ADVERTISEMENT

ಜು. 24ಕ್ಕೆ ‘ಫ್ರೆಂಚ್ ಬಿರಿಯಾನಿ’ ಚಿತ್ರ ಒಟಿಟಿಯಲ್ಲಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 7:14 IST
Last Updated 16 ಜುಲೈ 2020, 7:14 IST
‘ಫ್ರೆಂಚ್‌ ಬಿರಿಯಾನಿ’ ಚಿತ್ರದ ಪೋಸ್ಟರ್‌
‘ಫ್ರೆಂಚ್‌ ಬಿರಿಯಾನಿ’ ಚಿತ್ರದ ಪೋಸ್ಟರ್‌   

ಸಿನಿ ಪ್ರೇಕ್ಷಕರಿಗೆ ‘ಕವಲುದಾರಿ’ ಮತ್ತು ‘ಮಯಾಬಜಾರ್’ನಂತಹ ಉತ್ತಮ ಚಿತ್ರಗಳನ್ನು ನೀಡಿದ್ದು ಪಿಆರ್‌ಕೆ‌ ಪ್ರೊಡಕ್ಷನ್ಸ್ ಹೆಗ್ಗಳಿಕೆ. ಈ ಸಂಸ್ಥೆಯಡಿಯೇ ನಿರ್ಮಾಣವಾಗಿರುವ ‘ಲಾ’ ಚಿತ್ರ ಇದೇ ಶುಕ್ರವಾರ ‌ಬಿಡುಗಡೆಯಾಗುತ್ತಿದೆ. ‘ಫ್ರೆಂಚ್‌ ಬಿರಿಯಾನಿ’ ಸಿನಿಮಾವೂ ಇದೇ ಪ್ರೊಡಕ್ಷನ್‌ನಡಿ‌ ನಿರ್ಮಾಣವಾಗಿರುವ ಸಿನಿಮಾ. ಜುಲೈ 24ರಂದು ಅಮೆಜಾನ್ ಪ್ರೈಮ್‌ನಲ್ಲಿ ಈ ಚಿತ್ರ ‌ಬಿಡುಗಡೆಯಾಗಲಿದೆ.

ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಪನ್ನಗ ಭರಣ. ಪಕ್ಕಾ ಕಾಮಿಡಿ ಚಿತ್ರ ಇದು. ಫ್ರೆಂಚ್ ನಾಗರಿಕನೊಬ್ಬ ಪ್ರಥಮ ಬಾರಿಗೆ ಬೆಂಗಳೂರಿಗೆ ಭೇಟಿ ‌ನೀಡುತ್ತಾನೆ. ಆತ ಶಿವಾಜಿನಗರದ ಮುಸ್ಲಿಂ ಆಟೊ ಚಾಲಕನನ್ನು ಭೇಟಿಯಾಗುತ್ತಾನೆ. ಮೂರು ದಿನಗಳಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದೇ ಈ ಚಿತ್ರದ ಕಥಾಹಂದರ. ಈ ಕಥೆಯ ಎಳೆಗೆ ಸಮಾನಾಂತರವಾಗಿ ಮತ್ತೆರಡು‌ ಕಥೆಗಳು ಸಾಗುತ್ತವೆಯಂತೆ.

ಮಾರ್ಚ್‌‌ನಲ್ಲಿಯೇ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಕೋವಿಡ್ 19 ಪರಿಣಾಮ ತೆರೆಗೆ ಬರಲು ವಿಳಂಬವಾಯಿತು. ಪ್ರಸ್ತುತ ರಾಜ್ಯದಲ್ಲಿ ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತಗೊಂಡಿದೆ. ಹಾಗಾಗಿ, ಒಟಿಟಿ ಮೂಲಕ ಈ ಸಿನಿಮಾ ತೆರೆ ಕಾಣುತ್ತಿದೆ.

ADVERTISEMENT

ನಟ ಡ್ಯಾನಿಶ್ ಸೇಟ್ ಅವರಿಗೆ ‘ಹಂಬಲ್‌ ಪೊಲಿಟಿಷಿಯನ್’ ಚಿತ್ರದ ಬಳಿಕ ನಾಯಕ‌ ನಟನಾಗಿ ಇದು ದ್ವಿತೀಯ ಚಿತ್ರ. ಇದರಲ್ಲಿ ಅವರದು ಆಟೊ ಚಾಲಕನ‌ ಪಾತ್ರ. ಸ್ಯಾಲ್ ಯೂಸಫ್‌ ಫ್ರೆಂಚ್‌ ಪ್ರಜೆಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಅವರದು ಪೊಲೀಸ್ ಅಧಿಕಾರಿಯ ಪಾತ್ರ. ನಾಗಭೂಷಣ್, ಸಿಂಧು ಶ್ರೀನಿವಾಸಮೂರ್ತಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಅಶ್ವಿನಿ ಪುನೀತ್ ರಾಜ್‍ಕುಮಾರ್ ಮತ್ತು ಗುರುದತ್ ಎ.‌ ತಲ್ವಾರ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಅವಿನಾಶ್‌ ಬೆಳಕ್ಕಳ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದಾರೆ. ಛಾಯಾಗ್ರಹಣ ಅವಿನಾಶ್ ಪಳನಿ ಅವರದು. ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ. ದೀಪು ಎಸ್. ಕುಮಾರ್‌ ಸಂಕಲನ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.