ADVERTISEMENT

ನಟ ಸೃಜನ್‌ ಲೋಕೇಶ್‌ ಅಭಿನಯದ ‘ಜಿಎಸ್‌ಟಿ’ ಚಿತ್ರ ನ.28ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 23:30 IST
Last Updated 11 ನವೆಂಬರ್ 2025, 23:30 IST
ರಜನಿ, ಸೃಜನ್‌ 
ರಜನಿ, ಸೃಜನ್‌    

ನಟ ಸೃಜನ್‌ ಲೋಕೇಶ್‌ ನಿರ್ದೇಶನದ ಚೊಚ್ಚಲ ಸಿನಿಮಾ ‘ಜಿಎಸ್‌ಟಿ’ ನ.28ರಂದು ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಘೋಸ್ಟ್ಸ್‌ ಇನ್‌ ಟ್ರಬಲ್‌’ ಎನ್ನುವ ಅಡಿಬರಹ ನೀಡಲಾಗಿದೆ. 

ಸುಮಾರು ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್‌ನಡಿ ಸಂದೇಶ್‌ ನಾಗರಾಜ್‌ ನಿರ್ಮಾಣ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಸೃಜನ್‌ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣಪತ್ರ ನೀಡಿದೆ. ಚಿತ್ರದ ನಿರ್ಮಾಣದ ಜೊತೆಗೆ ನಿರ್ಮಾಪಕ ಸಂದೇಶ್‌ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 

ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೃಜನ್‌, ‘ಕನಸಲ್ಲಿ ಬಂದ ಕಥೆಗೆ ಸಿನಿಮಾ ರೂಪ ನೀಡಿದ್ದೇನೆ. ಪ್ರಾಮಾಣಿಕವಾಗಿ, ನಿಷ್ಠೆಯಿಂದ ಈ ಚಿತ್ರ ಮಾಡಿದ್ದೇನೆ. ಜನರನ್ನು ನಗಿಸಬೇಕು ಎನ್ನುವ ಉದ್ದೇಶದಿಂದಲೇ ಈ ಚಿತ್ರ ಹೆಣೆದಿದ್ದೇನೆ. ಮೊದಲ ಬಾರಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದೆ. ಇದು ಎಷ್ಟು ಕಷ್ಟ ಎನ್ನುವುದನ್ನು ಅರಿತೆ. ನಟನೆಯ ಜೊತೆಗೆ ನಿರ್ದೇಶನ ಮಾಡುವುದು ಸವಾಲಿನ ವಿಷಯವೇ. ನನ್ನದೇ ಕಾನ್ಸೆಪ್ಟ್‌ ಆಗಿರುವ ಕಾರಣ ನಾನೇ ನಿರ್ದೇಶನ ಮಾಡುವುದಕ್ಕೆ ಮುಂದಾದೆ. ಈ ಸಿನಿಮಾದಲ್ಲಿ ಹೀರೊಯಿಸಂ ಇಲ್ಲ. ಜನರನ್ನು ನಗಿಸುವುದಷ್ಟೇ ನನಗೆ ಗೊತ್ತಿದೆ. ಪ್ರೇಕ್ಷಕರಿಗೆ ಖಂಡಿತವಾಗಿಯೂ ಮನರಂಜನೆ ನೀಡುತ್ತೇನೆ. ಶೀರ್ಷಿಕೆಗೆ ಹಲವು ಆಯ್ಕೆಗಳಿದ್ದವು. ಆದರೆ ಈಗ ಜಿಎಸ್‌ಟಿ ಎನ್ನುವುದು ಪ್ರತಿ ಭಾರತೀಯನಿಗೂ ಗೊತ್ತು. ಹೀಗಾಗಿ ಈ ಶೀರ್ಷಿಕೆ ಅಂತಿಮಗೊಳಿಸಿದೆವು. ಚಿತ್ರವು 2 ಗಂಟೆ 10 ನಿಮಿಷ ಅವಧಿಯದ್ದಾಗಿದ್ದು, ಇದರಲ್ಲಿ ಸುಮಾರು 70 ನಿಮಿಷ ರೋಟೊ ಇದೆ, ಅಂದರೆ ದೆವ್ವಗಳು ಸೇಪಿಯಾ ಬಣ್ಣದಲ್ಲಿ ಇರುತ್ತವೆ. ಸುಮಾರು 40ಕ್ಕೂ ಅಧಿಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದು, 40 ನಿಮಿಷದ ಕ್ಲೈಮ್ಯಾಕ್ಸ್‌ ಇದೆ. ಈ ಸಿನಿಮಾ ಮೂಲಕ ಲೋಕೇಶ್‌ ಮ್ಯೂಸಿಕ್‌ ಆರಂಭಿಸಿದ್ದೇನೆ’ ಎಂದರು.  

ADVERTISEMENT

ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಅಭಿನಯಿಸಿದ್ದಾರೆ. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೃಜನ್ ಲೋಕೇಶ್‌ಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೋಭರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.