕೆ 80 ಹಾಗೂ ಗುರು ರಾಘವೇಂದ್ರದಲ್ಲಿ 120 ಪ್ರೇಕ್ಷಕರಿದ್ದರು.

‘ಕಳೆದ ವರ್ಷ ಮಾರ್ಚ್‌ನಿಂದ ಚಿತ್ರಮಂದಿರಗಳಲ್ಲಿ ಸಿನೆಮಾ ನೋಡಿರಲಿಲ್ಲ. ಟಿವಿ, ಮೊಬೈಲ್‌ಗಳಲ್ಲಿ ಹಳೆಯ ಚಲನಚಿತ್ರಗಳನ್ನು ನೋಡಿ ಸಾಕಾಗಿತ್ತು. ಚಿತ್ರಮಂದಿರಗಳು ತೆರೆದಿರುವುದರಿಂದ ಸಂತಸವಾಗಿದೆ’ ಎಂದು ಬಸವೇಶ್ವರ ಚಿತ್ರ ಮಂದಿರದಲ್ಲಿ ಶ್ಯಾಡೊ ಸಿನಿಮಾ ನೋಡಿದ ಬ್ಯಾಡಮೂಡ್ಲಿನ ಸೋಮಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಚಂದ್ರು ಎಂಬ ಮತ್ತೊಬ್ಬ ಪ್ರೇಕ್ಷಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂಜಾಗ್ರತಾ ಕ್ರಮ: ಚಿತ್ರಮಂದಿರಗಳಲ್ಲಿ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರೇಕ್ಷಕರ ಮೊಬೈಲ್‌ ಸಂಖ್ಯೆ ದಾಖಲಿಸುವುದು ಕಂಡು ಬರಲಿಲ್ಲ.

‘ಮೂರ್ನಾಲ್ಕು ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿವೆ. ಕೋವಿಡ್‌ ಮುಂಜಾಗ್ರತಾ ನಿಯಮಗಳ ಪಾಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಡಿಮೆ ಪ್ರೇಕ್ಷಕರಿದ್ದ ಸಂದರ್ಭದಲ್ಲಿ ಅವರ ಮೊಬೈಲ್‌ ಸಂಖ್ಯೆಯನ್ನು ಸಂಗ್ರಹಿಸಬಹುದು. ಆದರೆ, ಹೆಚ್ಚು ಪ್ರೇಕ್ಷಕರಿದ್ದರೆ, ಇದು ಕಷ್ಟದ ಕೆಲಸ. ದೊಡ್ಡ ನಟರ ಚಿತ್ರಗಳಿದ್ದರಷ್ಟೇ ಪ್ರೇಕ್ಷಕರು ಹೆಚ್ಚಿರುತ್ತಾರೆ’ ಎಂದು ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಜಿಲ್ಲಾ ಪ್ರತಿನಿಧಿ ಹಾಗೂ ಸಿಂಹ ಮೂವಿ ಪ್ಯಾರಡೈಸ್‌ನ ಮಾಲೀಕ ಎ.ಜಯಸಿಂಹ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳು, ಯುವಕರಿಂದ ವೀಕ್ಷಣೆ

ಕೊಳ್ಳೇಗಾಲ ವರದಿ: ನಗರದ ಕೃಷ್ಣ ಚಿತ್ರಮಂದಿರದಲ್ಲಿ ಶುಕ್ರವಾರ ಚಿತ್ರ ಪ್ರದರ್ಶನ ಆರಂಭವಾಯಿತು. ವಿದ್ಯಾರ್ಥಿಗಳು ಸೇರಿದಂತೆ ಹಲವರು 11 ತಿಂಗಳ ಬಳಿಕ ದೊಡ್ಡ ಪರದೆಯ ಮೇಲೆ ಚಿತ್ರ ವೀಕ್ಷಿಸಿ ಸಂಭ್ರಮಿಸಿದರು.

ಮೊದಲ ದಿನವಾದ ಶುಕ್ರವಾರ ಚಿತ್ರಮಂದಿರದ ಮುಂದೆ ತೋರಣ ಕಟ್ಟಿ ರಂಗೋಲಿ ಬಿಡಿಸಲಾಗಿತ್ತು.

ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ‌ ಸಿನಿಮಾ ವೀಕ್ಷಣೆಗೆ ಮುಗಿಬಿದ್ದರು.

‘ಸರ್ಕಾರ ಆದೇಶದಂತೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಚಿತ್ರಮಂದಿರದ ಒಳಗೆ ಪ್ರವೇಶ ಮಾಡಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪ್ರದರ್ಶನದ ನಂತರ ಚಿತ್ರಮಂದಿರವನ್ನು ಸ್ಯಾನಿಟೈಸ್‌ ಮಾಡಲಾಗುತ್ತದೆ’ ಎಂದು ಕೃಷ್ಣ ಚಿತ್ರಮಂದಿರದ ಮಾಲೀಕ ರುಕ್ಮಿಣಿಕಾಂತ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.