ADVERTISEMENT

ಗೂಸಿ ಗ್ಯಾಂಗ್ ಸಖತ್ ಸಾಂಗ್!

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 20:13 IST
Last Updated 21 ಜೂನ್ 2018, 20:13 IST
ಅನೂಷಾ ರೈ, ಅಜಯ್ ಕಾರ್ತಿಕ್
ಅನೂಷಾ ರೈ, ಅಜಯ್ ಕಾರ್ತಿಕ್   

‘ಗೂಸಿ ಗ್ಯಾಂಗ್‌’ ಹಾಡುಗಳನ್ನು ಬಿಡುಗಡೆ ಮಾಡಲು ಹಂಸಲೇಖ ಹಾಜರಿದ್ದರು. ಅವರಿಗೆ ಜಗ್ಗೇಶ್‌ ಸಹ ಸಾಥ್ ನೀಡಿದರು. ಟ್ರೈಲರ್ ಮತ್ತು ಎರಡು ಹಾಡುಗಳನ್ನು ತೋರಿಸಿದ ನಂತರ ಮೈಕ್ ಜಗ್ಗೇಶ್ ಅವರ ಕೈಸೇರಿತು. ‘ನಮ್ಮ ಕಾಲದಲ್ಲಿ ಸಿನಿಮಾಗಳನ್ನು ಕುಟುಂಬ ಸಮೇತರಾಗಿ ಬಂದು ನೋಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಇಪ್ಪತ್ನಾಲ್ಕರಿಂದ ಅರವತ್ತು ವರ್ಷ ವಯಸ್ಸಿನೊಳಗಿನವರು ಮಾತ್ರವೇ ಸಿನಿಮಾ ನೋಡಲು ಬರುತ್ತಿದ್ದಾರೆ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಿನಿಮಾ ಮಾಡುವುದಷ್ಟೇ ಅಲ್ಲ, ಪ್ರಚಾರವನ್ನು ಮಾಡಬೇಕಾಗಿದೆ’ ಎಂದರು.

‘ನನಗೆ ಕನ್ನಡ ಚಿತ್ರರಂಗ ಎಲ್ಲವನ್ನೂ ಕೊಟ್ಟಿದೆ. ನನ್ನ ಹಾಗೆಯೇ ಇಂದು ಬರುತ್ತಿರುವ ಹೊಸ ಪ್ರತಿಭಾವಂತರನ್ನೂ ಜನರು ಹರಸಲಿ ಎಂದು ಕೇಳಿಕೊಳ್ಳುತ್ತೇನೆ. ಕನ್ನಡ ಚಿತ್ರರಂಗ ಈಗ ಒಳ್ಳೆಯ ಸ್ಥಿತಿಯಲ್ಲಿದೆ’ ಎಂದೂ ಅವರು ಹೇಳಿದರು.

ನಂತರ ಮಾತಿಗಿಳಿದ ಹಂಸಲೇಖ ಅವರು ಜಗ್ಗೇಶ್ ಅವರನ್ನು ಮುಕ್ತವಾಗಿ ಪ್ರಶಂಸಿಸಿದರು. ‘ಕಲಾವಿದರಿಗೆ ಬದ್ಧತೆ ಇದ್ದರೆ ಕಳೆ ತುಂಬುತ್ತದೆ. ಕಲೆಗೆ ಬೆಲೆ ಬರುತ್ತದೆ. ಇವೆಲ್ಲವೂ ಪ್ರೀತಿಯಿಂದ ಮಾತ್ರ ಪಡೆಯಲು ಸಾಧ್ಯ. ನಾವು ಸೆನ್ಸ್ ಮೂಲಕ ಕೆಲಸ ಮಾಡುತ್ತಿದ್ದೆವು. ಈಗಿನ ಹುಡುಗರು ಲೆನ್ಸ್‌ ಮೂಲಕ ಕೆಲಸ ಮಾಡುತ್ತಿದ್ದಾರೆ‍’ ಎಂದು ತಮಾಷೆಯಾಗಿಯೇ ಹೇಳಿದ ಅವರು ‘ಕುಡುಕರ ಹಾಡುಗಳು ಇಂದಿನ ಕನ್ನಡ ಚಿತ್ರಗಳಲ್ಲಿ ಕಡ್ಡಾಯ ಎನ್ನುವ ಹಾಗೆ ಆಗಿದೆ. ಇಲ್ಲಿರುವಷ್ಟು ಬಾರ್ ಹಾಡುಗಳು ಭಾರತದ ಬೇರೆ ಯಾವ ಚಿತ್ರರಂಗದಲ್ಲಿಯೂ ಇಲ್ಲ’ ಎಂದು ಕೊಂಚ ಬೇಸರವನ್ನೂ ವ್ಯಕ್ತಪಡಿಸಿದರು.

ADVERTISEMENT

ಆರವ್ ರುಶಿಕ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

‘ಇದು ಥ್ರಿಲ್ಲರ್ ಕತೆಯಾಗಿದ್ದು, ನಿಘಂಟಿನಲ್ಲಿ ಇರುವ ಪದವನ್ನು ಶೀರ್ಷಿಕೆಯಾಗಿ ಬಳಸಲಾಗಿದೆ. ಅವರನ್ನು ಗೂಸಿ ಹುಡುಗರು ಅಂತ ಯಾಕೆ ಕರೆಯುತ್ತಾರೆ ಅಂತ ತಿಳಿಯಲು ಚಿತ್ರ ನೋಡಿ’ ಎಂದರು ಚಿತ್ರಕತೆ, ನಿರ್ದೇಶನ ಮಾಡಿರುವ ರಾಜುದೇವಸಂದ್ರ.

ಕೆ.ಶಿವಕುಮಾರ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಚಿಕ್ಕ ವಯಸ್ಸಿನಿಂದಲೂ ಅಭಿನಯದಲ್ಲಿ ಆಸಕ್ತಿ ಇತ್ತು. ನನ್ನ ಆಸೆಗೆ ಅಪ್ಪ ಚಿತ್ರ ಮಾಡಿದ್ದಾರೆ. ನಿರ್ದೇಶಕರು ಈ ಚಿತ್ರದ ಹೃದಯ ಆಗಿದ್ದರೆ, ಪ್ರೇಕ್ಷಕರು ಉಸಿರಾಟ’ ಎಂದು ಬಣ್ಣಿಸಿದರು ನಾಯಕನಟ ಅಜಯ್‍ಕಾರ್ತಿಕ್.

ನಾಯಕಿಯರಾದ ಅನುಷಾ ರೈ, ಮೋನಿಕಾ, ಸೋನು ಪಾಟೀಲ್, ಖಳನಾಯಕ ಅಪ್ಪುವೆಂಕಟೇಶ್‍ಗೆ ಮಾತನಾಡಲು ಅವಕಾಶ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.