ಈ ಹಿಂದೆ ‘ಲವ್ ಇನ್ ಮಂಡ್ಯ’ ಚಿತ್ರವನ್ನು ನಿರ್ದೇಶಿಸಿದ್ದ ಅರಸು ಅಂತಾರೆ, ಹತ್ತು ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ನಿರ್ದೇಶನದಲ್ಲಿ ಗಣೇಶ್ ನಾಯಕನಾಗಿ ನಟಿಸುತ್ತಿರುವ ಚಿತ್ರವೊಂದು ಸೆಟ್ಟೇರಿದೆ. ತೆಲುಗಿನ ‘ಹನುಮಾನ್’ ಚಿತ್ರದಲ್ಲಿ ನಟಿಸಿದ್ದ ಅಮೃತಾ ಅಯ್ಯರ್ ಗಣೇಶ್‌ಗೆ ಜೋಡಿಯಾಗಿ ಈ ಚಿತ್ರದೊಂದಿಗೆ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ.
‘ಹೆಚ್ಚೆಚ್ಚು ಬರಹಗಾರರು ನಿರ್ದೇಶನಕ್ಕೆ ಬರಬೇಕು. ಆಗ ಉತ್ತಮ ಗುಣಮಟ್ಟದ ಸಿನಿಮಾಗಳು ತಯಾರಾಗುತ್ತವೆ. ಉತ್ತಮ ಚಿತ್ರಗಳು ಬಂದಾಗ ಜನ ತಾವಾಗಿಯೇ ಚಿತ್ರಮಂದಿರಕ್ಕೆ ಬರುತ್ತಾರೆ. ಉತ್ತಮ ಸಿನಿಮಾಗಳನ್ನು ಮಾಡದೆ ಜನ ಬರುತ್ತಿಲ್ಲ ಎಂದು ದೂರುವುದು ಸರಿಯಲ್ಲ. ಒಂದೊಳ್ಳೆ ಕಥೆಯನ್ನು ಹೊಂದಿರುವ ಚಿತ್ರವಿದು. ಬಹಳ ಹಿಂದೆಯೇ ಅರಸು ಅಂತಾರೆ ಈ ಕಥೆ ಹೇಳಿದ್ದರು. ಆದರೆ ಮುಂದೂಡುತ್ತಲೇ ಬಂದೆ. ಈಗ ಈ ಸಿನಿಮಾಕ್ಕೆ ಕಾಲ ಕೂಡಿ ಬಂದಿದೆ. ಹಾಸ್ಯಮಯ ಕಥೆಯೊಂದಿಗೆ ಕುಟುಂಬವೇ ಕುಳಿತು ನೋಡಬಹುದಾದ ಚಿತ್ರವಾಗಲಿದೆ’ ಎಂದರು ಗಣೇಶ್.
‘ಹೊಂದಿಕೊಂಡು ಸಿನಿಮಾ ಮಾಡುವವರು ಮತ್ತು ಅಂದುಕೊಂಡಂತೆ ಸಿನಿಮಾ ಮಾಡುವವರು ಎಂಬ ಎರಡು ವರ್ಗವಿದೆ. ನಾನು ಎರಡನೇ ವರ್ಗಕ್ಕೆ ಸೇರಿದವನು. ಹೀಗಾಗಿ ಒಂದು ಹಿಟ್ ಸಿನಿಮಾ ಕೊಟ್ಟ ಮೇಲೆ ಮತ್ತೊಂದು ಚಿತ್ರಕ್ಕೆ ಇಷ್ಟು ಸಮಯ ತೆಗೆದುಕೊಂಡೆ. ಚಿತ್ರದ ಶೀರ್ಷಿಕೆ ಮತ್ತಿತರ ವಿವರಗಳನ್ನು ಮುಂದಿನ ಹಂತದಲ್ಲಿ ನೀಡುತ್ತೇವೆ’ ಎಂದರು ನಿರ್ದೇಶಕರು.
ರವಿಕುಮಾರ್ ಭದ್ರಾವತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಚ್ ಸುಧಿ ಮುಂತಾದವರು ಚಿತ್ರದಲ್ಲಿದ್ದಾರೆ. ಸುಜ್ಞಾನ್ ಛಾಯಾಚಿತ್ರಗ್ರಹಣ, ಅಕ್ಷಯ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.