ADVERTISEMENT

ಕೊರೊನಾ ಕಾರಣದಿಂದ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 6:05 IST
Last Updated 6 ಜನವರಿ 2021, 6:05 IST
ಗ್ರ್ಯಾಮಿ
ಗ್ರ್ಯಾಮಿ   

ಕೊರೊನಾ ಸೋಂಕು ಎಲ್ಲೆಡೆ ಪುನಃ ಹರಡುತ್ತಿರುವ ಕಾರಣ 2021ರ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಕ್ಕೆ ಹಾಕಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜನವರಿಯಲ್ಲಿ ಸಮಾರಂಭವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ರೆಕಾರ್ಡಿಂಗ್ ಅಕಾಡೆಮಿ ತಿಳಿಸಿದೆ. ಮೊದಲು ಜನವರಿ 31ಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು, ಆದರೆ ಈ ದಿನಾಂಕ ಮುಂದಕ್ಕೆ ಹಾಕಿ ಮಾರ್ಚ್ 14ಕ್ಕೆ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅನೇಕ ವರ್ಷಗಳು ಲಾಸ್ ಎಂಜಲೀಸ್‌ನ ಸ್ಟ್ಯಾಪಲ್ಸ್ ಸೆಂಟರ್‌ನಲ್ಲಿ ಸಮಾರಂಭ ನಡೆಯುತ್ತಿತ್ತು, 2021ರ ಕಾರ್ಯಕ್ರಮವನ್ನು ಅಲ್ಲಿಯೇ ನಡೆಸಲು ಆಯೋಜಿಸಲಾಗಿತ್ತು. ಆದರೆ ಲಾಸ್‌ ಎಂಜಲೀಸ್‌ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಎನ್‌ಪಿಆರ್ ವರದಿ ಮಾಡಿದೆ.

ಗ್ರ್ಯಾಮಿ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ಮಾಪಕ ಬೆನ್‌ ವಿನ್‌ಸ್ಟನ್‌ ಮಂಗಳವಾರ ಪತ್ರಿಕೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ‘ಆರೋಗ್ಯ ತಜ್ಞರೊಂದಿಗಿನ ಮಾತುಕತೆಯ ನಂತರ ಕಾರ್ಯಕ್ರಮ ಆಯೋಜಕರು ಹಾಗೂ ಅತಿಥಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು 63ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 14, 2021ಕ್ಕೆ ಮುಂದಕ್ಕೆ ಹಾಕಲಾಗಿದೆ. ಲಾಸ್ ಎಂಜಲೀಸ್‌ನಲ್ಲಿ ಕೋವಿಡ್‌ ಪರಿಸ್ಥಿತಿ ಹದಗೆಟ್ಟಿದ್ದು ಐಸಿಯುಗಳು ಭರ್ತಿಯಾಗುತ್ತಿವೆ. ನಮಗೆ ಎಲ್ಲರ ಆರೋಗ್ಯ ಸುರಕ್ಷಿತವಾಗಿರುವುದು ಮುಖ್ಯ, ಆ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.