ADVERTISEMENT

ಜಂಟಲ್‌ಮನ್‌ ಚಿತ್ರ ಸೋರಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 8:20 IST
Last Updated 22 ಜೂನ್ 2020, 8:20 IST
ಗುರು ದೇಶಪಾಂಡೆ
ಗುರು ದೇಶಪಾಂಡೆ   

ಕನ್ನಡದ ಸಿನಿಮಾಗಳು ಡಿಜಿಟಲ್ ವೇದಿಕೆಗಳ ಮೂಲಕ ಪ್ರಸಾರ ಆದ ತಕ್ಷಣ ಅವುಗಳನ್ನು ನಕಲು ಮಾಡಿ, ಟೆಲಿಗ್ರಾಂ ಆ್ಯಪ್‌ ಮೂಲಕ ಸಿನಿಮಾ ಪ್ರೇಮಿಗಳಿಗೆ ತಲುಪಿಸುವ ತಮಿಳ್‌ ರಾಕರ್ಸ್‌ನಂತಹ ಗುಂಪುಗಳು ಹುಟ್ಟಿಕೊಂಡು ಬಹಳ ಕಾಲ ಆಯಿತು. ಇದು ಕನ್ನಡ ಚಿತ್ರೋದ್ಯಮದ ಪಾಲಿಗೆ ದೊಡ್ಡ ತಲೆನೋವಾಗಿರುವುದೂ ಹೌದು. ಸಿನಿಮಾಗಳನ್ನು ನಕಲು ಮಾಡಿ, ಡಿಜಿಟಲ್ ವ್ಯವಸ್ಥೆಯ ಮೂಲಕ ಕ್ಷಣಾರ್ಧದಲ್ಲಿ ಹಂಚುವ ಈ ತಲೆನೋವಿಗೆ ಹೊಸದೊಂದು ಆಯಾಮ ಸೇರಿಕೊಂಡಿದೆ.

ಪ್ರಜ್ವಲ್ ದೇವರಾಜ್ ಅವರು ನಾಯಕನಾಗಿ ನಟಿಸಿದ, ಜಡೇಶ್ ಕುಮಾರ್ ನಿರ್ದೇಶನದ ‘ಜಂಟಲ್‌ಮನ್‌’ ಸಿನಿಮಾ ಈಗ ಫೇಸ್‌ಬುಕ್‌ ಮೂಲಕವೂ ಸೋರಿಕೆಯಾಗಿದೆ! ಈ ವಿಚಾರವನ್ನು ನಿರ್ಮಾಪಕ ಗುರು ದೇಶಪಾಂಡೆ ಅವರೇ ಖಚಿತಪಡಿಸಿದ್ದಾರೆ.

‘ಜಂಟಲ್‌ಮನ್‌ ಸಿನಿಮಾ ಉದಯ ಟಿ.ವಿ. ಮೂಲಕ ಶನಿವಾರ ರಾತ್ರಿ ಪ್ರಸಾರವಾಗಿದೆ. ಈ ಚಿತ್ರವನ್ನು ಭಾನುವಾರ ಬೆಳಿಗ್ಗೆಯೇ ಫೇಸ್‌ಬುಕ್‌ ಮೂಲಕ ಪ್ರಸಾರ ಮಾಡಲಾಗಿದೆ. ನಾವು ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಉದಯ ಟಿ.ವಿ. ವಾಹಿನಿಗೆ ನೀಡಿದ್ದೇವೆ. ಆದರೆ, ಚಿತ್ರವನ್ನು ಫೇಸ್‌ಬುಕ್‌ ಮೂಲಕ ಹಂಚಿಕೊಂಡಿರುವ ಪರಿಣಾಮ ಒಂದು ಲಕ್ಷಕ್ಕೂ ಹೆಚ್ಚಿನ ಜನರು ಅದನ್ನು ವೀಕ್ಷಿಸಿದ್ದಾರೆ. ಹೀಗೆ ಸೋರಿಕೆ ಮಾಡಿರುವುದು ಬಹಳ ದೊಡ್ಡ ತಪ್ಪು. ಹೀಗೆ ಮಾಡಿದವರಿಗೆ ಶಿಕ್ಷೆ ಆಗಬೇಕು. ಈ ವಿಚಾರದಲ್ಲಿ ಜನಜಾಗೃತಿ ಮೂಡಬೇಕು. ಬೇರೆ ಯಾರೂ ಈ ರೀತಿ ಮಾಡಬಾರದು’ ಎಂದು ನಿರ್ಮಾಪಕ ಗುರು ದೇಶಪಾಂಡೆ ಹೇಳಿದ್ದಾರೆ.

ADVERTISEMENT

‘ನಾವು ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ಮಾಡಿರುತ್ತೇವೆ. ಸಿನಿಮಾಗಳನ್ನು ಉಚಿತವಾಗಿ ತೋರಿಸಬೇಕು ಎಂಬ ಉದ್ದೇಶ ನಮ್ಮದಲ್ಲ. ಮುಂದೆ ಯಾವ ಸಿನಿಮಾಕ್ಕೂ ಈ ರೀತಿ ಆಗದಿರಲಿ’ ಎಂದು ಅವರು ಹೇಳಿದ್ದಾರೆ. ಈ ಸಿನಿಮಾ ಸೋರಿಕೆ ಆಗಿರುವ ಬಗ್ಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗುರು ಅವರು ತಿಳಿಸಿರುವ ಪ್ರಕಾರ, ಫೇಸ್‌ಬುಕ್‌ನಲ್ಲಿ ‘ಅಭಿ ಗೌಡ’ ಎಂದು ಗುರುತಿಸಿಕೊಂಡಿರುವ ವ್ಯಕ್ತಿ ಈ ಸಿನಿಮಾ ಸೋರಿಕೆ ಮಾಡಿದ್ದಾರೆ. ಹಾಗೆಯೇ, ‘ಅಪ್ಪು ರಾಜರತ್ನ’ ಎಂಬ ಫೇಸ್‌ಬುಕ್‌ ಹೆಸರು ಹೊಂದಿರುವ ಇನ್ನೊಬ್ಬರು ಕೂಡ ಸೋರಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.