ADVERTISEMENT

ಯಾವ ರೂಪದಲ್ಲಾದರೂ ದೇವರು ಬರಬಹುದು!

ಪದ್ಮನಾಭ ಭಟ್ಟ‌
Published 9 ಫೆಬ್ರುವರಿ 2019, 8:02 IST
Last Updated 9 ಫೆಬ್ರುವರಿ 2019, 8:02 IST
ಅನುಶ್ರೀ
ಅನುಶ್ರೀ   

ನಾನು ಪ್ರತಿದಿನ ಊಟ ಮಾಡುವಾಗ ಮೊದಲನೇ ತುತ್ತನ್ನು ಕಣ್ಣಿಗೊತ್ತಿಕೊಳ್ಳುತ್ತೇನೆ. ಹೊರಗಡೆ ಎಲ್ಲಾದರೂ ಹೋಗುವಾಗ ಅಮ್ಮನಿಗೆ ಕಾಲು ಮುಟ್ಟಿ ನಮಸ್ಕರಿಸಿ ಹೋಗ್ತೀನಿ. ಇಂದಿಗೂ ಏನೇ ಸಂಬಳ ಬಂದ್ರೂ ಮೊದಲು ದೇವರ ಮುಂದೆ ಇಟ್ಟೇ ತೆಗೆದುಕೊಳ್ಳುತ್ತೇನೆ. ಈ ಎಲ್ಲ ಆಚರಣೆಗಳು ನನ್ನ ಬದುಕಿನಲ್ಲಿ ಹಾಸುಹೊಕ್ಕಾಗಿವೆ; ಬದುಕಿನ ಮೌಲ್ಯಗಳನ್ನು ರೂಪಿಸಿವೆ. ಈ ಆಚರಣೆಗಳ ಹಿಂದೆ ಇರುವುದು ದೇವರ ಕಲ್ಪನೆಯೇ.

ಇಂದಿಗೂ ಯಾವುದಾದರೂ ಕೆಲಸಕ್ಕೆ ಹೋಗುವ ಮೊದಲು ದೇವರಲ್ಲಿ ಪ್ರಾರ್ಥಿಸಿಯೇ ಹೋಗುವುದು. ನಿಮಗೆ ಎಕ್ಸಾಜರೇಶನ್ ಅನಿಸಬಹುದು; ದೇವರು ನನ್ನ ಗೆಳೆಯನೂ ಹೌದು, ಮಾರ್ಗದರ್ಶಕನೂ ಹೌದು. ಎಷ್ಟೋ ಸಲ ನಾವು ಕುಗ್ಗಿಬಿಟ್ಟಿರುತ್ತೇವೆ. ಕಷ್ಟಗಳಿಗೆ ಭಯಪಟ್ಟುಕೊಂಡುಬಿಡುತ್ತೇವೆ. ಆ ಸಮಯದಲ್ಲೆಲ್ಲ ದೇವರು ನಮಗೆ ಒಂದಿಲ್ಲೊಂದು ದಾರಿ ತೋರಿಸುತ್ತಾನೆ. ಹಾಗೆಂದು ಪ್ರತಿ ಸಲ ಅವನೇ ಪ್ರತ್ಯಕ್ಷನಾಗಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡುವುದಿಲ್ಲ. ಎಲ್ಲದಕ್ಕೂ ಅವನು ‘ನಾನಿದ್ದೀನಿ ನಾನಿದ್ದೀನಿ’ ಎಂದು ಬಂದುಬಿಟ್ಟರೆ ಅವನಿಗೆ ಬೆಲೆಯೇ ಇರುವುದಿಲ್ಲ. ಹಾಗಾಗಿ ಅವನು ಯಾವ್ಯಾವುದೋ ರೂಪದಲ್ಲಿ ಬರುತ್ತಾನೆ. ಅದನ್ನು ಕಾಣುವ ಕಣ್ಣು ನಮಗೆ ಬೇಕು ಅಷ್ಟೆ.

ಇದಕ್ಕೆ ಸಂಬಂಧಿಸಿದಂತೆ ಗಾಯಕ ವಿಜಯ ಪ್ರಕಾಶ್ ಹೇಳಿದ ಒಂದು ಕಥೆ ಯಾವಾಗಲೂ ನನಗೆ ನೆನಪಾಗುತ್ತಿರುತ್ತದೆ. ಆ ಕಥೆ ಹೀಗಿದೆ:
ಒಬ್ಬ ಮೀನುಗಾರನಿದ್ದ. ಅವನು ಮಹಾದೈವಭಕ್ತನೂ ಹೌದು. ದೇವರಿಗೆ ಪೂಜಿಸದೇ ಯಾವತ್ತೂ ಸಮುದ್ರಕ್ಕೆ ಇಳಿದವನಲ್ಲ. ತನಗೆ ಏನಾದರೂ ಅಪಾಯ ಆದರೆ ಖಂಡಿತ ದೇವರು ಕಾಪಾಡುತ್ತಾನೆ ಎಂಬ ನಂಬಿಕೆಯೂ ಇತ್ತು. ಹಾಗೆ ಪ್ರಾರ್ಥನೆ ಸಲ್ಲಿಸಿಯೇ ಒಂದು ದಿನ ಸಮುದ್ರಕ್ಕಿಳಿದ. ಸಮುದ್ರ ಮಧ್ಯದಲ್ಲಿದ್ದಾಗ ಬಿರುಗಾಳಿ ಬಂದು ದೋಣಿ ಮಗುಚಿತು. ಈಜುತ್ತಲೇ ಅವನು ಕಂಗಾಲಾಗಿ ‘ದೇವರೇ ನೀನೇ ಬಂದು ಕಾಪಾಡು’ ಎಂದು ಪ್ರಾರ್ಥಿಸಿಕೊಂಡ. ಸುಮಾರು ಹೊತ್ತಿನ ನಂತರ ಒಂದು ಮರದ ದಿಮ್ಮಿ ತೇಲಿಕೊಂಡು ಬಂತು. ಅವನು ಅದನ್ನೇನೂ ಹಿಡಿದುಕೊಳ್ಳಲಿಲ್ಲ. ದೇವರು ಬಂದು ತನ್ನನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಅವನಲ್ಲಿತ್ತು. ಪ್ರಾರ್ಥಿಸುತ್ತಲೇ ಕಳೆದ. ಈಜಿ ಈಜಿ ಕೈ ಸೋಲುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಒಂದು ಬೋಟ್‌ ದೂರದಲ್ಲಿ ಬರುತ್ತಿರುವುದು ಕಾಣಿಸಿತು. ಅದರತ್ತ ಹೋಗುವ ಪ್ರಯತ್ನ ಮಾಡಲಿಲ್ಲ. ಅವನಿಗಿನ್ನೂ ದೇವರು ಬಂದು ತನ್ನನ್ನು ಕಾಪಾಡುತ್ತಾನೆ ಎಂಬ ನಂಬಿಕೆ. ಸ್ವಲ್ಪ ಹೊತ್ತಿನ ನಂತರ ಇನ್ನೊಂದು ತೆಪ್ಪ ತೇಲಿಕೊಂಡು ಬಂತು. ಆಗಲೂ ಅವನು ಅದರಲ್ಲಿ ಹತ್ತಿಕೊಳ್ಳದೇ ಪ್ರಾರ್ಥಿಸುತ್ತಲೇ ಉಳಿದ. ಕೊನೆಗೆ ಕೈ ಸೋತು ನೀರಲ್ಲಿ ಮುಳುಗಿ ಸಾವನ್ನಪ್ಪಿದ.

ADVERTISEMENT

ಸತ್ತ ಮೇಲೆ ಸ್ವರ್ಗಕ್ಕೆ ಹೋದಾಗ ಮೀನುಗಾರನಿಗೆ ದೇವರು ಎದುರಾದ. ಅವನು ದೇವರಲ್ಲಿ ಕೇಳಿದ ಮೊದಲ ಪ್ರಶ್ನೆ ‘ದೇವರೇ, ನಾನು ನಿನ್ನನ್ನು ಜೀವನದುದ್ದಕ್ಕೂ ಪೂಜಿಸಿದೆ. ನನ್ನನ್ಯಾಕೆ ನೀನು ರಕ್ಷಿಸದೇ ಕೈಬಿಟ್ಟೆ?’ ದೇವರು ನಸುನಕ್ಕು ಕೇಳಿದ, ‘ನಾನ್ಯಾವಾಗ ನಿನ್ನ ಕೈಬಿಟ್ಟಿದ್ದೇನೆ?’ ಮೀನುಗಾರ ಇನ್ನಷ್ಟು ಕೋಪದಿಂದ ‘ಸಮುದ್ರದಲ್ಲಿ ಮುಳುಗುತ್ತ ಅಷ್ಟೊಂದು ಪ್ರಾರ್ಥಿಸಿಕೊಂಡರೂ ನೀನು ಬಂದು ನನ್ನನ್ನು ಕಾಪಾಡಲಿಲ್ಲ’ ಎಂದ. ದೇವರು ಅದೇ ನಗುಮುಖದಲ್ಲಿಯೇ ಉತ್ತರಿಸಿದ. ‘ಭಕ್ತಾ, ನಿನ್ನನ್ನು ಬದುಕಿಸಲೆಂದೇ ಮೊದಲು ಒಂದು ಮರದ ದಿಮ್ಮಿಯನ್ನು ಕಳಿಸಿದೆ. ನಂತರ ಒಂದು ಬೋಟ್‌ ಅನ್ನೂ ಕಳಿಸಿದೆ. ನಂತರ ತೆಪ್ಪ. ಯಾವುದನ್ನೂ ನೀನು ಬಳಸಿಕೊಳ್ಳಲಿಲ್ಲ. ಅವುಗಳಲ್ಲಿ ನನ್ನ ಸೂಚನೆಯನ್ನು ಅರಿಯದೇ ಹೋದೆ. ಹಾಗಾಗಿಯೇ ಸಾವನ್ನಪ್ಪಿದೆ’.

ದೇವರ ಸ್ವರೂಪದ ಬಗ್ಗೆ ಎಷ್ಟು ಅದ್ಭುತ ತಿಳಿವಳಿಕೆ ಕೊಡುತ್ತದೆ ಈ ಕಥೆ. ‘ಕಷ್ಟದಲ್ಲಿದ್ದಾಗ ಖುದ್ದು ನಾನೇ ಬಂದು ಕಾಪಾಡುತ್ತೇನೆ – ಎಂದು ಯಾವೊಬ್ಬನಿಗೂ ಅವನು ಕಾಂಟ್ರಾಕ್ಟ್ ಬರೆದುಕೊಟ್ಟಿದ್ದಿಲ್ಲ. ಪೂರ್ತಿ ನಂಬಿಕೆ ಇರಬೇಕು. ನಂಬದೆ ಕರೆದರೆ ಬರುವವನಲ್ಲ ಅವನು. ಅವನು ಯಾವ್ಯಾವುದೋ ರೂಪದಲ್ಲಿ ನಮಗೆ ಕಷ್ಟದಿಂದ ಹೊರಬರುವ ದಾರಿಯನ್ನು ತೆರೆಯುತ್ತಾನೆ. ಅವುಗಳನ್ನು ಗುರ್ತಿಸಿಕೊಂಡು ನಮ್ಮ ಸಾಮರ್ಥ್ಯದಿಂದಲೇ ಅಲ್ಲವೇ ಗೆದ್ದುಬರಬೇಕಾಗಿರುವುದು?

ಅನ್ನವೂ ದೇವರೇ
ಬಾಲ್ಯದಲ್ಲಿ ದೇವರ ಹೆಸರಿನಲ್ಲಿ ಹಲವು ಆಚರಣೆಗಳನ್ನು ಮಾಡುತ್ತಿರುತ್ತೇವೆ. ಆದರೆ ನಂತರ ನಾವು ಬೆಳೆಯುತ್ತ ಬಂದ ಹಾಗೆಯೇ ಆಚರಣೆಯ ಹಿಂದಿನ ಅರ್ಥಗಳೂ ಹೊಳೆಯುತ್ತ ಹೋಗುತ್ತವೆ. ಉದಾಹರಣೆಗೆ ಅನ್ನ ಯಾಕೆ ಕಣ್ಣಿಗೊತ್ತಿಕೊಳ್ಳುತ್ತೇವೆ? ಎಷ್ಟೋ ಜನ ಒಂದು ತುತ್ತು ಊಟಕ್ಕೂ ಗತಿಯಿಲ್ಲದೇ ಪರದಾಡುತ್ತಿರುತ್ತಾರೆ. ಅಂಥದ್ದರಲ್ಲಿ ದೇವರು ನಮಗೆ ಮೂರೂ ಹೊತ್ತು ಹೊಟ್ಟೆ ತುಂಬುವಷ್ಟು ಊಟ ಕೊಟ್ಟಿದ್ದಾನೆ. ಹಾಗಾಗಿ ಅನ್ನವನ್ನು ದೇವರು ಎಂದು ಹೇಳಿ, ದೇವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಕಣ್ಣಿಗೊತ್ತಿಕೊಂಡು ತಿನ್ನುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.