ADVERTISEMENT

ಚಲನಚಿತ್ರ ಕಾರ್ಮಿಕರ ಮನೆಗೆ ದಿನಸಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 19:45 IST
Last Updated 29 ಮಾರ್ಚ್ 2020, 19:45 IST
ನಟ ನಿಖಿಲ್ ಕುಮಾರಸ್ವಾಮಿ
ನಟ ನಿಖಿಲ್ ಕುಮಾರಸ್ವಾಮಿ   

ಮಹಾಮಾರಿ ಕೊರೊನಾದಿಂದ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಂಡು, ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ತಕ್ಷಣದ ನೆರವು ನೀಡಲು ಚಲನಚಿತ್ರ ಕಾರ್ಮಿಕರ ಒಕ್ಕೂಟ ಹೊಸ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.

ದಿನ ಬಳಕೆಯ ಅಗತ್ಯ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ, ಕಾರ್ಮಿಕರ ಮೊಬೈಲ್‌ಗಳಿಗೆ ಒಟಿಪಿ ರವಾನಿಸುವ ಮೂಲಕ ಮನೆಮನೆಗೆ ದಿನಸಿ ತಲುಪಿಸುವ ವ್ಯವಸ್ಥೆ ಮಾಡಲು ಒಕ್ಕೂಟ ತೀರ್ಮಾನಿಸಿದೆ.

ಲೈಟ್ಸ್ ಬಾಯ್ಸ್, ಯುನಿಟ್ ಬಾಯ್ಸ್, ಪ್ರೊಡಕ್ಷನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಮೇಕಪ್ ಮೆನ್ ಹೀಗೆ ವಿವಿಧ ವಿಭಾಗಗಳಿಂದ ಚಲನಚಿತ್ರರಂಗ ಮತ್ತು ಕಿರುತೆರೆಯಲ್ಲಿ ಜೂನಿಯರ್‌ ಆರ್ಟಿಸ್ಟ್‌ಗಳು ಸೇರಿ ಸುಮಾರು ಐದು ಸಾವಿರ ದಿನಗೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇದರಲ್ಲಿ ದಿನಕ್ಕೆ ₹ 400ರಿಂದ ₹ 2 ಸಾವಿರವರೆಗೆ ದುಡಿಯುವವರಿದ್ದಾರೆ. ದಿನಗೂಲಿ ಕೆಲಸಗಳನ್ನು ನೆಚ್ಚಿಕೊಂಡು ದಿನದ ಹೊಟ್ಟೆ ಹೊರೆಯುತ್ತಿದ್ದ ಕಾರ್ಮಿಕರು ದುಡಿಮೆಗೆ ಹೋಗದಂತಾಗಿ ಅಕ್ಷರಶಃ ನಲುಗಿ ಹೋಗಿದ್ದಾರೆ.

ADVERTISEMENT

‘ರಿಲಯನ್ಸ್‌ ಕಂಪನಿಯ ಜತೆ ಮಾತುಕತೆ ನಡೆಸುತ್ತಿದ್ದೇವೆ. ರಿಲಯನ್ಸ್‌ ಸಂಸ್ಥೆಯು ನಗರದಲ್ಲಿ ದಿನಬಳಕೆ ವಸ್ತುಗಳ ಮಾರಾಟದ ಸುಮಾರು 60 ಮಳಿಗೆಗಳನ್ನು ಹೊಂದಿದೆ. ರಿಲಯನ್ಸ್‌ ಸಂಸ್ಥೆ ಮತ್ತು ಸರ್ಕಾರ ಮನಸು ಮಾಡಿದರೆ ಕಾರ್ಮಿಕರಿಗೆ ಅಗತ್ಯ ವಸ್ತುಗಳು ಒಂದೆರಡು ದಿನಗಳಲ್ಲಿ ಲಭಿಸಲಿವೆ’ ಎಂದು ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಹಾಗೂ ನಟ ಅಶೋಕ್‌ ‘ಪ್ರಜಾಪ್ಲಸ್‌’ಗೆ ತಿಳಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರು ವುದರಿಂದ ಮತ್ತು ಮನೆಯಿಂದ ಹೊರಗೆ ಕಾಲಿಡದಂತಾಗಿರುವುದರಿಂದ ಸ್ಟುಡಿಯೊಗಳಲ್ಲೂ ಕೆಲಸ ಸ್ಥಗಿತಗೊಂಡಿದೆ. ಎಡಿಟಿಂಗ್‌, ಸಿ.ಜಿ. ಕೆಲಸ, ಡಬ್ಬಿಂಗ್‌ ಸೇರಿದಂತೆ ಎಲ್ಲ ರೀತಿಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಹುತೇಕ ನಿಂತಿವೆ. ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಎಲ್ಲ ಕಾರ್ಮಿಕರಿಗೂ ನೆರವಿನ ಅಗತ್ಯವಿದೆ ಎನ್ನುತ್ತಾರೆ ಅವರು.

ನಟ ನಿಖಿಲ್‌ ಕುಮಾರಸ್ವಾಮಿ ಅವರು ಕಾರ್ಮಿಕರ ತುರ್ತು ನೆರವಿಗಾಗಿ ಒಟ್ಟು ₹ 37 ಲಕ್ಷ ನೀಡಿದ್ದಾರೆ. ಸುಮಾರು 3700 ಕಾರ್ಮಿಕರ ಬ್ಯಾಂಕ್‌ ಖಾತೆ ವಿವರವನ್ನು ಅವರಿಗೆ ಒದಗಿಸಿದ್ದೇವೆ. ನಿಖಿಲ್‌ ನೀಡಿರುವ ಹಣದಲ್ಲಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ ತಲಾ ಒಂದು ಸಾವಿರ ರೂಪಾಯಿಯಂತೆ ನೇರ ನಗದು ಜಮಾ ಆಗಲಿದೆ. ಇದೇ ರೀತಿ ಇನ್ನಷ್ಟು ಮಂದಿ ನೆರವು ನೀಡಲು ಮುಂದಾದರೆ ನಮ್ಮ ಕಾರ್ಮಿಕರನ್ನು ಕಷ್ಟದ ಪರಿಸ್ಥಿತಿಯಿಂದ ಪಾರು ಮಾಡಬಹುದು ಎನ್ನುತ್ತಾರೆ ಅಶೋಕ್‌.

***

ಸದ್ಯದ ಪರಿಸ್ಥಿತಿಯಲ್ಲಿ ಕಚೇರಿ ಬಾಗಿಲನ್ನೇ ತೆರೆದಿಲ್ಲ. ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವು ನೀಡುವ ವಿಚಾರದಲ್ಲಿ ನಾನೊಬ್ಬನೇ ನಿರ್ಧರಿಸಲಾಗದು. ಮಂಡಳಿಯ ಬಹಳಷ್ಟು ಸದಸ್ಯರು ತಮಗೂ ಸಹಾಯ ಬೇಕೆಂದು ಕೇಳಿದ್ದಾರೆ. ಲಾಕ್‌ಡೌನ್‌ ತೆರವಾದ ನಂತರ ಸದಸ್ಯರೆಲ್ಲರೂ ಸಭೆ ಸೇರಿ ತೀರ್ಮಾನ ಪ್ರಕಟಿಸುತ್ತೇವೆ.

– ಜೈರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.