ADVERTISEMENT

‘ಪಿನಾಕ’ ಧರನಾದ ಗಣೇಶ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 0:30 IST
Last Updated 11 ಜನವರಿ 2025, 0:30 IST
ಗಣೇಶ್‌ 
ಗಣೇಶ್‌    

‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಬೆನ್ನಲ್ಲೇ ನಟ ಗಣೇಶ್‌ ಹೊಸ ಪ್ರಾಜೆಕ್ಟ್‌ ಘೋಷಿಸಿದ್ದಾರೆ. ಚಿತ್ರಕ್ಕೆ ‘ಪಿನಾಕ’ ಎಂಬ ಶೀರ್ಷಿಕೆ ಇಡಲಾಗಿದ್ದು, ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಧನಂಜಯ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. 

ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿರುವ ಟಿ.ಜಿ.ವಿಶ್ವಪ್ರಸಾದ್ ಸಾರಥ್ಯದ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ‌ ಮಾಡುತ್ತಿರುವ 49ನೇ ಚಿತ್ರವಿದು. ‘ಕ್ಷುದ್ರ ಮತ್ತು ರುದ್ರನ ಅವತಾರದಲ್ಲಿ ಗಣೇಶ್ ಈವರೆಗೂ ಯಾವ ಚಿತ್ರದಲ್ಲೂ ಕಾಣಿಸದ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದಿದೆ ಚಿತ್ರತಂಡ. 

‘ಈ ಸಿನಿಮಾ ಭಿನ್ನವಾಗಿದೆ. ‘ಹುಡುಗಾಟ’ ಚಿತ್ರದಿಂದ ನಾನು ಧನಂಜಯ ಅವರನ್ನು ಬಲ್ಲೆ. ಇಂದು ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಡ್ವೆಂಚರ್‌, ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಒಂದೊಳ್ಳೆ ಕಥೆಯಿದು. ನಾನು ಚಿತ್ರರಂಗಕ್ಕೆ ವಿಲನ್ ಪಾತ್ರದ ಮೂಲಕ ಪ್ರವೇಶ ನೀಡಿದ್ದೆ. ‘ಮುಂಗಾರು ಮಳೆ’ ಚಿತ್ರದ ನಂತರ ನನ್ನನ್ನು ರೊಮ್ಯಾಂಟಿಕ್ ಹೀರೊ ಆಗಿಯೇ ನೋಡಲು ಅಭಿಮಾನಿಗಳು ಬಯಸಿದರು. ಈ ಚಿತ್ರದಿಂದ ನನ್ನ ಹಿಂದಿನ ಜಾನರ್‌ ಬದಲಿಸಿಕೊಂಡಿದ್ದೇನೆ. ಈವರೆಗೂ ಮಾಡಿರದ ಪಾತ್ರವೊಂದರಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ‘ಪಿನಾಕ’ ಮೂಡಿ ಬರಲಿದೆ’ ಎನ್ನುತ್ತಾರೆ ಗಣೇಶ್‌. 

ADVERTISEMENT

‘ಗಣೇಶ್‌ ಅವರ ಬಳಿಕ ಈ ವರ್ಷ ಶ್ರೀಮುರಳಿ, ಶಿವರಾಜ್‌ಕುಮಾರ್, ಧ್ರುವಸರ್ಜಾ ಅವರ ಸಿನಿಮಾಗಳನ್ನು ನಮ್ಮ ಪೀಪಲ್ ಮೀಡಿಯಾ ಫ್ಯಾಕ್ಟರಿ ಮೂಲಕ ನಿರ್ಮಾಣ ಮಾಡುವ ಸಿದ್ಧತೆ ನಡೆಯುತ್ತಿದೆ’ ಎಂದು ನಿರ್ಮಾಪಕ ಟಿ.ಜಿ.ವಿಶ್ವಪ್ರಸಾದ್‌ ಹೇಳಿದರು. 

‘ಸಹಾಯಕ ಡ್ಯಾನ್ಸ್ ಮಾಸ್ಟರ್ ಆಗಿ ಹತ್ತುಸಾವಿರಕ್ಕೂ ಅಧಿಕ ಹಾಡುಗಳಿಗೆ ಹಾಗೂ ಸ್ವತಂತ್ರ ನೃತ್ಯ ನಿರ್ದೇಶಕನಾಗಿ 500ಕ್ಕೂ ಅಧಿಕ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಪಿರಿಯಾಡಿಕ್ ಡ್ರಾಮಾ ಹಿನ್ನೆಲೆಯಲ್ಲಿ ಮಾಟ ಮಂತ್ರದ ಎಳೆಯ ಮೂಲಕ ಪ್ರೇಕ್ಷಕನ ಮುಂದೆ ಹೊಸ ರೀತಿಯ ಕಥೆಯನ್ನು ತಂದಿಡುವ ಪ್ರಯತ್ನ ಈ ಸಿನಿಮಾದ ಮುಖಾಂತರ ಮಾಡಲಿದ್ದೇನೆ’ ಎಂದರು ಧನಂಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.