
ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾ ನ.14ರಂದು ತೆರೆಕಾಣುತ್ತಿದ್ದು, ನಟ ಸುದೀಪ್ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದರು.
‘ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರದಲ್ಲಿ ಸುನಿ ಕೂಡಾ ಒಬ್ಬರು. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ನನಗಿನ್ನೂ ಸಿಕ್ಕಿಲ್ಲ. ಒಂದಲ್ಲಾ ಒಂದು ದಿನ ಅವರ ಜೊತ ಕೆಲಸ ಮಾಡಬಹುದು. ಪ್ರತಿಯೊಂದು ದೃಶ್ಯವನ್ನು ಅವರು ಸೆರೆಹಿಡಿಯುವ ರೀತಿ ಭಿನ್ನವಾಗಿರುತ್ತದೆ. ಈ ಚಿತ್ರದ ನಾಯಕ ದುಷ್ಯಂತ್ ಅವರಿಗೆ ನಾನು ಸಲಹೆ ಕೊಡುವುದು ಏನಿಲ್ಲ. ಅವರು ಹೇಗೆ ಹತ್ತು ನಿಮಿಷ ಅಷ್ಟೊಂದು ಅಚ್ಚುಕಟ್ಟಾಗಿ ಎಲ್ಲರನ್ನು ತಮ್ಮ ಮಾತಿನಿಂದ ಹಿಡಿದಿಟ್ಟುಕೊಂಡರು ಎಂದು ಯೋಚಿಸುತ್ತಿದ್ದೆ. ನಂತರ ತಿಳಿಯಿತು ಅವರು ರಾಜಕಾರಣಿ ಮಗ ಅಂತ’ ಎನ್ನುತ್ತಾ ನಗೆಚಟಾಕಿ ಹಾರಿಸಿ ಚಿತ್ರತಂಡಕ್ಕೆ ಶುಭಕೋರಿದರು ಸುದೀಪ್.
ನಿರ್ದೇಶಕ ಸುನಿ ಮಾತನಾಡಿ, ‘ಇದೊಂದು ಭಿನ್ನ ಜಾನರ್‌ನ ಸಿನಿಮಾ. ಈ ಸಿನಿಮಾ ರಿಲೀಸ್ ಆದ ಬಳಿಕ ಬಾಯಿ ಮಾತಿನಿಂದಲೇ ಪ್ರಚಾರ ಪಡೆದುಕೊಳ್ಳಲಿದೆ ಎನ್ನುವ ನಂಬಿಕೆ ನನಗಿದೆ. ಚಿತ್ರದಲ್ಲಿ ಸ್ಟಾರ್ ವ್ಯಾಲ್ಯೂ ಕಮ್ಮಿ ಇತ್ತು. ಆದರೆ ನಮ್ಮ ಚಿತ್ರರಂಗದ ಶಿವಣ್ಣ, ಸುದೀಪ್ ಅವರ ಬೆಂಬಲ ನಮಗೆ ದೊರಕಿದ್ದು, ಇದರಿಂದ ಚಿತ್ರಕ್ಕೆ ಒಳ್ಳೆಯ ಆರಂಭ ಸಿಗಲಿದೆ’ ಎಂದರು.
‘ಗತವೈಭವ’ ಚಿತ್ರದಲ್ಲಿ ದುಷ್ಯಂತ್ ನಾಯಕನಾಗಿ ನಟಿಸಿದ್ದು, ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣವಿದೆ. ದೀಪಕ್ ಹಾಗೂ ಸಿಂಪಲ್ ಸುನಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ಈ ಚಿತ್ರ ನನಗೆ ವಿಶೇಷವಾಗಿದೆ. ಅತಿ ಹೆಚ್ಚು ದಿನ ಶೂಟಿಂಗ್ ಮಾಡಿದ ಸಿನಿಮಾ ಇದಾಗಿದೆ. ನಾಲ್ಕು ಕಥೆ ನಾಲ್ಕು ರೀತಿಯ ಪಾತ್ರ. ಹೀಗಾಗಿ ನಾಲ್ಕು ಸಿನಿಮಾ ನೋಡಿದ ಅನುಭವ ಆಗುತ್ತದೆ.ಆಶಿಕಾ ರಂಗನಾಥ್ ನಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.