ADVERTISEMENT

New Film: ಬಾಲಿವುಡ್‌ನಲ್ಲಿ ಸೆಟ್ಟೇರಿದ ‘ಗೋಲ್‌ಮಾಲ್‌–5’

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
ಅಜಯ್ ದೇವಗನ್
ಅಜಯ್ ದೇವಗನ್   

2006 ರಲ್ಲಿ ತೆರೆಕಂಡ ‘ಗೋಲ್‌ಮಾಲ್‌’ ಸಿನಿಮಾ ಬಾಲಿವುಡ್‌ನಲ್ಲಿ ಸೂಪರ್‌ ಹಿಟ್‌ ಆಯಿತು. ಅಜಯ್‌ ದೇವಗನ್‌ ಮತ್ತು ರೋಹಿತ್‌ ಶೆಟ್ಟಿ ಜೋಡಿ ಈ ಸಿನಿಮಾ ಮೂಲಕ ಹೊಸ ಇತಿಹಾಸವನ್ನೇ ಬರೆದರು. ಈ ಶೀರ್ಷಿಕೆ ಅದೆಷ್ಟು ಜನಪ್ರಿಯವಾಯಿತೆಂದರೆ, ಇಲ್ಲಿತನಕ ಈ ಕಥೆಯ ಮುಂದುವರಿದ ಭಾಗವಾಗಿ ನಾಲ್ಕು ಸಿನಿಮಾಗಳು ತೆರೆಕಂಡಿವೆ. ಅದೇ ಜೋಡಿಯ ‘ಗೋಲ್‌ಮಾಲ್‌–5’ ಇತ್ತೀಚೆಗೆ ಮುಂಬೈನಲ್ಲಿ ಸೆಟ್ಟೇರಿದೆ. ಇದು ಕೂಡ ‘ಗೋಲ್‌ಮಾಲ್‌’ ಮೂಲ ಕಥಾ ಸರಣಿಯ ಮುಂದುವರಿದ ಭಾಗವಾಗಿದೆ.

ರೋಹಿತ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ‘ಗೋಲ್‌ಮಾಲ್‌’ನ ಇತರ ಪಾತ್ರಧಾರಿಗಳಾದ ಅರ್ಷಾದ್‌ ವಾರ್ಸಿ, ತುಷಾರ್‌ ಕಪೂರ್‌ ಮುಂತಾದವರು ನಟಿಸಲಿದ್ದಾರೆ. ಜತೆಗೆ ಕೆಲ ಹೊಸ ನಟರು ತಂಡವನ್ನು ಸೇರಿಕೊಂಡಿದ್ದಾರೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

ಬಹುಭಾಷಾ ನಟಿ ಪ್ರಿಯಾಮಣಿ ಅಜಯ್‌ ದೇವಗನ್‌ಗೆ ನಾಯಕಿಯಾಗಲಿದ್ದಾರೆ ಎಂಬ ವದಂತಿಯಿದೆ. ‘ಗೋಲ್‌ಮಾಲ್‌’ ಚಿತ್ರದಲ್ಲಿದ್ದ ಶರ್ಮನ್‌ ಜೋಶಿ ಕೂಡ 20 ವರ್ಷಗಳ ಬಳಿಕ ಮತ್ತೆ ಈ ತಂಡ ಸೇರಿಕೊಳ್ಳುತ್ತಿದ್ದಾರೆ. ಅಕ್ಷಯ್‌ ಕುಮಾರ್‌ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ADVERTISEMENT

‘ಗೋಲ್‌ಮಾಲ್‌’ನಲ್ಲಿ ಗೋಪಾಲ್‌, ಲಕ್ಕಿ, ಮಾಧವ್‌, ಲಕ್ಷ್ಮಣ್‌ ಎಂಬ ನಾಲ್ವರು ಸ್ನೇಹಿತರ ಹಾಸ್ಯಮಯ ಕಥೆಯಿತ್ತು. ಉಳಿದ ಭಾಗಗಳಲ್ಲಿಯೂ ಈ ಪಾತ್ರಧಾರಿಗಳ ಕಥೆಯೇ ಮುಂದುವರಿದಿತ್ತು. ಈ ಚಿತ್ರದ ನಾಲ್ಕು ಭಾಗಗಳಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊನೆಯದಾಗಿ 2022ರಲ್ಲಿ ‘ಸರ್ಕಸ್‌’ ಎಂಬ ಶೀರ್ಷಿಕೆಯಲ್ಲಿ ಈ ಕಥೆಯ ನಾಲ್ಕನೆ ಭಾಗ ತೆರೆಕಂಡಿತ್ತು.

ರೋಹಿತ್‌ ಶೆಟ್ಟಿ–ಅಜಯ್‌ ದೇವಗನ್‌ ಅವರ ಸಿನಿಮಾಗಳು ಯಶಸ್ವಿಯಾಗಿವೆ. ಹೀಗಾಗಿ ಈ ಜೋಡಿ ಮೇಲೆ ಭರವಸೆ ಹೆಚ್ಚಿದೆ. ರೋಹಿತ್‌ ಅವರ ಹಿಂದಿನ ಸಿನಿಮಾ 2024ರಲ್ಲಿ ತೆರೆಕಂಡ ‘ಸಿಂಗಂ ಅಗೈನ್‌’ನಲ್ಲಿಯೂ ಅಜಯ್‌ ಅವರೇ ನಾಯಕನಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.