ADVERTISEMENT

ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ: ನಿರ್ಮಾಪಕ ಉಮಾಪತಿ ಕೈವಾಡ?

ಆರೋಪಿ ಹೇಳಿಕೆಯ ಬೆನ್ನು ಬಿದ್ದಿರುವ ನಟ ದರ್ಶನ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 18:58 IST
Last Updated 12 ಜುಲೈ 2021, 18:58 IST
ಮೈಸೂರಿನಲ್ಲಿ ನಟ ದರ್ಶನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಮೈಸೂರಿನಲ್ಲಿ ನಟ ದರ್ಶನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಮೈಸೂರು: ’ನನ್ನ ಹೆಸರು ಹೇಳಿಕೊಂಡೇ ನನ್ನ ಮಿತ್ರ ಹರ್ಷ ಮೆಲಂತಾ ಅವರನ್ನು ₹ 25 ಲಕ್ಷಕ್ಕಾಗಿ ಬ್ಲಾಕ್‌ಮೇಲ್‌ ‌ಮಾಡಲು ನಿರ್ಮಾಪಕ ಉಮಾಪತಿ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿ ಅರುಣಕುಮಾರಿ ನೀಡಿರುವ ಹೇಳಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಉಮಾಪತಿಯವರೂ ಅದಕ್ಕೆ ಸ್ಪಷ್ಟನೆ ನೀಡಬೇಕು’‌ ಎಂದು ನಟ ದರ್ಶನ್‌ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ’‌ಆರೋಪಿ ಮತ್ತು ಉಮಾಪತಿ ನಡುವೆ ವಿನಿಯಮವಾಗಿರುವ ವಾಟ್ಸ್‌ಆ್ಯಪ್‌ ಸಂದೇಶಗಳು ದೊರಕಿವೆ. ಆದರೆ ಅವುಗಳನ್ನು ಬಹಿರಂಗಪಡಿಸುವುದಿಲ್ಲ, ಪೊಲೀಸರಿಗಷ್ಟೇ ನೀಡಲಾಗುವುದು’ ಎಂದರು.

‘ಉಮಾಪತಿಯವರ ಮೂಲಕವೇ ಪರಿಚಯವಾಗಿದ್ದ ಅರುಣಕುಮಾರಿ ತಮ್ಮನ್ನು ಬ್ಯಾಂಕ್‌ ಅಧಿಕಾರಿ ಎಂದು ಹೇಳಿಕೊಂಡಿದ್ದರು. ಜೂನ್ 13 ರಂದು ಬೆಂಗಳೂರಿನ ನನ್ನ ಮನೆಗೆ ಬಂದಿದ್ದರು. ನಿಮ್ಮ ಸ್ನೇಹಿತರಾದ ರಾಕೇಶ್‌ ಹಾಗೂ ಹರ್ಷ ಮೆಲಂತಾ ಅವರು ಸಲ್ಲಿಸಿರುವ ₹ 25 ಕೋಟಿ ಸಾಲದ ಅರ್ಜಿಗೆ ನೀವು ಜಾಮೀನು ಹಾಕಿದ್ದೀರಿ ಎಂದು ಹೇಳಿದ್ದರು. ಸಾಲ ನೀಡುವ ಮುನ್ನ ನಿಮ್ಮ ಮೈಸೂರಿನ ತೋಟವನ್ನು ನೋಡಬೇಕೆಂದಿದ್ದರು. ಆದರೆ ನಾನು ಯಾವ ಸಾಲದ ಅರ್ಜಿಗೂ ಜಾಮೀನು ಹಾಕಿರಲಿಲ್ಲ’ ಎಂದು ದರ್ಶನ್ ಸ್ಪಷ್ಟಪಡಿಸಿದರು.

‘16ರಂದು ಆರೋಪಿ ತೋಟಕ್ಕೆ ಬಂದು ಪರಿಶೀಲನೆಯನ್ನು ನಡೆಸಿದ ಬಳಿಕ, ಅನುಮಾನಗೊಂಡ ನಾನು ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದೆ. ನಂತರ ಪೊಲೀಸರಿಗೆ ಹೇಳಿಕೆ ನೀಡಿದ ಆರೋಪಿಯು, ರಾಕೇಶ್‌ ಹಾಗೂ ಹರ್ಷ ಅವರ ಕುಮ್ಮಕ್ಕಿನಿಂದಲೇ ಬ್ಲಾಕ್‌ಮೇಲ್‌ ಪ್ರಯತ್ನ ಮಾಡಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ, ಹರ್ಷ ಅವರು ದಾಖಲಿಸಿದ್ದ ದೂರಿನ ಮೇರೆಗೆ ಮೈಸೂರು ಪೊಲೀಸರ ಮುಂದೆ ಹಾಜರಾಗಿ, ಉಮಾಪತಿಯವರು ಕುಮ್ಮಕ್ಕು ನೀಡಿದ್ದರು ಎಂದು ಹೇಳಿದ್ದಾರೆ. ಇಡೀ ಪ್ರಕರಣ ಗೊಂದಲಮಯವಾಗಿದೆ. ಇದು ಸ್ನೇಹ ಕದಡುವ ಪ್ರಯತ್ನವೂ ಆಗಿರಬಹುದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಬರ್ಟ್‌ ಸಿನಿಮಾದ ಆಡಿಯೊ ಬಿಡುಗಡೆ ವೇಳೆ ಉಮಾಪತಿಯೊಂದಿಗೆ ವೈಮನಸ್ಯ ಉಂಟಾಗಿತ್ತು. ಆದರೆ ಅಲ್ಲಿಗೇ ಮುಗಿದಿತ್ತು’ ಎಂದರು.

ಯಾರು ಅರುಣಕುಮಾರಿ?: ‘ದ್ವಿತೀಯ ಪಿಯುಸಿ ಓದಿರುವ ಅರುಣಕುಮಾರಿಯು ಹರ್ಷ ಮೆಲಂತಾ ಅವರ ಕ್ಲಬ್‌ನ ಭದ್ರತಾ ಸಿಬ್ಬಂದಿ ಕುಮಾರ್ ಎಂಬುವವರ ಪತ್ನಿ. 8 ವರ್ಷಗಳಿಂದ ಪತಿ, ಪತ್ನಿ ಬೇರೆ ಬೇರೆಯಾಗಿದ್ದಾರೆ’ ಎಂದು ದರ್ಶನ್ ಹೇಳಿದರು.

ಎಸಿಪಿಯಿಂದ ತನಿಖೆ: ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ಅವರು ಹರ್ಷ ಅವರ ದೂರಿನ ತನಿಖೆ ನಡೆಸಿದ್ದಾರೆ.

***

ಪ್ರಕರಣದಲ್ಲಿ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ, ಬಂಧಿಸಿಲ್ಲ. ತನಿಖೆ ಮುಂದುವರಿದಿದೆ’

- ಪ್ರದೀಪ್‌ ಗುಂಟಿ, ಡಿಸಿಪಿ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.